Advertisement

Bangalore Agricultural Fair: ಬೆಂಗಳೂರು ಕೃಷಿ ಮೇಳದಲ್ಲಿ ಬೀಜ ಸಂತೆ

11:39 AM Nov 14, 2023 | Team Udayavani |

ಬೆಂಗಳೂರು: ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿವಿಯ ಇತಿಹಾಸದಲ್ಲಿ ಮೊದಲ ಬಾರಿ ಕೃಷಿ ಮೇಳದಲ್ಲಿ “ಬೀಜ ಸಂತೆ’ ಆಯೋಜಿಸಲು ಮುಂದಾಗಿದೆ.

Advertisement

ಜಿಕೆವಿಕೆ ಕೃಷಿ ಕೇಂದ್ರ ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಬೆಂಗಳೂರು ವಲಯದ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ರೈತರು 1,500 ಎಕರೆ ಪ್ರದೇಶದಲ್ಲಿ ಬೀಜೋತ್ಪಾದನೆ ಕೈಗೊಂಡಿದ್ದಾರೆ. ಈಗಾಗಲೇ ತಮ್ಮ ಜಮೀನುಗಳಲ್ಲಿ ಬೆಳೆದ ಬೀಜಗಳನ್ನು ಸಂಸ್ಕರಣೆ ಮಾಡಿ, ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಕೆವಿಕೆ ಕಳೆದ 25 ವರ್ಷದಿಂದ ಹಲವು ರೈತರ ಸಹಯೋಗದಲ್ಲಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.

ಸಂತೆಯಲ್ಲಿ ಏನಿರಲಿದೆ?: ಬೀಜ ಸಂತೆಯಲ್ಲಿ ಸಿರಿಧಾನ್ಯಗಳಾದ ಸಾಮೆ, ರಾಗಿ, ನವಣೆ, ಬರಗು, ಹಾರಕ, ದ್ವಿದಳ ಧಾನ್ಯ, ಎಣ್ಣೆಕಾಳು, ಮೇವಿನ ಬೆಳೆ, ಹಣ್ಣು ಮತ್ತು ತರಕಾರಿ ಬೀಜಗಳಾದ ಬೆಂಡೆ, ಹಾಗಲಕಾಯಿ, ಅವರೆ, ಮೆಂತೆ, ಪಾಲಾಕ್‌, ಮೆಣಸು, ಬೀನ್ಸ್‌ ಸೇರಿದಂತೆ ಇತರೆ ಸಾಂಪ್ರದಾಯಿಕ ತಳಿಗಳ ಬೀಜಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಯುವ ರೈತರಿಗೆ ಪ್ರೋತ್ಸಾಹ: ಕೋವಿಡ್‌ ಬಳಿಕ ರಾಜ್ಯದಲ್ಲಿ ಯುವ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಯುವ ರೈತರಿಗೆ ಸಹಾಯಕವಾಗು ವಂತಹ ಉತ್ತೇಜನ ನೀಡಲು ಕೃಷಿ ವಿವಿ ಮುಂದಾಗಿದೆ.

ಅದರ ಭಾಗವಾಗಿ ಬೀಜೋತ್ಪಾದನೆ ಕೈಗೊಂಡು ಯಶಸ್ವಿ ರೈತರ ಅನುಭವನ್ನು ಹಂಚಿಕೊಳ್ಳುವ ಕೃಷಿ ಮೇಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಂಶೋಧನಾ ಕೇಂದ್ರದ ತಜ್ಞರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೃಷಿ ಮೇಳದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಎಣ್ಣೆಕಾಳು ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಪ್ರಮಾಣ ಸಂಸ್ಥೆ ಸೇರಿದಂತೆ 100ಕ್ಕೂ ಅಧಿಕ ಖಾಸಗಿ ಕಂಪನಿಗಳು ಬೀಜೋತ್ಪಾದನೆ, ಸಂಸ್ಕರಣೆ, ಮಾರು ಕಟ್ಟೆ, ಮಾರಾಟದ ಕುರಿತು ರೈತರ ಜೊತೆ ಮಾಹಿತಿ ಹಂಚಿಕೊಳ್ಳಲಿವೆ. ಇದರಿಂದ ಮುಂದಿನ ದಿನ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಜೋತ್ಪಾ ದನೆ ಮಾಡಿ ಲಾಭಗಳಿಸಲು ಅನುಕೂಲ ಆಗಲಿದೆ.

ಕೃಷಿ ಮೇಳದ ಆಕರ್ಷಣೆ: ಜಿಕೆವಿಕೆಯಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಕೃಷಿಯ ನೂತನ ತಂತ್ರಜ್ಞಾನ, ಜಲಾನಯನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ, ಸಿರಿಧಾನ್ಯ, ಮಾರುಕಟ್ಟೆ , ಮಳೆ, ಮೇಲ್ಛಾವಣಿ ನೀರು ಕೊಯ್ಲು , ಕೃಷಿಯಲ್ಲಿ ಡ್ರೋನ್‌ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ , ಹನಿ, ತುಂತುರು ಮತ್ತು ಸಾವಯವ ಕೃಷಿ, ಸುಧಾರಿತ ಕೃಷಿ ಯಂತ್ರೋಪಕರಣ, ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆ ಇರಲಿದೆ.

Advertisement

ರೈತರಿಗೆ ಮಾರ್ಗದರ್ಶನ: ನ.17ರಿಂದ 20ರ ವರೆಗೆ ನಡೆಯಲಿರುವ ಕೃಷಿ ಮೇಳದಲ್ಲಿ ಕೃಷಿ ವಿಜ್ಞಾನಿಗಳು ಮಳೆ ಕೊರತೆ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಿಮೆ ನೀರು ಬಳಸಿಕೊಂಡ ಬೆಳೆಯುವ ರಾಗಿ, ಭತ್ತ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಯುವಕರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬೀಜ ಸಂತೆ ಆಯೋಜಿಸಲಾಗಿದೆ. ಇದು ಬೀಜೋತ್ಪಾದನೆ ಸಂಸ್ಥೆ ಹಾಗೂ ರೈತರಿಗೆ ಒಂದೇ ವೇದಿಕೆ ಕಲ್ಪಿಸಲಾಗುತ್ತದೆ. ಡಾ. ವಿ.ಎಲ್‌. ಮಧುಪ್ರಸಾದ್‌, ವಿಸ್ತರಣಾ ನಿರ್ದೇಶಕ, ಜಿಕೆವಿಕೆ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next