Advertisement

ಬಾಳು ಬಂಗಾರವಾಗಿಸಿದ `ಬಾಳೆ’: ಬಾಳೆಗೆ ಬಂಗಾರದ ಬೆಲೆ…….!

02:35 PM Jul 15, 2022 | Team Udayavani |

ರಬಕವಿ-ಬನಹಟ್ಟಿ: ರಾಜ್ಯವಷ್ಟೇ ಅಲ್ಲದೆ ಈ ಬಾರಿ ದೇಶಾದ್ಯಂತ ಬಾಳೆ ಬೆಳೆಯ ಇಳುವರಿ ಕ್ಷೀಣಿಸಿದ್ದರ ಹಿನ್ನಲೆಯಲ್ಲಿ ಜವಾರಿಯಷ್ಟೇ ಹೈಬ್ರೀಡ್ ತಳಿಯ ಬಾಳೆಗೂ ಬಾರಿ ಬೇಡಿಕೆ ಬಂದಿದ್ದು, ಐತಿಹಾಸಿಕ ದಾಖಲೆ ಬರೆಯುವಂತಾಗಿದೆ.

Advertisement

ಹೌದು, ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಪ್ರತಿ ಕೆಜಿ ಬಾಳೆಗೆ 2 ರಿಂದ 3 ರೂ. ಇದ್ದದ್ದು, ಇದೀಗ 22 ರಿಂದ 23 ರೂ. ಗಳವರೆಗೆ ಏರಿಕೆ ಕಂಡಿದ್ದು, ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಇಷ್ಟೊಂದು ಬೆಲೆ ಏರಿಕೆ ಕಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಜವಾರಿ, ರಸಬಾಳೆ, ಏಲಕ್ಕಿ ಬಾಳೆ ಹಣ್ಣಿನಷ್ಟೇ ಹೈಬ್ರೀಡ್ ತಳಿಯ ಜಿ-9 ಬಾಳೆಯೂ ಸಮನಾದ ಬೆಲೆಗೆ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ಜನರು ಹೆಚ್ಚು ಕಡಿಮೆ ಸೇಬು, ಮಾವಿನ ಹಣ್ಣಿಗೆ ನೀಡುವಷ್ಟು ಹಣ ಕೊಟ್ಟು ಬಾಳೆ ಹಣ್ಣು ಖರೀದಿಸುವದು ಅನಿವಾರ್ಯವಾಗಿದೆ.

ರಾಜ್ಯದಲ್ಲಿ ಬೆಳೆಯವ ಬಾಳೆ ಬೆಳೆ ಉತ್ಪನ್ನದಲ್ಲಿ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಈಗ ತಮಿಳುನಾಡು, ಆಂಧ್ರ ರಾಜ್ಯಗಳಿಂದ ಬಾಳೆ ಆಮದು ಮಾಡಿಕೊಳ್ಳಲಾಗುತ್ತಿದ್ದರೂ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಜವಾಗಿ ಬಾಳೆಹಣ್ಣಿನ ಬೆಲೆ ಗಗನಕ್ಕೇರಿದೆ. ಕೆಲವಡೆ ಬಾಳೆಹಣ್ಣು ಮಾರಾಟಕ್ಕೆ ಸಿಗುತ್ತಿಲ್ಲ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಜಿ-9 ಬಾಳೆಯು ಕ್ವಿಂಟಲ್‌ಗೆ 2,200 ರಿಂದ 2,500 ರೂ.ವರೆಗೆ ಮಾರಾಟವಾಗುತ್ತಿದೆ.

ಬೆಳೆಗಾರರ ಸಂಖ್ಯೆ ಕ್ಷೀಣ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಪ್ರತಿ ವರ್ಷ ಸಾವಿರ ಎಕರೆಯಷ್ಟು ಬಾಳೆ ಬೆಳೆಯುತ್ತಿದ್ದರು. ಕಳೆದೆರಡು ವರ್ಷಗಳಿಂದ ಸತತ ಹಾನಿಯಿಂದಾಗಿ ಅನ್ಯ ಬೆಳೆಗೆ ರೈತರು ಮೊರೆ ಹೋದ ಕಾರಣ ಸುಮಾರು 200 ಎಕರೆಯಷ್ಟು ಬಾಳೆ ಮಾತ್ರ ದೊರಕುವಂತಾಗಿದೆ.

Advertisement

ಶ್ರಾವಣ ಸೇರಿದಂತೆ ಸಾಕಷ್ಟು ಹಬ್ಬಗಳು ಸರದಿಯಲ್ಲಿದ್ದು, ಇನ್ನೂ ಬೆಲೆ ಹೆಚ್ಚಾಗುವ ನಿರೀಕ್ಷೆಯಿದ್ದು, ಬಾಳೆ ಬೆಳೆದ ರೈತನಿಗೆ ನಿಜವಾಗಿಯೂ ಬಂಗಾರವಾಗಿದ್ದರೆ, ಖರೀದಿ ಮಾಡುವ ಗ್ರಾಹಕನಿಗೆ ಮಾತ್ರ ಬಾಳೆ ಬಿಸಿ ತುಪ್ಪವಾಗಿದೆ.

ಸಸಿಗಳ ಕೊರತೆ: ಮೂರ‍್ನಾಲ್ಕು ವರ್ಷಗಳಿಂದ ನರ್ಸರಿಗಳಿಗೆ ಬಾಳೆ ಸಸಿಯಿಂದ ಹಾನಿ ಅನುಭವಿಸಿರುವ ಕಾರಣ ಈ ಬಾರಿ ಸಸಿಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಗೆ ಕಾರಣವಾಗಿತ್ತು. ಇದೀಗ ಸಸಿ ಸಮಸ್ಯೆ ಎದುರಿಸುತ್ತಿರುವ ಹಿನ್ನಲೆ ರೈತರೂ ಸಸಿಗಳಿಗಾಗಿ ಅಲೆದಾಟ ತಪ್ಪಿಲ್ಲ.

ಜಿ-9 ತಳಿಯ ಬಾಳೆ ಈ ಬಾರಿ ಕೈ ಹಿಡಿದಿದೆ. ಹಿಂದೆಂದೂ ದೊರಕದಷ್ಟು ದಾಖಲೆಯ ಬೆಲೆ ಬಂದಿರುವದು ಸಂತಸ ತಂದಿದೆ. –ಗುರು ಉಳ್ಳಾಗಡ್ಡಿ, ಜಗದಾಳ ರೈತ.

ಬಾಳೆ ಹಣ್ಣಿನ ಬೆಲೆ ಒಂದೆರಡು ತಿಂಗಳಲ್ಲಿ ದುಪ್ಪಟ್ಟಾಗಿದೆ. ಬೇಡಿಕೆಗೆ ತಕ್ಕಂತೆ ಬಾಳೆಹಣ್ಣು ಸಿಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಉತ್ತರಿಸುವದೂ ಕಷ್ಟವಾಗಿದೆ. –ಬಸವರಾಜ ಬೆಳಗಲಿ, ಬಾಳೆ ವ್ಯಾಪಾರಿ, ಬನಹಟ್ಟಿ.

-ಕಿರಣ್‌ ಎಸ್. ಅಳಗಿ 

Advertisement

Udayavani is now on Telegram. Click here to join our channel and stay updated with the latest news.

Next