ಬೆಂಗಳೂರು: ನೆರೆಯ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ಮೌಲ್ಯದ 2 ಕ್ವಿಂಟಾಲ್ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರಿನ ಸಮೀರ್, ಕೈಸರ್ ಪಾಷ ಮತ್ತು ಚಿಕ್ಕಬಳ್ಳಾಪುರದ ಇಸ್ಮಾಯಿಲ್ ಶರೀಫ್ ಎಂದು ಗುರುತಿಸಲಾಗಿದೆ. ಇವರಿಂದ ಒಂದು ಕೋಟಿ ರೂಪಾಯಿ ಮೌಲ್ಯದ 204 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮೂರು ಮೊಬೈಲ್ ಗಳು, ಒಂದು ಲಾರಿ ಮತ್ತು ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸಮೀರ್ ಎಂಬವನು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಿಂದ ಕಂಟೈನರ್ ನಲ್ಲಿ ಗಾಂಜಾ ತುಂಬಿಸಿಕೊಂಡು ತನ್ನ ಸಹಚರರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ. ಇಲ್ಲಿ ಬೆಂಗಳೂರು, ಮೈಸೂರು, ರಾಮನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇವರು ಸರಬರಾಜು ಮಾಡುತ್ತಿದ್ದರು. ಇದಲ್ಲದೆ ತಮಿಳು ನಾಡು ಕೇರಳ ರಾಜ್ಯದಲ್ಲೂ ಗಾಂಜಾ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ನಶೆ ನಂಜು: ನಟ, ಗಾಯಕರಿಗೆ ಮಾದಕ ವಸ್ತು ನೀಡುತ್ತಿದ್ದ ಗ್ಯಾಂಗ್ ಬಂಧನ
ಆರೋಪಿಗಳು ಕಂಟೈನರ್ ನಲ್ಲಿ ತಂದ ಗಾಂಜಾವನ್ನು ನಗರದ ಹೊರವಲಯದ ದೇವನಹಳ್ಳಿ ಬಳಿ ಇಂಡಿಗೋ ಕಾರ್ ಗೆ ವರ್ಗಾವಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.