Advertisement

ಬಾಳಿಗೆ ಬಾಳೆ

06:00 AM Aug 06, 2018 | |

ಬಾಳೆ ಕೃಷಿಯಿಂದ ಬದುಕನ್ನು ಬಂಗಾರವಾಗಿಸಿಕೊಂಡ ಕೃಷಿಕನೊಬ್ಬನ ಯಶೋಗಾಥೆ ಇದು. ಹತ್ತು ವರ್ಷದ ಹಿಂದೆ ನಾಟಿ ಮಾಡಿದ ಕೊಳೆಯೇ ಪ್ರತಿ ವರ್ಷವೂ ಹೊಸದಾಗಿ ಚಿಗುರೊಡೆದು ಭರ್ತಿ ಫ‌ಲ ನೀಡುತ್ತಿರುವುದು ವಿಶೇಷ ಸಂಗತಿ. 

Advertisement

ಒಂದೆರಡು ವರ್ಷ ಬಾಳೆ ಕೃಷಿ ಮಾಡಿ, ನಂತರ, ಇದ್ಯಾರೋ ನಮಗೆ ಸರಿಹೊಂದುತ್ತಿಲ್ಲ ಎಂದು ಗೊಣಗಿ, ಅದರಿಂದ ದೂರ ಸರಿಯುವವರೇ ಹೆಚ್ಚು. ಹಾಗೊಂದು ವೇಳೆ ಮುಂದುವರೆಸಿದರೂ ಸ್ಥಳ ಬದಲಾಯಿಸಿ, ಗಿಡ ಬದಲಿಸಿ, ಬಾಳು ಬೆಳಗಿಸಿಕೊಳ್ಳುವ ರೈತರು ಸಾಮಾನ್ಯ.  ಆದರೆ ಇಲ್ಲೊಬ್ಬರು ರೈತರಿದ್ದಾರೆ. ಇವರು ಹನ್ನೊಂದು ವರ್ಷಗಳಿಂದ ಬಾಳೆ ಕೃಷಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಚ್ಚರಿಯೇನೆಂದರೆ ಅರ್ಧ ಎಕರೆಯಲ್ಲಿ ಹನ್ನೊಂದು ವರ್ಷದ ಹಿಂದೆ ನಾಟಿ ಮಾಡಿದ ಬಾಳೆಯ ಕೂಳೆ ಬೆಳೆಯಿಂದಲೇ ಈಗಲೂ ಫ‌ಸಲು ಪಡೆಯುತ್ತಿದ್ದಾರೆ. ಕ್ರಮವಾಗಿ ಹತ್ತು ವರ್ಷದ, ಎಂಟು ವರ್ಷದ, ಆರು ವರ್ಷದ ಅರ್ಧರ್ಧ ಎಕರೆ ಕೂಳೆ ಬಾಳೆ ಇವರ ಜಮೀನಿನಲ್ಲಿ ನೋಡಲು ಸಿಗುತ್ತದೆ. ಬಾಳೆ ಇವರ ಪಾಲಿಗೆ ಬಾಳು ಬೆಳಗುವ ಸರಕಾಗಿದೆ.

ಏನಿದು ಕೃಷಿ?
ಕೂಳೆ ಬಾಳೆಯ ಮೇಲೆ ಅತೀವ ವಿಶ್ವಾಸ ಹೊಂದಿರುವ ರೈತ ಬಸವರಾಜ್‌ ನಿಂಗಪ್ಪ ರಾಮಗೊಂಡನವರ್‌ ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ ಗ್ರಾಮದವರು. ಇವರಿಗೆ ಐದು ಎಕರೆ ಜಮೀನು ಇದೆ.  ಒಂದು ಎಕರೆ ತಗ್ಗಿನ ಪ್ರದೇಶ. ಮಳೆಗಾಲದಲ್ಲಿ ವಿಪರೀತ ನೀರು ನಿಲ್ಲುವ ಜಾಗ. ಇಲ್ಲಿ ಭತ್ತದ ಕೃಷಿ ಹೊರತಾಗಿ ಇನ್ನೇನೂ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದಾರೆ. ಸಹಜವಾಗಿಯೇ ವರ್ಷಕ್ಕೊಂದು ಭತ್ತದ ಬೆಳೆ ಸಿಗುತ್ತದೆ. ಮೂರು ಎಕರೆಯಲ್ಲಿ ಬಾಳೆ. ಅರ್ಧ ಎಕರೆಯನ್ನು ತರಕಾರಿಗೆ ಮೀಸಲಿಟ್ಟಿದ್ದಾರೆ. ಬಾಳೆ ಕೃಷಿಗೆ ತಗಲುವ ಗೊಬ್ಬರದ ಖರ್ಚು, ಕೂಲಿಯ ವೆಚ್ಚವನ್ನು ತರಕಾರಿಯಿಂದ ನೀಗಿಸಿಕೊಳ್ಳಬೇಕು ಎನ್ನುವ ಆಲೋಚನೆ ಇವರದು. ಹಾಗಾಗಿ ಟೊಮೆಟೊ, ಬದನೆ, ಎಲೆಕೋಸು, ಹೂಕೋಸು ಮತ್ತು ವಿವಿಧ ಬಗೆಯ ಸೊಪ್ಪು-ತರಕಾರಿಗಳನ್ನು ಬೆಳೆಯುತ್ತಾರೆ. ಸಣ್ಣ ಭೂಮಿಯಲ್ಲಿ ತರಕಾರಿಯಿಂದ ಸಿಗುವ ಆದಾಯ ಲಕ್ಷ ರೂಪಾಯಿ ದಾಟುತ್ತದೆ.

ಬಾಳು ಬೆಳಗಿದ ಬಾಳೆ
ಹನ್ನೊಂದು ವರ್ಷಗಳ ಹಿಂದೆ ಜೋಳ ಬೆಳೆಯುತ್ತಿದ್ದ ಮೂರು ಎಕರೆಯಲ್ಲಿ ಅರ್ಧ ಎಕರೆಯನ್ನು ಬಾಳೆಗಾಗಿ ಒಗ್ಗಿಸಿದ್ದರು. ಜಿ.9 ತಳಿಯ ಬಾಳೆ ನಾಟಿ. ಮೊದಲ ಬೆಳೆಯೇ ಅಬ್ಬರಿಸಿ ಬಂದಿತ್ತು. 40-60 ಕೆಜಿ ತೂಗಬಲ್ಲ ಗೊನೆಗಳು ಇವರನ್ನು ಅಚ್ಚರಿಗೆ ನೂಕಿದ್ದವು.  ಜೋಳದಿಂದ ಗಳಿಸುವ ಮೊತ್ತ, ಅರ್ಧ ಎಕರೆಯಲ್ಲೇ ದೊರೆತ ಖುಷಿ ಇವರನ್ನು ಬಾಳೆಕೃಷಿಯಲ್ಲಿ ಉತ್ಸಾಹ ಇಮ್ಮಡಿಯಾಗುವಂತೆ ಮಾಡಿತ್ತು. ವರ್ಷದ ಬಳಿಕ ಇನ್ನರ್ಧ ಎಕರೆಗೆ ಬಾಳೆ ವಿಸ್ತರಿಸಿದ್ದರು. ನಂತರ ಮೂರು ಎಕರೆ ಜೋಳ ಬೆಳೆಯುವ ಭೂಮಿಯಲ್ಲಿ ಬಾಳೆ ಗಿಡಗಳು ತಲೆಯೆತ್ತಿ ನಿಂತವು.

ಒಮ್ಮೆ ನೆಟ್ಟ ಗಿಡಗಳಲ್ಲಿ ಕೂಳೆ ಬೆಳೆಯಿಂದ ಕೃಷಿ ಮುಂದುವರೆಸಿದ್ದಾರೆ. ಮೊದಲು ಊರಿದ ಗಡ್ಡೆಗಳನ್ನು ಕಿತ್ತೂಗೆದು ಹೊಸ ಗಿಡಗಳ ನಾಟಿ ಮಾಡಿಲ್ಲ. ಗೊನೆ ಕತ್ತರಿಸಿದ ಬಳಿಕ ಹಂತ ಹಂತವಾಗಿ ಬಾಳೆ ಗಿಡಗಳನ್ನು ಕಡಿದೊಗೆದಾಗ ಪಕ್ಕದಲ್ಲಿ ಮೊಳೆತ ಗಿಡ, ತಾಯಿ ಬಾಳೆಯಿಂದ ತಾಕತ್ತನ್ನು ಹೀರಿಕೊಂಡು ಸದೃಢವಾಗಿ ಬೆಳೆಯುತ್ತಿದೆ. ಹೀಗಿರುವಾಗ ಹೊಸ ಗಿಡಗಳಿಗಾಗಿ ನಾನೇಕೆ ಹಣ ಖರ್ಚು ಮಾಡಬೇಕು? 50-60 ಕೆಜಿ ತೂಕದ ಗೊನೆಗಳು ಈಗಲೂ ಸಿಗುತ್ತಿವೆ ಎನ್ನುತ್ತಾ ನೇತುಬಿದ್ದ ಉದ್ದನೆಯ ಗೊನೆಯಲ್ಲಿನ ಚಿಪ್ಪುಗಳನ್ನು ಎಣಿಸಿ ಲೆಕ್ಕ ಹೇಳ ತೊಡಗಿದರು ಬಸವರಾಜ್‌. ಒಂದೊಂದು ಗೊನೆಯಲ್ಲಿ 13-16 ಚಿಪ್ಪುಗಳಿದ್ದವು. ಸರಾಸರಿ 180-200 ಬಾಳೆ ಕಾಯಿಗಳು ನೆರೆತಿದ್ದವು.

Advertisement

ವರ್ಷಪೂರ್ತಿ ಇವರಲ್ಲಿ ಬಾಳೆಗೊನೆ ಕಟಾವಿಗೆ ಲಭ್ಯವಿರುತ್ತದೆ. ಪ್ರತೀ ಇಪ್ಪತ್ತು ದಿನಕ್ಕೊಮ್ಮೆ ಕಟಾವು ಮಾಡುತ್ತಾರೆ. ಪ್ರತೀ ಕಟಾವಿನಲ್ಲಿ 10-15 ಟನ್‌ ಇಳುವರಿ ಪಡೆಯುತ್ತಾರೆ. ವ್ಯಾಪಾರಸ್ಥರು ತೋಟಕ್ಕೇ ಬಂದು ಬಾಳೆ ಗೊನೆ ಖರೀದಿಸಿ ಒಯ್ಯುತ್ತಾರೆ. ಕೆ.ಜಿ ಬಾಳೆಗೆ 8-10 ರೂಪಾಯಿ ದರ ಪಡೆಯುತ್ತಿದ್ದಾರೆ. ಬಾಳೆ ಗಿಡಗಳನ್ನು ನಾಟಿ ಮಾಡಿದಾಗ ಗಿಡ ಹಾಗೂ ಸಾಲಿನ ಮಧ್ಯೆ ತರಕಾರಿ ಕೃಷಿ ಮಾಡುತ್ತಿರುವುದು ಇವರ ವಿಶೇಷತೆ. ಕಳೆದ ಬಾರಿ ನಾಟಿ ಮಾಡಿದ ಅರ್ಧ ಎಕರೆಯಲ್ಲಿ ಎಲೆಕೋಸು ಬೆಳೆದಿದ್ದರು. 80 ದಿನಕ್ಕೆ ಕಟಾವು ಆರಂಭಿಸಿದ್ದರು. ಖರ್ಚು ಕಳೆದು 35,000 ರೂ. ಲಾಭ ಗಳಿಸಿದ್ದನ್ನು ನೆನಪಿಸಿಕೊಂಡರು.

ಕಲ್ಲು ಭೂಮಿಯಲ್ಲಿ ಬಾಳೆ ಪಳಗಿಸಿದರು
ಕಳೆದ ವರ್ಷ ಬಾಳೆ ಕೃಷಿಯನ್ನು ಬಾಕಿ ಉಳಿದ ಅರ್ಧ ಎಕರೆಗೆ ವಿಸ್ತರಿಸಬೇಕೆಂದು ನಿರ್ಧರಿಸಿದ ಇವರಿಗೆ ಸವಾಲೊಂದು ಎದುರಾಯ್ತು. ಭೂಮಿ ಪೂರ್ತಿ ಕಲ್ಲುಗಳಿಂದ ತುಂಬಿತ್ತು. ಅರ್ಧ ಎಕರೆಯಲ್ಲಿ ಜೋಳದ ಕೃಷಿ ಮುಂದುವರೆಸಿದರೆ ಅಷ್ಟೇನೂ ಲಾಭದಾಯಕವಾಗುವುದಿಲ್ಲ. ಸಣ್ಣ ಭೂಮಿಯಲ್ಲಿ ಜೋಳ ಬೆಳೆಯುವುದರಿಂದ ಒಕ್ಕಣೆ, ಫ‌ಸಲು ಸಾಗಿಸುವಿಕೆ ಸಮಸ್ಯೆ ಪ್ರತೀ ವರ್ಷ ಮರುಕಳಿಸುತ್ತಲೇ ಇರುತ್ತದೆ. ಹಾಗಾಗಿ, ಈ ಅರ್ಧ ಎಕರೆಯನ್ನು ಬಾಳೆ ಕೃಷಿಗೇ ಪಳಗಿಸಬೇಕೆಂದು ನಿರ್ಧರಿಸಿದರು. ಅಲ್ಲಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳಿದ್ದವು ಅವುಗಳನ್ನು ಸುಲಭದಲ್ಲಿ ಸರಿಸುವಂತಿರಲಿಲ್ಲ.

ಒಡೆಯುವಂತಿರಲಿಲ್ಲ. ಈ ಕಲ್ಲು ಭೂಮಿಯಲ್ಲಿ ಬಾಳೆ ಕೃಷಿ ಅಸಾಧ್ಯ. ಯೋಚನೆ ಕೈ ಬಿಡುವುದೇ ಒಳಿತು ಎಂದರು ಹಲವರು. ಆದರೆ ಇವರ ನಿರ್ಧಾರ ದೃಢವಾಗಿತ್ತು. ಜೆ.ಸಿ.ಬಿಯಿಂದ ಕಲ್ಲು ಬಂಡೆಗಳನ್ನು ಒಂದು ಕಡೆ ರಾಶಿ ಹಾಕಿಸತೊಡಗಿದರು. ಇನ್ನೊಂದು ಪಕ್ಕದಲ್ಲಿ ಮಣ್ಣು ಸುರಿಸತೊಡಗಿದರು. ಇಪ್ಪತ್ತು ಗುಂಟೆ ಜಮೀನಿನ ಮಣ್ಣು ಹಾಗೂ ಕಲ್ಲುಗಳನ್ನು ಜೆ.ಸಿ.ಬಿ ಪ್ರತ್ಯೇಕಗೊಳಿಸಿತ್ತು. ಹನ್ನೆರಡು ಅಡಿ ಆಳದ ತಗ್ಗು ರೂಪುಗೊಂಡಿತ್ತು. ಅರ್ಧ ಎಕರೆ ಜಮೀನಿನಲ್ಲಿ ಇಷ್ಟೊಂದು ಆಳದ ಗುಂಡಿ ತೆಗೆದು ಇದೇನು ಮಾಡುತ್ತಾನೆ ಇವನು? ಎಂದು ಕುತೂಹಲದಿಂದ ಇವರ ಹೊಲದತ್ತ ಜನ ಸುಳಿಯತೊಡಗಿದ್ದರು. ಕಲ್ಲುಗಳಿಂದ ಎಂಟು ಅಡಿಗಳಷ್ಟು ಹೊಂಡವನ್ನು ಮುಚ್ಚಿದರು. ಉಳಿಕೆ ನಾಲ್ಕು ಅಡಿ ಮಗದೊಂದು ಪಕ್ಕದಲ್ಲಿರುವ ಮಣ್ಣನ್ನು ಕಲ್ಲಿನ ಮೇಲೆ ಸುರಿಯೆಂದರು. ಹೊಂಡ ತುಂಬಿ ಭೂಮಿಗೆ ಸರಿಸಮವಾಗಿತ್ತು. ತಿರುವು ಮುರುವುಗೊಂಡ ಭೂಮಿಯಲ್ಲಿ ಬಾಳೆ ನಾಟಿ ಮಾಡಲು ನಿರ್ಧರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯುಂದ ಆರ್ಥಿಕ ನೆರವು ಪಡೆದು ಜೈನ್‌ ತಳಿಯ ಜಿ9 ಬಾಳೆ ನಾಟಿ ಮಾಡಿದರು. ನಾಟಿ ಪೂರ್ವ ಭೂಮಿಯಲ್ಲಿ ಕುರಿ ತುರುಬಿಸಿದ್ದರು. ನಂತರ ಗಿಡದ ನಡುವೆ ಐದುವರೆ ಅಡಿ, ಸಾಲಿನ ನಡುವೆ ಆರು ಅಡಿ ಅಂತರದಲ್ಲಿ ಬಾಳೆ ನಾಟಿಗೆಂದು ಎರಡು ಅಡಿ ಆಳದ ಗುಣಿ ತೆಗೆದರು. ಗುಣಿಯಲ್ಲಿ ಎರಡು ಬುಟ್ಟಿ ಕೊಟ್ಟಿಗೆ ಗೊಬ್ಬರ, ಅರ್ಧ ಕಿ.ಲೋ.ಗ್ರಾಂ ಬೇವಿನ ಹಿಂಡಿ ಹಾಗೂ ಟ್ರೆ„ಕೋಡರ್ಮಾ ಹಾಕಿ ಬಾಳೆ ಗಿಡಗಳನ್ನು ನಾಟಿ ಮಾಡಿದರು.

ಗಿಡಗಳು ಹುಲುಸಾಗಿ ಎದ್ದು ನಿಂತಿವೆ. ಬಾಳೆ ಗೊನೆಗಳು ನೆರೆತು ನಿಂತಿವೆ. ಇನ್ನೊಂದು ತಿಂಗಳಲ್ಲಿ ಬಾಳೆಯ ಫ‌ಸಲು ಕಟಾವಿಗೆ ಸಿಗಲಿದೆ. ಮೂವತ್ತು ಟನ್‌ ಇಳುವರಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ನೀರಾವರಿಗಾಗಿ ಎರಡು ಕೊಳವೆ ಬಾವಿ ಹೊಂದಿದ್ದು ಡ್ರಿಪ್‌ ಅಳವಡಿಕೆ ಮಾಡಿಕೊಂಡಿದ್ದಾರೆ. ಕಾಲಕಾಲಕ್ಕೆ ಗೊಬ್ಬರ, ಔಷಧ ಸಿಂಪಡಿಸುತ್ತಾರೆ. ಬಾಳೆ ಕೃಷಿಯ ಜೊತೆ ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ನಾಲ್ಕು ಎಮ್ಮೆಗಳಿದ್ದು ದಿನಕ್ಕೆ ಮೂವತ್ತು ಲೀಟರ್‌ ಹಾಲು ಮಾರಾಟ ಮಾಡುತ್ತಾರೆ. ಲೀಟರ್‌ ವೊಂದಕ್ಕೆ ಮೂವತ್ತು ರೂ. ದರ ಸಿಗುತ್ತಿದೆ.

ಭಿನ್ನವಾಗಿ ಯೋಚಿಸಿ ಆದಾಯ ಗಳಿಕೆಗೆ ತರಕಾರಿ, ಹೈನುಗಾರಿಕೆ, ಅಂತರ ಬೇಸಾಯದಂತಹ ಕ್ರಮ ಅನುಸರಿಸಿ ಗೆದ್ದಿರುವ ಬಸವರಾಜ್‌ ರವರ ಸಾಧನೆ ಎಲ್ಲಿರಿಗೂ ಮಾದರಿ ಎನಿಸುತ್ತದೆ.

– ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next