ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯಾದ್ಯಂತ ಪಟಾಕಿ ನಿ಼ಷೇಧಿಸಲು ನಿರ್ಧರಿಸಲಾಗಿದ್ದು, ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಹಾಗಾಗಿ ಈ ಬಾರಿ ದೀಪಾವಳಿಗೆ ಯಾವುದೇ ರೀತಿಯ ಪಟಾಕಿ ಬಳಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ. ಯಾರೂ ಪಟಾಕಿ ಹೊಡೆಯುವಂತಿಲ್ಲ ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಪಟಾಕಿ ನಿಷೇಧಿಸಲು ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದ್ದಾರೆ.
ಪಟಾಕಿ ಸೃಷ್ಟಿಸುವ ವಾಯು ಮಾಲಿನ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣ ಆಗಬಹುದು. ಈ ನಿಟ್ಟಿನಲ್ಲಿ ಪಟಾಕಿ ನಿಷೇಧ ಮಾಡುವುದು ಉತ್ತಮ ಎಂಬ ಸಲಹೆಗಳು ಸರ್ಕಾರಕ್ಕೆ ತಜ್ಞರು ನೀಡಿದ್ದಾರೆ. ತಜ್ಞರ ಸಲಹೆಗಳನ್ನು ಪರಿಗಣಿಸಿ ಪಟಾಕಿ ನಿಷೇಧದ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ:ಮದುವೆ ಸಮಾರಂಭಗಳಲ್ಲಿ ಸೇರುತ್ತಿದ್ದಾರೆ ಭಾರಿ ಜನರು! ಕಟ್ಟೆಚ್ಚರ ನೀಡಿದ ಉಡುಪಿ ಡಿಸಿ
ದಿಲ್ಲಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳಲ್ಲೂ ಪಟಾಕಿ ನಿಷೇಧ ಮಾಡಿ ಅಲ್ಲಿನ ಸರ್ಕಾರಗಳು ಆದೇಶ ನೀಡಿದೆ. ಈ ಪಟ್ಟಿಗೆ ಇದೀಗ ಕರ್ನಾಟಕವೂ ಸೇರ್ಪಡೆಯಾಗಿದೆ.