ವಿಧಾನಸಭೆ: ಬೆಂಗಳೂರು ಎಂದರೆ ಎಸ್‌ಬಿಎಂ (ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ) ಎನ್ನುವಂತಾಗಿದೆ. ಪ್ರತಿ ಯೋಜನೆಯಲ್ಲಿಯೂ ಅವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಆರೋಪಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಬೆಂಗಳೂರಿನಲ್ಲಿ 28 ಶಾಸಕರಿದ್ದೇವೆ. ಆದರೆ, ಯಾವುದೇ ಯೋಜನೆಗಳ ಬಗ್ಗೆ ಕೇಳಿದರೂ, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಮುನಿರತ್ನ ಹೆಸರು ಕೇಳಿ ಬರುತ್ತದೆ ಎಂದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೂವರೂ ಕಾಂಗ್ರೆಸ್ ಸದಸ್ಯರು ತಮಗೆ ಯಾವ ಯೋಜನೆಯಲ್ಲಿ ಹೆಚ್ಚಿನ ಅನುದಾನ ಬಂದಿದೆ ಹೇಳಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಶಾಸಕರು ಸತೀಶ್ ರೆಡ್ಡಿ ಪರವಾಗಿ ನಿಂತರು.
ಬಿಜೆಪಿಯ ರವಿ ಸುಬ್ರಮಣ್ಯ ಮಾತನಾಡಿ, ನಗರದ ಶಾಸಕರೆಂದರೆ ನಾಯಿ ಹಿಡಿಸೋದು, ಮಂಗ ಓಡಿಸೋದು, ಯಾರದಾದರೂ ಮನೆ ಸ್ಯಾನಿಟರಿ ಕೆಟ್ಟಿದ್ದರೆ ರಿಪೇರಿ ಮಾಡಿಸೋದು. ಬಿಬಿಎಂಪಿಯಲ್ಲಿಯೂ ಅತಿಥಿಗಳಾಗಿ ಕೂಡುವುದು.
ಶಾಸಕರಿಗೆ ಕೇಂದ್ರದಿಂದಲೂ ಅನುದಾನವಿಲ್ಲ. ರಾಜ್ಯ ಸರ್ಕಾರದಿಂದಲೂ ಅನುದಾನವಿಲ್ಲ. ವಿಧಾನಸಭೆಯಲ್ಲಿಯೂ ಮಾತನಾಡಲು ಅವಕಾಶವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಬಿಜೆಪಿಯ ಮತ್ತೂಬ್ಬ ಶಾಸಕ ಎಸ್.ಆರ್. ವಿಶ್ವನಾಥ್, ಬಿಡಿಎ ಎಂದರೆ, ಭ್ರಷ್ಟಾಚಾರ ಅಭಿವೃದ್ಧಿ ಪ್ರಾಧಿಕಾರ ಎನ್ನುವಂತಾಗಿದೆ. ಶಾಸಕರಿಗೆ ಜಿ ಕೆಟಗೆರಿ ಸೈಟ್ ನೀಡಿದರೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತದೆ. ಆದರೆ, ಅಲ್ಲಿ ಒಬ್ಬ ವ್ಯಕ್ತಿಗೆ 19 ಸೈಟ್ ನೀಡಲಾಗಿದೆ. ಈ ಬಗ್ಗೆ ಯಾರೂ ಕೇಳದಂತಾಗಿದೆ ಎಂದು ಆರೋಪಿಸಿದರು.