Advertisement

ಉಗ್ರ ದಾಳಿ ನಡೆದ 6 ತಿಂಗಳ ಬಳಿಕ ಹೊಸ ತಾಣದಲ್ಲಿ ಢಾಕಾ ಕೆಫೆ ಆರಂಭ

03:57 PM Jan 11, 2017 | Team Udayavani |

ಢಾಕಾ : ಕಳೆದ ವರ್ಷ ಓರ್ವ ಭಾರತೀಯ ಹುಡುಗಿ ಸೇರಿದಂತೆ 22 ಮಂದಿ ವಿದೇಶೀಯರನ್ನು ಇಸ್ಲಾಮಿಕ್‌ ಉಗ್ರರು ಹತ್ಯೆಗೈದ ಬಾಂಗ್ಲಾದೇಶದ ರಾಜಧಾನಿಯಲ್ಲಿನ ಪ್ರಖ್ಯಾತ ಢಾಕಾ ಕೆಫೆ ಆರು ತಿಂಗಳ ಬಳಿಕ ಇದೀಗ ಪುನರಾರಂಭಗೊಂಡಿದೆ; ಆದರೆ ಹೊಸ ತಾಣದಲ್ಲಿ ಮತ್ತು ಇನ್ನಷ್ಟು ಭದ್ರತೆಗಳೊಂದಿಗೆ !

Advertisement

ವಿದೇಶೀಯರ ಅಚ್ಚುಮೆಚ್ಚಿನ ತಾಣವಾಗಿದ್ದ ಹೋಲಿ ಆರ್ಟಿಸಾನ್‌ ಬೇಕರಿ, ಢಾಕಾದಲ್ಲಿನ ಗುಲ್‌ಶನ್‌ ಅವೆನ್ಯೂದಲ್ಲಿರುವ ರ್‍ಯಾಂಗ್‌ ಆರ್‌ಕೇಡ್‌ನ‌ ಮೊದಲ ಮಹಡಿಯಲ್ಲಿನ 2,000 ಚದರ ಅಡಿ ಸ್ಥಳದಲ್ಲಿ ವ್ಯವಹಾರ ನಿರತವಾಗಿತ್ತು. ಅದನ್ನೀಗ ಈ ಸ್ಥಳದಿಂದ ಕೆಲವೇ ಬ್ಲಾಕ್‌ಗಳ ಆಚೆಗೆ, ಆದರೆ ರಾಜತಾಂತ್ರಿಕ ಜಿಲ್ಲೆಯ ಹೃದಯಭಾಗದ ಕಟ್ಟಡಕ್ಕೆ ಹೆಚ್ಚಿನ ಭದ್ರತೆಗಳೊಂದಿಗೆ ಸ್ಥಳಾಂತರಿಸಲಾಗಿದೆ ಎಂದು ಬಿಡಿನ್ಯೂಸ್‌24 ವರದಿ ಮಾಡಿದೆ.

ನಿನ್ನೆ ಮಂಗಳವಾರವೇ ಪುನರಾರಂಭಗೊಂಡಿದ್ದ ಈ ಕೆಫೆ ಒಂದು ಬಾರಿಗೆ 50 ಗ್ರಾಹಕರ ಸೇವೆಯನ್ನು ಕೈಗೊಳ್ಳಬಹುದಾಗಿದೆ. ಈಚೆಗಷ್ಟೇ ಢಾಕಾ ಕೆಫೆಯ ಆಡಳಿತ ವರ್ಗವು ತನ್ನ ಫೇಸ್‌ ಬುಕ್‌ನಲ್ಲಿ, ಕೆಫೆಯನ್ನು ಹೊಸ ತಾಣದಲ್ಲಿ ಶೀಘ್ರವೇ ಪುನರಾರಂಭಿಸಲಾಗುವುದು ಎಂದು ಹೇಳಿಕೊಂಡಿತ್ತು. 

ಕಳೆದ ವರ್ಷ ಜುಲೈ ತಿಂಗಳಲ್ಲಿ ಇಸ್ಲಾಮಿಕ್‌ ಉಗ್ರರು ಢಾಕಾ ಕೆಫೆಗೆ ನುಗ್ಗಿ ಅಲ್ಲಿದ್ದ ಹೆಚ್ಚಿನ ವಿದೇಶೀಯರನ್ನು ಒತ್ತೆಯಾಳುಗಳನ್ನಾಗಿ ಇರಿಸಕೊಂಡು 22 ಮಂದಿಯ ಹತ್ಯೆಗೈದಿದ್ದರು. ಇವರಲ್ಲಿ 19ರ ಹರೆಯದ ಭಾರತೀಯ ಹುಡುಗಿ ತಾರಿಷಿ ಜೈನ್‌ ಕೂಡ ಸೇರಿದ್ದಳು. ಹತರಾದರ ವಿದೇಶೀಯರಲ್ಲಿ ಹೆಚ್ಚಿನವರು ಇಟಲಿ, ಜಪಾನ್‌, ಅಮೆರಿಕನ್‌ ಪ್ರಜೆಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next