ಲೌಡರ್‌ಹಿಲ್ (ಫೋÉàರಿಡಾ): ತಮಿಮ್ ಇಕ್ಬಾಲ್ ಅವರ ಬ್ಯಾಟಿಂಗ್ ಸಾಹಸ, ನಾಯಕ ಶಕಿಬ್ ಅಲ್ ಹಸನ್ ಅವರ ಆಲ್‌ರೌಂಡ್ ಶೋ ನೆರವಿನಿಂದ ವೆಸ್ಟ್ ಇಂಡೀಸ್ ಎದುರಿನ ದ್ವಿತೀಯ ಟಿ20 ಪಂದ್ಯವನ್ನು 12 ರನ್ನುಗಳಿಂದ ಗೆದ್ದ ಬಾಂಗ್ಲಾದೇಶ ಸರಣಿಯನ್ನು ಸಮಬಲಕ್ಕೆ ತಂದಿದೆ.
ಶನಿವಾರ ಫ್ಲೋರಿಡಾದ “ಸೆಂಟ್ರಲ್ ಬೊವಾರ್ಡ್ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 5 ವಿಕೆಟಿಗೆ 171 ರನ್ ಪೇರಿಸಿ ಸವಾಲೊಡ್ಡಿದರೆ, ವೆಸ್ಟ್ ಇಂಡೀಸ್ 9 ವಿಕೆಟಿಗೆ 159 ರನ್ ಮಾಡಿ ಶರಣಾಯಿತು.
ಬಾಂಗ್ಲಾ ಸರದಿಯಲ್ಲಿ ಆರಂಭಕಾರ ತಮಿಮ್ ಇಕ್ಬಾಲ್ ಮತ್ತು ಶಕಿಬ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮಿಮ್ 44 ಎಸೆತಗಳಿಂದ 74 ರನ್ ಸಿಡಿಸಿದರೆ (6 ಬೌಂಡರಿ, 4 ಸಿಕ್ಸರ್), ಶಕಿಬ್ 38 ಎಸೆತ ಎದುರಿಸಿ 60 ರನ್ ಬಾರಿಸಿದರು (9 ಬೌಂಡರಿ, 1 ಸಿಕ್ಸರ್). ಇವರಿಬ್ಬರ 4ನೇ ವಿಕೆಟ್ ಜತೆಯಾಟದಲ್ಲಿ 90 ರನ್ ಹರಿದು ಬಂತು. ಬೌಲಿಂಗಿನಲ್ಲೂ ಮಿಂಚಿದ ಶಕಿಬ್ 19 ರನ್ನಿತ್ತು 2 ವಿಕೆಟ್ ಕಿತ್ತರು. ಪಂದ್ಯಶ್ರೇಷ್ಠ ಪ್ರಶಸ್ತಿ ತಮಿಮ್ ಇಕ್ಬಾಲ್ ಪಾಲಾಯಿತು.
ವೆಸ್ಟ್ ಇಂಡೀಸ್ ಪರ ಓಪನರ್ ಆ್ಯಂಡ್ರೆ ಫ್ಲೆಚರ್ ಮತ್ತು ರಿಕಾರ್ಡೊ ಪೊವೆಲ್ ತಲಾ 43 ರನ್ ಹೊಡೆದರು. ಮುಸ್ತಫಿಜುರ್ ರೆಹಮಾನ್ ಮತ್ತು ನಜ್ಮುಲ್ ಇಸ್ಲಾಮ್ 3 ವಿಕೆಟ್ ಕಿತ್ತು ಕೆರಿಬಿಯನ್ನರಿಗೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-20 ಓವರ್‌ಗಳಲ್ಲಿ 5 ವಿಕೆಟಿಗೆ 171 (ತಮಿಮ್ 74, ಶಕಿಬ್ 60, ನರ್ಸ್ 25ಕ್ಕೆ 2, ಪೌಲ್ 39ಕ್ಕೆ 2). ವೆಸ್ಟ್ ಇಂಡೀಸ್-20 ಓವರ್‌ಗಳಲ್ಲಿ 9 ವಿಕೆಟಿಗೆ 159 (ಫ್ಲೆಚರ್ 43, ಪೊವೆಲ್ 43, ನಜ್ಮುಲ್ 28ಕ್ಕೆ 3, ಮುಸ್ತಫಿಜುರ್ 50ಕ್ಕೆ 3, ಶಕಿಬ್ 19ಕ್ಕೆ 2). ಪಂದ್ಯಶ್ರೇಷ್ಠ: ತಮಿಮ್ ಇಕ್ಬಾಲ್.