Advertisement
ತಮ್ಮ 17ನೇ ವಯಸ್ಸಿನಲ್ಲಿಯೇ ಸಂಘ-ಪರಿವಾರದ ಸಕ್ರಿಯ ಕಾರ್ಯಕರ್ತರಾಗಿ ಸಂಘಟನೆ, ಹಿಂದತ್ವದ ಪರ ಹೋರಾಟಕ್ಕೆ ಧುಮುಕಿದ ನಾರಾಯಣಾಸಾ ಬಾಂಡಗೆ ಅವರಿಗೆ ಈ ಅವಕಾಶ ಅವಕಾಶ ಒಲಿದು ಬಂದಿರುವುದು ಅಚ್ಚರಿ ತಂದಿದ್ದು, ಜತೆಯಲ್ಲೇ ಸಂಭ್ರಮ ಮನೆ ಮಾಡಿದೆ.
Related Articles
ನಾರಾಯಣಸಾ ಬಾಂಡಗೆ ಅವರು, ಕೇಂದ್ರದಲ್ಲಿ 1999ರಿಂದ 2004ರ ವರೆಗೆ ಅಟಲ್‌ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಗಿರಣಿ ಕಾರ್ಮಿಕರ ಸಂಘದ (ಕಪಾಟ) ಅಧ್ಯಕ್ಷರಾಗಿದ್ದರು. ಬಳಿಕ ರಾಜ್ಯದಲ್ಲಿ 2009ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರು ವರ್ಷಗಳ ಅವಧಿಗೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಾಮ ನಿರ್ದೇಶನಗೊಂಡು, ಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
Advertisement
17ನೇ ವರ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯನಾಗಿ ಸೇರ್ಪಡೆಗೊಂಡ ಅವರು, ಕಳೆದ 40 ವರ್ಷಗಳಿಂದ ಪರಿವಾರದ ಸಂಘಟನೆ, ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಬಾಗಲಕೋಟೆಯಲ್ಲಿ ಎಬಿವಿಪಿ ಸ್ಥಾಪಕ ಸದಸ್ಯರಾಗಿ, ವಿಶ್ವ ಹಿಂದೂ ಪರಿಷತ್‌ನಿಂದ ಶ್ರೀ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭಿಸಿದ್ದ ಬರ ಪೀಡಿತ ಪ್ರದೇಶಗಳಿಗೆ ಆಹಾರ ಪೂರೈಕೆ ಕೇಂದ್ರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ.
ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಮಶಿಲೆ ಸಂಗ್ರಹಿಸುವ ಸಾಮೂಹಿಕ ಕಾರ್ಯದಲ್ಲಿ ಭಾಗವಹಿಸಿದ್ದ ಅವರು, 1973ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದಾಗ, ಇವರನ್ನೂ ಬಂಧಿಸಿ 18 ದಿನಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು. ಇಂದಿರಾ ಗಾಂಧಿ, ಆಲಮಟ್ಟಿಗೆ ಭೇಟಿ ನೀಡಿದ್ದ ವೇಳೆ ಪ್ರಭಟನೆ ನಡೆಸುತ್ತಿದ್ದ ಬಾಂಡಗೆ ಅವರ ಮೇಲೆ ಲಾಠಿ ಪ್ರಹಾರ ನಡೆದಿತ್ತು.
ತುರ್ತು ಪರಿಸ್ಥಿತಿಯಲ್ಲೂ ಹೋರಾಟ
ತುರ್ತು ಪರಿಸ್ಥಿತಿಯಲ್ಲಿ ದಿ.ಭಾವುರಾವ್ ದೇಶಪಾಂಡ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಇವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 1990 ಮತ್ತು 1992ರಲ್ಲಿ ನಡೆದ ಕರ ಸೇವೆಯಲ್ಲಿ ಸುಮಾರು 100 ಜನ ಕರ ಸೇವಕರೊಂದಿಗೆ ತೆರಳಿದ್ದರು.
ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟç ಧ್ವಜಾರೋಹಣ ವೇಳೆ 60 ಜನ ಕಾರ್ಯಕರ್ತರೊಂದಿಗೆ ತಿರಂಗ ಯಾತ್ರೆಯಲ್ಲಿ ಇವರೂ ಭಾಗಿಯಾಗಿದ್ದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹೋರಾಟದ ವೇಳೆ ಲಾಠಿ ಏಟು ತಿಂದು ಬಂಧನಕ್ಕೊಳಗಾಗಿದ್ದರು. ತಮ್ಮ 40 ವರ್ಷಗಳ ಸಂಘಟನೆ-ಹೋರಾಟದಲ್ಲಿ 15ಕ್ಕೂ ಹೆಚ್ಚು ಬಾರಿ ಬಂಧನಕ್ಕೊಳಗಾಗಿದ್ದರು. ಸುಮಾರು 35ರಿಂದ 40 ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು.
ಸಧ್ಯ ಅಖಿಲ ಭಾರತ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿರುವ ಬಾಂಡಗೆ, ದಿ.ಜಗನ್ನಾಥರಾವ್ ಜೋಶಿ, ದಿ.ಭಾವರಾವ್ ದೇಶಪಾಂಡೆ ಮಾರ್ಗದರ್ಶನದಲ್ಲಿ ಪಕ್ಷ ಹಾಗೂ ಸಂಘಟನೆಗಳ ಜವಾಬ್ದಾರಿ ನಿರ್ವಹಿಸಿದ್ದಾರೆ.
ವಿಶ್ವ ಹಿಂದೂಪರಿಷತ್, ಸಂಘ-ಪರಿವಾರದ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿರುವ ಬಾಂಡಗೆ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ರಾಷ್ಟ್ರೀಯ ಸಮಾಲೋಚನೆ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿದ್ದ ವೇಳೆ, ಉತ್ತರಕರ್ನಾಟಕದ 6 ಜಿಲ್ಲೆಗಳ ಉಸ್ತುವಾರಿ ಕೂಡ ಬಾಂಡಗೆ ಅವರಿಗೆ ವಹಿಸಲಾಗಿತ್ತು.
ಪಕ್ಷಕ್ಕೆ ನಿಷ್ಠೆ ಇರುವ, ಅಚಲ-ವಿಚಲ ಮಾತನಾಡದೇ ಇರುವ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಗುರುತಿಸುತ್ತದೆ ಎಂಬುದಕ್ಕೆ ನಾನು ಸಾಕ್ಷಿ. 40 ವರ್ಷಗಳ ಕಾಲ ಇಡೀ ದೇಶದ ಹಲವೆಡೆ ಪಕ್ಷ ಸಂಘಟನೆ, ಹೋರಾಟದಲ್ಲಿ ಪಾಲ್ಗೊಂಡ ನನಗೆ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಇದು ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲಬೇಕಾದ ಗೌರವ ಎಂದು ಭಾವಿಸುವೆ ಎಂದು ನಾರಾಯಣಸಾ ಬಾಂಡಗೆ ಹೇಳಿಕೆ ನೀಡಿದ್ದಾರೆ.
ತಮ್ಮ ಇಡೀ ಜೀವನವನ್ನು ಸಂಘ-ಪರಿವಾರ, ಹೋರಾಟ ಹಾಗೂ ಪಕ್ಷಕ್ಕಾಗಿ ಸವೆಸಿದ ನಾರಾಯಣಸಾ ಬಾಂಡಗೆ ಅವರನ್ನು ರಾಜ್ಯಸಭೆ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ದೊಡ್ಡ ಸಂಭ್ರಮ ತಂದಿದೆ. ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ದುಡಿದವರಿಗೆ ಅವಕಾಶ, ತಾನಾಗಿಯೇ ಒಲಿದು ಬರುತ್ತವೆ ಎಂಬುದಕ್ಕೆ ಬಾಂಡಗೆ ಅವರೇ ನಿದರ್ಶನ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ.