Advertisement

12 ವರ್ಷಗಳ ಬಳಿಕ ಕೊಲೆಗಾರನ ಬಂಧನ

01:12 PM Nov 17, 2022 | Team Udayavani |

ಬೆಂಗಳೂರು: ಬರೋಬ್ಬರಿ 12 ವರ್ಷಗಳ ಬಳಿಕ ಕೊಲೆಗಾರ ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಯಶವಂತಪುರ ನಿವಾಸಿ ರಮೇಶ್‌(42) ಬಂಧಿತ. ಈತ 2005ರಲ್ಲಿ ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

Advertisement

ನ.15ರಂದು ರಾತ್ರಿ ಪಿಎಸ್‌ಐ ರಾಜು ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆ ಪಡೆಯುತ್ತಿದ್ದರು. ಆಗ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಎಂ-ಸಿಸಿಟಿಎನ್‌ಎಸ್‌ ಮೊಬೈಲ್‌ ಆ್ಯಪ್‌ ಮೂಲಕ ಆತನ ಬೆರಳ ಮುದ್ರೆ ಪರಿಶೀಲಿಸಿದಾಗ ಆತನ ಹಳೇ ಪ್ರಕರಣ ಪತ್ತೆಯಾಗಿದೆ. ಬಳಿಕ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಾಯಿಬಿಟ್ಟಿದ್ದಾನೆ.

2005ರ ಆ.29ರಂದು ತಾವರೆಕೆರೆ ಠಾಣೆ ವ್ಯಾಪ್ತಿಯ ತಿಗಳರಪಾಳ್ಯದ ಬಾಲಾಜಿ ನಗರ ದಲ್ಲಿ ಮನೆಯೊಂದಕ್ಕೆ ಬಣ್ಣ ಬಳಿಯಲು ಹೋಗಿದ್ದ. ಆಗ ಮನೆಗೆ ಬಣ್ಣ ಬಳಿಯದೇ ಇತರೆ 8-10 ಮಂದಿ ಯುವಕರನ್ನು ಕರೆಸಿಕೊಂಡು ಮನೆ ಮಾಲೀಕ ಶಂಕರಪ್ಪ ಎಂಬುವರನ್ನು ಕೊಲೆ ಮಾಡಿದ್ದ. ಈ ಸಂಬಂಧ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ಆರೋಪಿ ತಲೆಮರೆಸಿಕೊಂಡಿದ್ದ. ಈ ಸಂಬಂಧ 2010ರಲ್ಲಿ ಕೋರ್ಟ್‌ ಆರೋಪಿಯ ವಿರುದ್ದ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು..

ಕೇಸ್‌ ಕ್ಲೋಸ್‌ ಆಗಿದೆ ಎಂದು ಭಾವಿಸಿದ್ದ

ಆರೋಪಿಯ ವಿಚಾರಣೆಯಲ್ಲಿ ತನ್ನ ವಿರುದ್ಧದ ಪ್ರಕರಣ ಮುಕ್ತಾಯಗೊಂಡಿದೆ ಎಂದು ಭಾವಿಸಿ ಓಡಾಡುತ್ತಿದ್ದೆ. ಕೂಲಿ ಕೆಲಸ ಹಾಗೂ ಕೆಲ ಖಾಸಗಿ ಕಂಪನಿಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಇಲಾಖೆ ಸರ್ವರ್‌ನಲ್ಲಿ ಬೆರಳಚ್ಚು ಸಂಗ್ರಹ

ಮೊದಲಿನಿಂದಲೂ ಘಟನಾ ಸ್ಥಳದಲ್ಲಿ ದೊರೆಯುವ ಬೆರಳಚ್ಚು ಮತ್ತು ಆರೋಪಿಗಳ ಬೆರಳಚ್ಚು ಅನ್ನು ಪೊಲೀಸರು ಸಂಗ್ರಹಿಸುತ್ತಾರೆ. ಅದನ್ನು ಒಂದು ವರ್ಷಗಳ ಹಿಂದೆ ಇಲಾಖೆಯ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿತ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಬೆರಳಚ್ಚನ್ನು ಅಂತರಾಜ್ಯ ಜಿಲ್ಲೆ ಮಾತ್ರವಲ್ಲದೆ, ಅಂತಾರಾಜ್ಯದ ಪೊಲೀಸ್‌ ಇಲಾಖೆ ಜತೆ ಹಂಚಿಕೊಳ್ಳಲಾಗಿತ್ತು. ಇದರೊಂದಿಗೆ ಕೆಲ ತಿಂಗಳ ಹಿಂದಷ್ಟೇ ಪೊಲೀಸ್‌ ಇಲಾಖೆ ಅಧಿಕಾರಿ-ಸಿಬ್ಬಂದಿಗಾಗಿ ಎಂ-ಸಿಸಿಟಿಎನ್‌ಎಸ್‌ ಎಂಬ ಆ್ಯಪ್‌ ರಚನೆ ಮಾಡಿ ಎಲ್ಲ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ ಹತ್ತಾರು ವರ್ಷಗಳ ಹಿಂದಿನ ಎಲ್ಲ ಬೆರಳು ಮುದ್ರೆಯನ್ನು ಶೇಖರಿಸಲಾಗಿದೆ. ಅದರಂತೆ ಆರೋಪಿಗಳು ಮತ್ತು ಗಸ್ತಿನ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next