ಕದಳಿ ಬಾಳೆ ಹಣ್ಣು ಸಾಂಪ್ರದಾಯಿಕ ಆಚರಣೆಗಳು, ಪೂಜೆ, ಆಹಾರ ಪದ್ಧತಿಗಳಲ್ಲಿ, ಔಷಧೀಯವಾಗಿಯೂ ಅತ್ಯಂತ ಪ್ರಮುಖವಾಗಿ ಬಳಕೆಯಾಗುವ ಹಣ್ಣು. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರೈತರು ಪ್ರಮುಖ ಬೆಳೆಯಾಗಿ ಅಲ್ಲದಿದ್ದರೂ ಉಪಬೆಳೆಯಾಗಿ ಕದಳಿ ಬಾಳೆ ಕೃಷಿಯ ಕಡೆಗೆ ಒಲವು ತೋರಬೇಕಾಗಿದೆ.
ಕರಾವಳಿ ಭಾಗದಲ್ಲಿ ಕದಳಿ ಬಾಳೆ ಕೃಷಿ ನೇಂದ್ರ, ಕ್ಯಾವಂಡಿಸ್‌ನಂತೆ ಮುಖ್ಯಬೆಳೆಯಾಗಿ, ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು. ಆದರೆ ವಾಣಿಜ್ಯ ಬೆಳೆಯಾಗಿ ಬೆಳೆಸುವ ಬಾಳೆ ತಳಿಗಳ ಮಧ್ಯೆ ಕದಳಿ ಬಾಳೆಯನ್ನು ಬೆಳೆಸುವವರು ವಿರಳವಾಗಿದ್ದಾರೆ.
ಕದಳಿ ಬಾಳೆ ಹಣ್ಣನ್ನು ಹೆಚ್ಚಾಗಿ ದ.ಕ., ಕಾಸರಗೋಡು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಾಸರಗೋಡು, ಹಾಸನ ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕದಳಿ ಬಾಳೆಯಲ್ಲೂ ನೈಕದಳಿ, ಕಾವಿರ ಕದಳಿ, ಏಲಕ್ಕಿ ಕದಳಿ ಮೊದಲಾದ ಉಪ ತಳಿಗಳಿವೆ.
ಕದಳಿ ಬಾಳೆಗಿಡ ಮುಖ್ಯವಾಗಿ ಕಾಂಡಹುಳು ಬಾಧೆಗೆ ಒಳಗಾಗುತ್ತಿರುವುದು, ಮುಂಡುತಿರಿಗೆ ಒಳಗಾಗುವುದು. ಗೊನೆ ಹಾಕುವಾಗ ದರವಿಲ್ಲದಿರುವುದು, ಉಳಿದ ಬಾಳೆ ಗಿಡಗಳಿಗಿಂತ ಫಲ ನೀಡಲು ಹೆಚ್ಚು ಸಮಯ ಹಿಡಿಯುವುದು, ವಾಣಿಜ್ಯ ಬೆಳೆಯಾಗಿ ಕದಳಿ ಬೆಳೆಯನ್ನು ಬೆಳೆಸಲು ಆಸಕ್ತಿ ತೋರದಿರುವುದು, ತೂಕ, ಗಾತ್ರದಲ್ಲಿ ಉಳಿದ ಬಾಳೆತಳಿಗಳಿಗಿಂತ ಕಡಿಮೆ ತೂಗುವುದರಿಂದ ಬೆಲೆಯೂ ಕಡಿಮೆ ಲಭಿಸುವುದು ಕದಳಿ ಒಲವು ಕಡಿಮೆಯಾಗಲು ಕಾರಣವಾಗಿದೆ.
ಹಣ್ಣಿನ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಹಣ್ಣಿಗೆ ಹಾಗೂ ಕದಳಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ನೇಂದ್ರ ಬಾಳೆಹಣ್ಣಿನ ಬೆಳೆಗಾರರು ಇಲ್ಲಿ ಹೆಚ್ಚು ಇಲ್ಲದಿದ್ದರೂ ಕದಳಿ ಬಾಳೆಹಣ್ಣನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದರು. 5 ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 50 ಪ್ರಮಾಣದಲ್ಲಿ ಕದಳಿ ಬಾಳೆ ಕಡಿಮೆಯಾಗಿದೆ ಎನ್ನುತ್ತಾರೆ ಬಾಳೆಹಣ್ಣಿನ ವ್ಯಾಪಾರಿಗಳು.
ದರ ಏರುಪೇರಾಗುವುದಿಲ್ಲ
ಕದಳಿ ಬಾಳೆಗೆ ಹೆಚ್ಚು ಬೇಡಿಕೆ ಇದೆ. ಆದರೆ ಬೆಳೆಯುವವರ ಪ್ರಯಾಣ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಮನೆಗೆ ಬಂದು ಖರೀದಿಸುತ್ತಾರೆ. ಉಳಿದ ಬಾಳೆಹಣ್ಣುಗಳ ದರದಲ್ಲಿ ಹೆಚ್ಚಿನ ಏರುಪೇರು ಉಂಟಾದರೂ ಕದಳಿಗೆ ಈ ರೀತಿ ಆಗುವುದಿಲ್ಲ. ಪ್ರಸ್ತುತ ಉಳಿದವುಗಳಿಗಿಂತಲೂ ಕದಳಿ ಬಾಳೆ ಹೆಚ್ಚು ಆದಾಯ ತಂದುಕೊಡುತ್ತಿದೆ.
– ರಾಜೇಶ್ ಪಟ್ಟೆ