ಢಾಕಾ: ಭಾರತ ಮತ್ತು ಬಾಂಗ್ಲಾದೇಶ ವನಿತೆಯರ ನಡುವಿನ ಏಕದಿನ ಸರಣಿಯು ವಿವಾದದೊಂದಿಗೆ ಅಂತ್ಯವಾಗಿದೆ. ಸರಣಿಯ ಕೊನೆಯ ಪಂದ್ಯವು ಟೈನಲ್ಲಿ ಅಂತ್ಯವಾಗಿದ್ದು, 1-1 ಅಂತರದಿಂದ ಸರಣಿ ಸಮಬಲಗೊಂಡಿದೆ. ಆದರೆ ಪಂದ್ಯದ ವೇಳೆ ಅಂಪೈರ್ ಗಳ ವಿರುದ್ಧ ಭಾರತೀಯ ನಾಯಕಿ ಹರ್ಮನ್ ಕೌರ್ ಕೂಗಾಡಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
ಹರ್ಮನ್ ಬ್ಯಾಟ್ ಮಾಡುವ ವೇಳೆ ಸ್ವೀಪ್ ಮಾಡಿದರು. ಚೆಂಡು ಕಾಲಿಗೆ ಬಡಿದಾಗ ಬಾಂಗ್ಲಾ ಬೌಲರ್ ಅಪೀಲ್ ಮಾಡಿದರು. ಈ ವೇಳೆ ಅಂಪೈರ್ ಔಟ್ ನೀಡಿದರು. ಇದರಿಂದ ಕೆರಳಿದ ಹರ್ಮನ್, ಬ್ಯಾಟಿಂದ ಸ್ಟಂಪ್ ಗೆ ಬಾರಿಸಿ ಕೋಪ ತೋರಿಸಿದರು. ಇದಾದ ಬಳಿಕವು ಪ್ರಶಸ್ತಿ ಸಮಾರಂಭದಲ್ಲಿ ಅಂಪೈರಿಂಗ್ ನಿರ್ಧಾರಗಳ ಬಗ್ಗೆ ಹರ್ಮನ್ ಪ್ರತಿರೋಧ ತೋರಿದ್ದರು.
ಇದರ ವಿರುದ್ಧ ಬಾಂಗ್ಲಾ ಆಟಗಾರರು ತಿರುಗಿ ಬಿದ್ದಿದ್ದಾರೆ. ವರದಿಯ ಪ್ರಕಾರ, ಸರಣಿ ಸಮಬಲವಾದ ಕಾರಣ ಉಭಯ ತಂಡದ ಆಟಗಾರರು ಫೋಟೊ ಸೆಶನ್ ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಹರ್ಮನ್ ಬಾಂಗ್ಲಾದೇಶ ತಂಡದ ಆಟಗಾರರು ಅಂಪೈರ್ ಗಳ ಜತೆ ಫೋಟೊ ತೆಗೆಸಿಕೊಳ್ಳಿ ಎಂದಿದ್ದರು. ಇದರಿಂದ ಅವಮಾನಿತಳಾದ ಬಾಂಗ್ಲಾ ನಾಯಕಿ ನಿಗರ್ ತನ್ನ ಆಟಗಾರರೊಂದಿಗೆ ಸಮಾರಂಭವನ್ನು ತೊರೆದಳು ಎಂದು ವರದಿಯಾಗಿದೆ.
ಇದನ್ನೂ ಓದಿ:ನೀಲಿ ಹಕ್ಕಿಗೆ ಗುಡ್ ಬೈ ಹೇಳಿದ ಮಸ್ಕ್; ಟ್ವಿಟರ್ ಗೆ ಹೊಸ ರೂಪ ಕೊಡಲು ಮುಂದಾದ ಉದ್ಯಮಿ
ಇದರ ಬಗ್ಗೆ ಮಾತನಾಡಿದ ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ, “ಇದು ಅವಳ ಸಮಸ್ಯೆ. ಆದರೆ ಬಾಂಗ್ಲಾದೇಶದ ಆಟಗಾರರೊಂದಿಗೆ ವ್ಯವಹರಿಸುವಾಗ ಅವಳು ಸರಿಯಾದ ನಡವಳಿಕೆಯನ್ನು ತೋರಿಸಬೇಕಿತ್ತು. ಫೋಟೊ ಸೆಶನ್ ಗಾಗಿ ಅಲ್ಲಿರಲು ನನಗೆ ಸರಿಯಾಗಲಿಲ್ಲ, ಅದಕ್ಕಾಗಿ ನನ್ನ ಆಟಗಾರರೊಂದಿಗೆ ಹೊರಟೆ. ಕ್ರಿಕೆಟ್ ಗೌರವ ಮತ್ತು ಶಿಸ್ತಿನ ಆಟವಾಗಿದೆ” ಎಂದು ಹೇಳಿದರು.
ಅಂಪೈರಿಂಗ್ ಕಳಪೆ ಎಂದು ಒಪ್ಪಿಕೊಳ್ಳಲು ಸಹ ಅವರು ನಿರಾಕರಿಸಿದರು. “ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನ ಅನುಭವಿ ಅಂಪೈರ್‌ಗಳಾಗಿದ್ದರು. ನಾವು ಇಷ್ಟಪಟ್ಟರೂ ಇಲ್ಲದಿದ್ದರೂ ಅವರ ನಿರ್ಧಾರಗಳು ಅಂತಿಮವಾಗಿರುತ್ತವೆ” ಎಂದು ಅವರು ಹೇಳಿದರು.