Advertisement

ಬಾಳೆ ಬಾಳು; ಲಾಭ ಕೇಳು

12:24 PM Mar 27, 2017 | Harsha Rao |

ಮಲೆನಾಡಿನ ಭಾಗದಲ್ಲಿ ಹೊಸದಾಗಿ ಅಡಿಕೆ ತೋಟದ ಕೃಷಿ ಆರಂಭಿಸಿದಾಗ ಅಡಿಕೆ ನಡುವೆ ಅಂತರ್‌ ಬೆಳೆಯಾಗಿ ಯಾವುದಾದರೂ ಒಂದು ಬೆಳೆ ಬೆಳೆಯುತ್ತಾರೆ. ಇದರಿಂದ ಅಡಿಕೆ ಫ‌ಸಲು ಬರುವವರೆಗೆ ಕೃಷಿ ವೆಚ್ಚ,ನೀರಾವರಿ ವ್ಯವಸ್ಥೆ, ಗೊಬ್ಬರ ಮತ್ತು ಕೂಲಿ ನಿರ್ವಹಣೆಯ ಖರ್ಚು ಉಳಿತಾಯವಾಗಿ ಫ‌ಸಲಿನ ಮಾರಾಟದಿಂದ ಲಾಭ ಸಹ ಸಿಗುತ್ತದೆ. 
ಇದೇ ತಂತ್ರವನ್ನು ಜಗದೀಶ್‌ ಮಾಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಎಲ್‌.ಜಗದೀಶ ಗವಟೂರು ಗ್ರಾಮದಲ್ಲಿ ಅಡಿಕೆ ಗಿಡಗಳ ನಡುವೆ ನೇಂದ್ರ ಬಾಳೆಯ  ಕೃಷಿ ನಡೆಸುತ್ತಿದ್ದು ಸಾಕಷ್ಟು ಆದಾಯ ಪಡೆದು ಯಶಸ್ಸಿನ ನಗು ಬೀರುತ್ತಿದ್ದಾರೆ.

Advertisement

 ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಗವಟೂರಿನಲ್ಲಿ ಇವರ ಹೊಲವಿದೆ.  ಇವರು ಅಡಿಕೆ ಸಸಿ ಹೊಸದಾಗಿ ನೆಟ್ಟಿರುವ ಕೃಷಿ ಭೂಮಿ ಖುಷ್ಕಿ ಭೂಮಿಯಾಗಿದ್ದು ಕೊಳವೆ ಬಾವಿಯ ನೀರಾವರಿ ರೂಪಿಸಿಕೊಂಡಿದ್ದಾರೆ. 

ಕೃಷಿ ಹೇಗೆ?
ಕಳೆದ ವರ್ಷ ಅಂದರೆ 2015ರ ಮೇ ಅಂತ್ಯದ ಸುಮಾರಿಗೆ ಇವರು ಅಡಿಕೆ ಸಸಿ ನಾಟಿ ಮಾಡಿದ್ದರು. ಅಡಿಕೆ ಸಸಿ ಚಿಗುರಿ ಬೆಳೆಯುತ್ತಿದ್ದಂತೆ ಆದಾಯ ಪಡೆಯುವ ಅಂತರ್‌ ಬೆಳೆ ಪಡೆಯಲು ನಿರ್ಧರಿಸಿದರು. ಅದಕ್ಕಾಗಿ 2015ರ ಡಿಸೆಂಬರ್‌ ಮೊದಲವಾರ ಅಡಿಕೆ ಗಿಡಗಳ ನಡುವೆ ನೇಂದ್ರಬಾಳೆ ಸಸಿ ನೆಟ್ಟರು. ಗಿಡ ನೆಡುವಾಗ 1.5 ಆಳ ಮತ್ತು ಸುತ್ತಳತೆ ಇರುವ ಗುಂಡಿ ನಿರ್ಮಿಸಿ, ಥಿಮೆಟ್‌ ಹಾಗೂ ಹಸಿರೆಲೆ ಗೊಬ್ಬರ ಹಾಕಿದ್ದರು. 6 ಅಡಿ ಅಂತರ್‌ ಬರುವಂತೆ ಒಟ್ಟು 2000 ನೇಂದ್ರಬಾಳೆ ಗಿಡ ಬೆಳೆಸಿದ್ದರು. ಗಿಡ ನೆಟ್ಟು 25 ದಿನವಾಗುತ್ತಿದ್ದಂತೆ ಪೊಟ್ಯಾಷ್‌ ಮತ್ತು ಯೂರಿಯಾ ಮಿಶ್ರಿತ ಗೊಬ್ಬರ ಪ್ರತಿ ಗಿಡಕ್ಕೆ ಸರಾಸರಿ 100 ಗ್ರಾಂ.ನಷ್ಟು ನೀಡಿದರು. ನಂತರ ಪ್ರತಿ ಒಂದು ತಿಂಗಳಿಗೆ ಒಮ್ಮೆಯಂತೆ ಪ್ರತಿ ಗಿಡಕ್ಕೆ ಸರಾಸರಿ 100 ಗ್ರಾಂ.ನಷ್ಟು 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಅಡಿಕೆ ಸಸಿಗಳಿಗೆ ಅಳವಡಿಸಿದ ಸ್ಪ್ರಿಂಕ್ಲರ್‌ ನೀರು ಬಾಳೆ ಸಸಿಗೂ ಸಿಗುವ ಕಾರಣ ಪ್ರತ್ಯೇಕ ನೀರಾವರಿ ವ್ಯವಸ್ಥೆ ಮಾಡಲಿಲ್ಲ. ಗಿಡ ನೆಟ್ಟು 7 ತಿಂಗಳಾಗುತ್ತಿದ್ದಂತೆ  ಹೂ ಬಿಟ್ಟು ಗೊನೆ ಅರಳಾಲರಂಭಿಸಿದವು. ಗೊನೆ ಬಂದ ಮೂರು ತಿಂಗಳಿಗೆ ಫ‌ಸಲ ಕಟಾವಿಗೆ ಸಿದ್ಧವಾಯಿತು.

ಲಾಭದ ಲೆಕ್ಕಾಚಾರ
ಇವರು ತಮ್ಮ ಅಡಿಕೆ ಸಸಿ ಬೆಳೆಸಿದ 2 ಎಕರೆ ವಿಸ್ತೀರ್ಣದ ಹೊಲದಲ್ಲಿ ಅಂತರ್‌ ಬೆಳೆಯಾಗಿ ಈ ಬಾಳೆ ಕೃಷಿ ನಡೆಸಿದ್ದಾರೆ. ಬಾಳೆ ಸಸಿ ಎತ್ತರಕ್ಕೆ ಬೆಳೆದ ಕಾರಣ ಅಡಿಕೆ ಸಸಿಗಳಿಗೆ ಒಳ್ಳೆಯ ನೆರಳು ದೊರೆತು ಹುಲುಸಾಗಿ ಬೆಳೆದಿವೆ. ಇವರು ಒಟ್ಟು 2,000 ನೇಂದ್ರಬಾಳೆ ಸಸಿ ಬೆಳೆಸಿದ್ದಾರೆ. ಪ್ರತಿ ಗಿಡದಂದ ಸರಾಸರಿ 18 ಕಿ.ಗ್ರಾಂ.ತೂಕದ ಬಾಳೆ ಗೊನೆಗಳು ದೊರೆತಿವೆ. ನೇಂದ್ರ ಬಾಳೆಕಾಯಿಗಳು ಚಿಪ್ಸ್‌, ಹಪ್ಪಳ ಇತ್ಯಾದಿಗಳಿಗೆ ಬಹಳ ಬೇಡಿಕೆಯಿಂದ ಮಾರಾಟವಾಗುತ್ತವೆ. ಈ ವರ್ಷ ಉಳಿದ ಬಾಳೆಗಳಾದ ಪುಟ್‌ ಬಾಳೆ, ಏಲಕ್ಕಿ ಬಾಳೆ, ಜಿ9 , ಇತ್ಯಾದಿಗಳಿಗೆ ಸರಾಸರಿ ದರ ಕಿ.ಗ್ರಾಂ.ಒಂದಕ್ಕೆ ರೂ 10 ರಿಂದ 15 ರೂ.ಇದ್ದರೆ ನೇಂದ್ರಬಾಳೆಗೆ ಕಿ.ಗ್ರಾಂ.ಒಂದಕ್ಕೆ ರೂ.40 ಮಾರುಕಟ್ಟೆ ದರ ದೊರೆತಿದೆ. ಇವರು ಬೆಳೆಸಿದ ಬಾಳೆ ಗಿಡಗಳು ಸುಮಾರು 400 ಗಿಡಗಳು ಬಹುಬೇಗ ಫ‌ಸಲು ನೀಡಿದ ಕಾರಣ ಡಿಸೆಂಬರ್‌ ಮೊದಲವಾರ ಕಟಾವು ಮಾಡಿ ಮಾರಿದ್ದಾರೆ. ಇದರಿಂದ ಇವರಿಗೆ ಒಟ್ಟು 7 ಟನ್‌ ಬಾಳೆಗೊನೆ ದೊರೆತಿದೆ. ಇದರಿಂದ ಇವರಿಗೆ ಒಟ್ಟು ರೂ.2 ಲಕ್ಷ 80 ಸಾವಿರ ಆದಾಯ ದೊರೆತಿದೆ. ಬಾಳೆ ಸಸಿ ಖರೀದಿ, ಗುಂಡಿ ತೆಗೆದು ನಾಟಿ,ಗೊಬ್ಬರ, ನೀರಾವರಿ ಖರ್ಚು ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.1.25 ಲಕ್ಷ ಖರ್ಚು ಬಂದಿದೆ. ಆದರೂ ಸಹ 1.50 ಲಕ್ಷ ರೂ.ಲಾಭ ದೊರೆತಿದೆ. 

ಮಾಹಿತಿಗೆ -9972661820.

Advertisement

– ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next