Advertisement

ದಶಕಗಳಿಂದ ಬಾಳೆಹಿತ್ಲು ರಸ್ತೆ ಡಾಮರು ಕಂಡಿಲ್ಲ!

01:00 AM Feb 24, 2019 | Harsha Rao |

ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಳೆಹಿತ್ಲು ರಸ್ತೆಯು ನಿರ್ಮಾಣಗೊಂಡು ಸುಮಾರು 70 ವರ್ಷ ಕಳೆದರೂ ಇನ್ನೂ ಸಂಪೂರ್ಣ ಡಾಮರು ಭಾಗ್ಯ ಕಂಡಿಲ್ಲ.

Advertisement

ಮೂರೂರು ಪೇಟೆಯಿಂದ ಬಾಳೆಹಿತ್ಲು ಸಂಪರ್ಕ ರಸ್ತೆಯು ಸುಮಾರು 4 ಕಿ.ಮೀ.ನಷ್ಟು ಉದ್ದವಿದ್ದು ಇದರಲ್ಲಿ ಸುಮಾರು 1.5 ಕಿ.ಮೀ. ರಸ್ತೆ 20 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಉಳಿದ 2.5 ಕಿ. ಮೀ.ಯಷ್ಟು ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು ರಸ್ತೆಯಲ್ಲಿ ಸಂಚಾರ ನಡೆಸುವುದು ದುಸ್ತರವಾಗಿದೆ.

20 ವರ್ಷಗಳ ಹಿಂದೆ ಡಾಮರೀಕರಣಗೊಂಡ 1.5 ಕಿ.ಮೀ ರಸ್ತೆಯಲ್ಲಿಯೂ ಸಹ ಡಾಮರು ಎದ್ದು ಹೋಗಿ ಹೊಂಡಗುಂಡಿಗಳು ನಿರ್ಮಾಣವಾಗಿದೆ. ಸುಮಾರು 4 ಕಿ.ಮೀ.ಯಷ್ಟು ಉದ್ದವಿರುವ ಈ ರಸ್ತೆಯ 200ಮೀ.ನಷ್ಟು ಭಾಗಕ್ಕೆ ಮಾತ್ರ ಕಾಂಕ್ರೀಟ್‌ ಅಳವಡಿಸಿ ಉಳಿದ ಬಹುಪಾಲು ರಸ್ತೆಯನ್ನು ಜನಪ್ರತಿನಿಧಿಗಳು ಮರೆತಿದ್ದಾರೆ ಎಂಬುದು ಸ್ಥಳೀಯರ ಅಳಲು.

ಕಳೆದ ಹಲವು ದಶಕಗಳಿಂದ ಬಾಳೆಹಿತ್ಲು ರಸ್ತೆಗೆ ಡಾಮರು ಹಾಕಿ ಅಭಿವೃದ್ಧಿಗೊಳಿಸುವಂತೆ ನಿರಂತರ ಮನವಿ ಮಾಡಿದರೂ ಇಲಾಖೆಯ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ರಸ್ತೆ ಅಭಿವೃದ್ಧಿಗೆ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ರಸ್ತೆ ದುಸ್ಥಿತಿಯಿಂದಾಗಿ ಈ ಭಾಗದ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತೀನಿತ್ಯ ನಡೆದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಗಾಲದಲ್ಲಿ ರಸ್ತೆ ಯಲ್ಲಿಯೇ ನೀರು ನಿಲ್ಲುವುದರಿಂದ ನಡೆದಾಡುವುದೂ ಅಸಾಧ್ಯಎಂದು ಸ್ಥಳೀಯರು ನೋವಿನಿಂದ ಹೇಳುತ್ತಾರೆ.

Advertisement

ಪಂಚಾಯತ್‌ಲ್ಲಿ ಈ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಇಲ್ಲದೇ ಇರುವುದರಿಂದ ಸ್ಥಳೀಯರ ಸಂಚಾರಕ್ಕೆ ಸ್ವಲ್ಪ ಮಟ್ಟಿಗಾದರೂ ಅನುಕೂಲ ಮಾಡಿ ಕೊಡುವ ದೃಷ್ಟಿಯಲ್ಲಿ ಪ್ರತೀ ವರ್ಷ ಮಣ್ಣು ತುಂಬಿಸಿ ಹೊಂಡಗುಂಡಿಗಳನ್ನು ಮುಚ್ಚುತ್ತಿದೆೆ. ಈ ಬಾರಿಯೂ ಹಿರ್ಗಾನ ಪಂಚಾಯತ್‌ ಆಡಳಿತವು ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಹೊಂಡಗುಂಡಿಗಳಿಗೆ ಮಣ್ಣು ತುಂಬಿಸಿ ಅತೀ ಅಗತ್ಯವಿರುವ ಮೋರಿಯನ್ನು ನಿರ್ಮಿಸಿದೆ. ಆದರೆ ಬೇಸಿಗೆಯಲ್ಲಿ ಹಾಕಿರುವ ಈ ಮಣ್ಣು ಮಳೆಗಾಲದಲ್ಲಿ ಮತ್ತೆ ಕೊಚ್ಚಿಹೋಗುವುದರಿಂದ ಅನುದಾನ ನಿಷ್ಪ್ರಯೋಜಕವಾಗುತ್ತಿದೆ.

ಮನವಿ ಮಾಡಲಾಗಿದೆ
ಪಂಚಾಯತ್‌ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬಾಳೆಹಿತ್ಲು ರಸ್ತೆಯೂ ಒಂದು. ಈ ರಸ್ತೆ ಅಭಿವೃದ್ಧಿಪಡಿಸಲು ಬಹಳಷ್ಟು ಅನುದಾನ ಬೇಕಾಗಿರುವುದರಿಂದ ಜಿಲ್ಲಾ ಪಂಚಾಯತ್‌ ಸದಸ್ಯರು, ಶಾಸಕರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಪಂಚಾಯತ್‌ನ ಅಲ್ಪ ಪ್ರಮಾಣದ ಅನುದಾನದಲ್ಲಿ  ಪ್ರತೀವರ್ಷ ಹೊಂಡಗುಂಡಿಗಳನ್ನು ಮುಚ್ಚಲಾಗುತ್ತಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಹಿರ್ಗಾನ ಗಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next