Advertisement

ಬೆಂಗಳೂರು ಸಮಗ್ರ ಅಭಿವೃದ್ಧಿಯೇ ಗುರಿ

12:46 AM Sep 09, 2019 | Lakshmi GovindaRaju |

ಬೆಂಗಳೂರು: ಬೆಂಗಳೂರನ್ನು ವಿಶ್ವ ದರ್ಜೆ ನಗರವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಭಾನುವಾರ ಸುಮಾರು ಮೂರೂವರೆ ಗಂಟೆ ಕಾಲ ನಗರ ಪ್ರದಕ್ಷಿಣೆ ನಡೆಸಿದ ಬಳಿಕ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

Advertisement

ಬೆಂಗಳೂರಿನ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಸಲಹೆ ಪಡೆದು ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಹಣಕಾಸು ಒದಗಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

30 ಸಾವಿರ ಕೋಟಿ ರೂ. ನಷ್ಟ: ಕೆ.ಆರ್‌.ಪುರ ಹಾಗೂ ಸಿಲ್ಕ್ ಬೋರ್ಡ್‌ ಜಂಕ್ಷನ್‌ ವಾಹನ ದಟ್ಟಣೆ ಸಮಸ್ಯೆಯಿಂದ ಸಾಫ್ಟ್ವೇರ್‌ ಕಂಪನಿಗಳಿಗೆ ಪ್ರತಿ ವರ್ಷ ಸುಮಾರು 30 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗಿದೆ ಎಂದು ಸಂಸ್ಥೆಗಳು ಅಳಲು ತೋಡಿಕೊಂಡಿವೆ.

ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯನ್ನು ವೇಗವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಪೆರಿಫೆರಲ್‌ ರಿಂಗ್‌ ರಸ್ತೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಂಪೆನಿಗಳ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೆರೆ ಅಭಿವೃದ್ಧಿಗೆ 200 ಕೋಟಿ ರೂ.: ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ನೀಡಲಾಗುವುದು. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾನೇ ಖುದ್ದಾಗಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Advertisement

ನಾಲ್ಕು ತಿಂಗಳಲ್ಲಿ ಬದಲಾವಣೆ: ಮುಂದಿನ ನಾಲ್ಕು ತಿಂಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಏನೆಲ್ಲಾ ಕಾರ್ಯ ಮಾಡಬಹುದು, ಎಷ್ಟೆಲ್ಲಾ ಕೆಲಸ ಆಗುತ್ತಿವೆ ಎಂಬ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು. ಜನತೆಗೆ ತೃಪ್ತಿಯಾಗುವ ರೀತಿಯಲ್ಲಿ ಕೆಲಸ ಮಾಡುವ ಸಂಕಲ್ಪ ತೊಡಲಾಗಿದೆ. ನಾಲ್ಕು ತಿಂಗಳಲ್ಲಿ ಬದಲಾವಣೆ ಕಾಣುವಿರಿ ಎಂದ ಸಿಎಂ, ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು, ರಾಜ ಕಾಲುವೆ ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಎಲಿವೇಟೆಡ್‌ ಮೆಟ್ರೋ ಕಾಮಗಾರಿ ಕುರಿತು ಚರ್ಚೆ: ಸಿಲ್ಕ್ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರ- ಹೆಬ್ಟಾಳ ಮಾರ್ಗವಾಗಿ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಸಂಪರ್ಕಿಸುವ 56 ಕಿ.ಮೀ. ಉದ್ದದ ಎಲಿವೇಟೆಡ್‌ ಮೆಟ್ರೋ ಕಾರಿಡಾರ್‌ಗೆ ಭೂಸ್ವಾಧೀನ ಹಾಗೂ ಸೇವಾ ಜಾಲ ಸ್ಥಳಾಂತರಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಎರಡು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ಪಡೆಯಲು ಸರ್ಕಾರ ಕ್ರಮ ವಹಿಸಲಿದೆ ಎಂದು ಸಿಎಂ ತಿಳಿಸಿದರು.

ಸಿಎಂ ನೀಡಿದ ಸೂಚನೆಗಳು
-2021ರೊಳಗೆ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸೇವೆ ಪ್ರಾರಂಭಿಸಿ.
-ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗ ನಿರ್ಮಾಣ 2021ರೊಳಗೆ ಪೂರ್ಣಗೊಳಿಸಬೇಕು.
-ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳಗಳಲ್ಲಿನ ರಸ್ತೆ-ಪಾದಚಾರಿ ಮಾರ್ಗ ಸುಸ್ಥಿತಿಯಲ್ಲಿಡಬೇಕು.
-ಸಂಚಾರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಪರ್ಯಾಯ ರಸ್ತೆಗಳನ್ನು ಗುರುತಿಸಿ.
-ಹೊರ ವರ್ತುಲ ರಸ್ತೆ ಹಾಗೂ ಹಳೆ ಮದ್ರಾಸ್‌ ರಸ್ತೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ.

Advertisement

Udayavani is now on Telegram. Click here to join our channel and stay updated with the latest news.

Next