Advertisement

ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ಶೀಘ್ರ ಆರಂಭ

12:30 AM Jan 18, 2019 | |

ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಶೇ.85ರಷ್ಟು ಭೂ ಸ್ವಾಧೀನ ಮುಗಿದಿದೆ. 7,400 ಕೋಟಿ ರೂ. ವೆಚ್ಚದ ಈ ರಸ್ತೆಯ ಕಾಮಗಾರಿಯನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವವರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಲೇ ಇದೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಗಳಾದ್ದ ವೇಳೆ ಬೆಂಗಳೂರು ಮತ್ತು ಮೈಸೂರು ನಡುವಿನ ರಸ್ತೆಯನ್ನು ನಾಲ್ಕು ಪಥಗಳ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಿದರು.

ಬಂಟ್ವಾಳದವರೆಗೂ ರಸ್ತೆ ಅಭಿವೃದಿಟಛಿಯಾಯಿತು. ವಾಹನ ದಟ್ಟಣೆ ಕೂಡ ಗಣನೀಯವಾಗಿ ಏರಿಕೆಯಾಯಿತು. 2014ರಲ್ಲಿ ಕೇಂದ್ರ ಸರ್ಕಾರ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ 8 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿತು. ಇತ್ತೀಚೆಗೆ 10 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಿಸ್ತರಣೆ ಎಲ್ಲಿಂದ ಎಲ್ಲಿಯವರೆಗೆ?

 ಬೆಂಗಳೂರು ಬಳಿಯ ಕೆಂಗೇರಿ ಹೊರವಲಯದಲ್ಲಿ ನೈಸ್‌ ರಸ್ತೆಯ ಬಳಿಯ ಪಂಚಮುಖೀ ದೇವಾಲಯದಿಂದ ಬೆಂಗಳೂರು ದಕ್ಷಿಣ ತಾಲೂಕು ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗ ಪಟ್ಟಣ ದವರೆಗೆ 117.30 ಕಿ.ಮೀ. ರಸ್ತೆಯನ್ನು 10 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ಮುಂದಾಗಿದೆ.

Advertisement

ಪ್ಯಾಕೇಜ್‌ 1ರ ಹಂತದಲ್ಲಿ ಭೂಮಿ ಎಷ್ಟು ಬೇಕು?
ಕೆಂಗೇರಿಯಿಂದ, ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕು ನಿಡಘಟ್ಟವರೆಗೆ 56.20 ಕಿ.ಮೀ.ರಸ್ತೆ ವಿಸ್ತರಣೆಗೆ 348.76 ಹೆಕ್ಟೇರ್‌ ಭೂಮಿ (861.80 ಎಕರೆ) ಬೇಕಾಗಿದೆ. ಹಾಲಿ ರಸ್ತೆ ಸೇರಿ ಇಲಾಖೆಯ ಬಳಿ 129.19 ಹೆಕ್ಟೇರ್‌(ಎಕರೆ) ಭೂಮಿ ಇಲಾಖೆಯ ವಶದಲ್ಲಿದೆ. ಭೂಸ್ವಾಧೀನದ ಪೈಕಿ 165.52 ಹೆಕ್ಟೇರ್‌ ( ಎಕರೆ) ಖಾಸಗಿಯವರಿಂದ ಸ್ವಾಧೀನ ಪಡಿಸಿ ಕೊಳ್ಳಬೇಕಾಗಿದೆ. ಸರ್ಕಾರದ 14.43 ಹೆಕ್ಟೇರ್‌(ಎಕರೆ) ಭೂಮಿ ಸರ್ಕಾರಿ ಭೂಮಿಯಾಗಿದೆ. 24.10 ಹೆಕ್ಟೇರ್‌

ಎಕರೆ) ಭೂಮಿ ವಿವಿಧ ನ್ಯಾಯಾಲಯಗಳಲ್ಲಿ ನಿರ್ಣಯವಾಗಬೇಕಾಗಿದೆ. ಖಾಸಗಿಯವರಿಂದ ಭೂಮಿ ಖರೀದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1594.25 ಕೋಟಿ ರೂ ಬಿಡುಗಡೆ ಮಾಡಿದೆ. ಖಾಸಗಿ 165.52 ಹೆಕ್ಟೇರ್‌ ಪೈಕಿ ಪ್ರಾಧಿಕಾರ ಈಗಾಗಲೆ 128.87 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಇನ್ನು 12.55 ಹೆಕ್ಟೇರ್‌ ಭೂಮಿಗೆ (ಎಕರೆ) ಪರಿಹಾರದ ಹಣ ಕೊಡಬೇಕಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಶೇ 87.04, ರಾಮನಗರ ತಾಲೂಕಿನಲ್ಲಿ ಶೇ 93.05, ಚನ್ನಪಟ್ಟಣ ತಾಲೂಕಿನಲ್ಲಿ ಶೇ 92.79, ಮದ್ದೂರು ತಾಲೂಕಿನಲ್ಲಿ ಶೇ 92.68 ಒಟ್ಟು 85.04 ರಷ್ಟು ಭೂಮಿ ಸ್ವಾಧೀನವಾಗಿದೆ. ಇಲಾಖೆ ಇಲ್ಲಿಯವರೆಗೆ 1095.83 ಕೋಟಿ ರೂ.ಗಳನ್ನು ಪರಿಹಾರದ ರೂಪದಲ್ಲಿ ಕೊಟ್ಟಿದೆ.

ರಾಮನಗರ, ಚನ್ನಪಟ್ಟಣದಲ್ಲಿ ಎಷ್ಟು ಕಿ.ಮೀ. ರಸ್ತೆ?
ರಾಮನಗರ ತಾಲೂಕಿನ 22 ಮತ್ತು ಚನ್ನಪಟ್ಟಣದ 12 ಗ್ರಾಮಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ರಾಮನಗರ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಉದ್ದ 30.27 ಕಿ.ಮೀ., ಚನ್ನಪಟ್ಟಣದ ಮೂಲಕ ಹಾದು ಹೋಗುವ ರಸ್ತೆಯ ಉದ್ದ 18.08 ಕಿ.ಮೀ.

ಎಲ್ಲೆಲ್ಲಿ ಬೈಪಾಸ್‌?
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಹಂತ 1ರಲ್ಲಿ ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಎರಡನೇ ಹಂತದಲ್ಲಿ ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣಗಳಲ್ಲಿ ಬೈಪಾಸ್‌ ರಸ್ತೆ ನಿರ್ಮಾಣವಾಗಲಿವೆ. ಬಿಡದಿಯಲ್ಲಿ 6.994 ಕಿ.ಮೀ., ರಾಮನಗರ ಮತ್ತು ಚನ್ನಪಟ್ಟಣದಲ್ಲಿ 22.35 ಕಿ.ಮೀ., ಮದ್ದೂರಿನಲ್ಲಿ 4.459 ಕಿ.ಮೀ., ಮಂಡ್ಯದಲ್ಲಿ 10.04 ಕಿ.ಮೀ. ಮತ್ತು ಶ್ರೀರಂಗ ಪಟ್ಟಣದಲ್ಲಿ 8.194 ಕಿ.ಮೀ. ಉದ್ದದ ಬೈಪಾಸ್‌ ರಸ್ತೆಗಳು ನಿರ್ಮಾಣವಾಗಲಿದೆ. ಬೈಪಾಸ್‌ ರಸ್ತೆಗಳ ನಿರ್ಮಾಣಕ್ಕೆ ಎರಡೂ ಹಂತಗಳಲ್ಲಿ ಭೂಸ್ವಾಧೀನಕ್ಕೆ ತಕರಾರುಗಳಿವೆ. ರಾಮನಗರ ತಾಲೂಕಿನಲ್ಲಿ 63 ಪ್ರಕರಣಗಳು ಮತ್ತು ಚನ್ನಪಟ್ಟಣದಲ್ಲಿ 28 ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಬೇಕಾಗಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಮುಖ್ಯ ಉದ್ದೇಶ ವಾಹನ ದಟ್ಟಣೆ ಕಡಿಮೆ ಮಾಡುವುದು, ಅಪಘಾತಗಳನ್ನು ತಡೆಯುವುದು. ಅಪಘಾತಗಳನ್ನು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಇಲಾಖೆ ಉದ್ದೇಶಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ಎರಡು ಪಥಗಳ ಸರ್ವಿಸ್‌ ರಸ್ತೆಗಳು ನಿರ್ಮಾಣವಾಗಲಿವೆ. ಪ್ರಮುಖ ಹೆದ್ದಾರಿ ರಸ್ತೆಯಲ್ಲಿ ಮೂರು ಪಥಗಳು ಇರಲಿವೆ. ಒಟ್ಟು 10 ಪಥಗಳ ರಸ್ತೆ ಇದಾಗಲಿದೆ.
● ಹೆಸರು ಹೇಳಲು ಇಚ್ಚಿಸದ ಅಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next