ನವದೆಹಲಿ: ದೇಶಾದ್ಯಂತ ಸರ್ಕಾರಿ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನೂರಾರು ಜನರ ಪ್ರಾಣ ಹಾನಿಗೆ ಕಾರಣವಾಗಿದ್ದು, ಏತನ್ಮಧ್ಯೆ ಕ್ಷಿಪ್ರ ಸೇನಾ ಕ್ರಾಂತಿಯ ಪರಿಣಾಮ ಸೋಮವಾರ (ಆಗಸ್ಟ್ 05) ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶವನ್ನು ತೊರೆದಿರುವುದಾಗಿ ವರದಿ ತಿಳಿಸಿದೆ.
ಭಾರತದಲ್ಲಿ ಹಸೀನಾಗೆ ಆಶ್ರಯ:
ಶೇಖ್ ಹಸೀನಾ ಮತ್ತು ಆಕೆಯ ಸಹೋದರಿ ಬಾಂಗ್ಲಾದೇಶದ ಮಿಲಿಟರಿ ವಿಮಾನದ ಮೂಲಕ ಭಾರತದತ್ತ ತೆರಳಿರುವುದಾಗಿ ವರದಿ ವಿವರಿಸಿದೆ. ಏರ್ ಲೈನ್ ಟ್ರ್ಯಾಕರ್ ಫ್ಲೈಟ್ ರಾಡಾರ್ ಫೂಟೇಜ್ ನಲ್ಲಿ ಬಾಂಗ್ಲಾ ಸೇನೆಯ Lockheed C-130J ಹರ್ಕ್ಯೂಲಸ್ ಭಾರತದತ್ತ ಪ್ರಯಾಣಿಸುತ್ತಿದ್ದು, ಜಾರ್ಖಂಡ್ ನಲ್ಲಿ ಹಾರಾಟ ನಡೆಸುತ್ತಿರುವುದು ಸೆರೆಯಾಗಿದೆ ಎಂದು ವರದಿ ವಿವರಿಸಿದೆ.
ಈ ಮೊದಲು ಕೆಲವು ಮಾಧ್ಯಮಗಳಲ್ಲಿ, ಶೇಖ್ ಹಸೀನಾ ಪಶ್ಚಿಮಬಂಗಾಳದತ್ತ ವಿಮಾನದಲ್ಲಿ ತೆರಳಿರುವುದಾಗಿ ತಿಳಿಸಿತ್ತು. ಆದರೆ ಬಾಂಗ್ಲಾ ಮಿಲಿಟರಿ ವಿಮಾನ ಬಂಗಾಳ ಹಾದು ಹೋಗಿರುವುದು ಏರ್ ಲೈನ್ ಡಾಟಾದಲ್ಲಿರುವುದಾಗಿ ವರದಿ ಹೇಳಿದೆ.
2009ರಿಂದ ಬಾಂಗ್ಲಾದೇಶದ ಚುಕ್ಕಾಣಿ ಹಿಡಿದಿರುವ ಶೇಖ್ ಹಸೀನಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಭಾನುವಾರ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಸುಮಾರು 100 ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ಮೂಲಗಳ ಪ್ರಕಾರ, ಘಟನೆ ನಡೆಯುತ್ತಿದ್ದಂತೆಯೇ ಮಿಲಿಟರಿ ಮುಖ್ಯಸ್ಥ ಶೇಖ್ ಹಸೀನಾ ತಕ್ಷಣವೇ ರಾಜೀನಾಮೆ ನೀಡಿ, ದೇಶ ತೊರೆಯುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದೆ. ಬಾಂಗ್ಲಾದೇಶ ಸ್ವತಂತ್ರವಾಗಲು ಹೋರಾಡಿದ್ದ ಹಸೀನಾ ತಂದೆ, ಬಾಂಗ್ಲಾ ಮಾಜಿ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಒಡೆದು ಹಾಕಿರುವುದಾಗಿ ವರದಿ ತಿಳಿಸಿದೆ.