ಬೀದರ: ಕುರಿ, ಮೇಕೆಗಳು ಮೃತಪಟ್ಟಾಗ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅಧಿವೇಶನದಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡಿ ಅವರು, ಹೆಚ್ಚಾಗಿ ಹಾಲುಮತ, ಎಸ್ಸಿ-ಎಸ್ಟಿ ಸೇರಿದಂತೆ ಹಿಂದುಳಿದ ವರ್ಗದ ಬಡ ಜನರು ಕಷ್ಟಪಟ್ಟು ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮೃತ ಕುರಿ, ಮೇಕೆಗೆ ತಲಾ ಐದು ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಕೋವಿಡ್ ಹಿನ್ನೆಲೆ ಕಳೆದೆರಡು ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ಸಾಕಾಣಿಕೆದಾರರು ಸಂಕಷ್ಟದಲ್ಲಿದ್ದಾರೆ ಎಂದರು.
ಈ ಹಿಂದೆ ಎಷ್ಟು ಕುರಿ, ಮೇಕೆಗಳು ಮೃತಪಟ್ಟಿವೆ ಎಂಬ ದಾಖಲೆ ಪರಿಶೀಲಿಸಿ ಸಾಕಾಣಿಕೆದಾರರಿಗೆ ಪರಿಹಾರ ಒದಗಿಸಬೇಕು. ಕುರಿ, ಮೇಕೆಗಳ ಮರಿ ಮೃತಪಟ್ಟರೆ 2.5 ಸಾವಿರ ರೂ., ದೊಡ್ಡ ಕುರಿ, ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರವಿದೆ. ಆದರೆ ಈಗ ಕುರಿ, ಮೇಕೆಗಳು 20 ಸಾವಿರ ರೂ. ಗಿಂತ ಹೆಚ್ಚಿನ ಬೆಲೆ ಬಾಳುತ್ತಿವೆ. ಹಾಗಾಗಿ ಪರಿಹಾರದ ಮೊತ್ತ ಕನಿಷ್ಟ 10 ಸಾವಿರ ರೂ. ನಿಗದಿ ಮಾಡುವಂತೆ ಒತ್ತಾಯಸಿದರು.
ಮೇಯಿಸಲು ವ್ಯವಸ್ಥೆ ಕಲ್ಪಿಸಿ: ಕುರಿ-ಮೇಕೆ ಮೇಯಿಸಲು ಸಮಸ್ಯೆಯಾಗುತ್ತಿದೆ. ಕಂದಾಯ ಮತ್ತು ಅರಣ್ಯ ಭೂಮಿಗಳಲ್ಲಿ ಕುರಿ, ಮೇಕೆಗಳಿಗೆ ನೀರಿನ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು. ಕುರಿ, ಮೇಕೆ ಸಾಕಾಣಿಕೆಯಿಂದ ವರ್ಷದಲ್ಲೇ ಡಬಲ್ ಆಗುತ್ತದೆ. ಹಾಗಾಗಿ ಸಾಕಾಣಿಕೆ ಉತ್ತೇಜಿಸುವ ಕೆಲಸ ಆಗಬೇಕು. ಜತೆಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕುರಿ-ಮೇಕೆ ಸಾಕಾಣಿಕೆಗೆ ಒದಗಿಸುತ್ತಿರುವ ಸಹಾಯಧನದ ಮೊತ್ತ 75 ಸಾವಿರ ರೂ. ಗೆ ಹೆಚ್ಚಿಸಬೇಕು ಎಂದರು.
ಸಚಿವರ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ, ಪರಿಹಾರದ ಮೊತ್ತ ಹೆಚ್ಚಳ ಕುರಿತು ಶೀಘ್ರ ಸಂಬಂಧಪಟ್ಟವರ ಜತೆ ಸಭೆ ನಡೆದ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.