Advertisement

ದೇವರಾಯನದುರ್ಗ ರಾತ್ರಿ ಪ್ರವೇಶ ನಿಷೇಧಿಸಿ

03:19 PM Aug 18, 2020 | Suhan S |

ತುಮಕೂರು: ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ವಿವಿಧ ಜಾತಿಯ ಮರ ಗಿಡಗಳ ಪ್ರಾಕೃತಿಕ ಸೊಬಗಿನ ತಾಣ, ಕಲ್ಪತರು ನಾಡಿನ ಹವಾಮಾನ ನಿರ್ಧರಿಸುವ, ಹೆಚ್ಚು ಮಳೆ ತರಿಸುವ ದೇವರಾಯನದುರ್ಗ ಪ್ರಕೃತಿ ಸೊಬಗು ನೋಡಲು ಹೆಚ್ಚುತ್ತಿರುವ ಪ್ರವಾಸಿಗರಿಂದ ಇಲ್ಲಿಯ ಜೀವ ವೈವಿಧ್ಯಗಳು ನಾಶವಾಗುತ್ತಿವೆ.

Advertisement

ಕೈ ಬೀಸಿ ಕರೆವ ಪ್ರಕೃತಿ: ದೇವರಾಯನ ದುರ್ಗ ಅರಣ್ಯ ಪ್ರದೇಶವು ತುಮಕೂರು ನಗರ ಪ್ರದೇಶಕ್ಕೆ ಹೊಂದಿ ಕೊಂಡಿದ್ದು, ಪಂಡಿತನಹಳ್ಳಿ, ರಾಮದೇವರ ಬೆಟ್ಟ, ಗೊಲ್ಲಹಳ್ಳಿ ಮೀಸಲು ಅರಣ್ಯ ಹಾಗೂ ಪರಿ ಭಾವಿತ ಅರಣ್ಯ ಪ್ರದೇಶಗಳಿಂದ ಕೂಡಿರುವುದಲ್ಲದೇ ಈ ಪ್ರದೇಶದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ಯೋಗ  ನರಸಿಂಹ ಸ್ವಾಮಿ, ಶ್ರೀಭೋಗನರಸಿಂಹ ಸ್ವಾಮಿ ಹಾಗೂ ಶ್ರೀರಾಮಚಂದ್ರ ನೀರಿಗಾಗಿ ಬಾಣ ಹೊಡೆದು ಬಂಡೆಯಿಂದ ನೀರು ತೆಗೆದಿರುವ ನಾಮದ ಚಿಲುಮೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ನಿರ್ವಹಣೆ ಮಾಡುತ್ತಿರುವ ಜಿಂಕೆ ವನ ಇತ್ಯಾದಿ ಪ್ರವಾಸಿ ತಾಣಗಳ ಜೊತೆಗೆ ಇಲ್ಲಿಯ ಹಸಿರ ಸಿರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಪ್ರಾಣಿಗಳ ನಾಶ: ಈ ಸುಂದರ ಪ್ರವಾಸಿ ತಾಣಕ್ಕೆ ಜಿಲ್ಲೆಯಿಂದ ಅಲ್ಲದೇ ರಾಜ್ಯದ ವಿವಿಧ ಭಾಗ ಗಳಿಂದ ಪ್ರವಾಸಿಗರು ಯುವ ಪ್ರೇಮಿಗಳು, ಜೊತೆಗೆ ಕೆಲವರು ಮೋಜು ಮಸ್ತಿಗಾಗಿ ಬರುತ್ತಿದ್ದಾರೆ. ಮೋಜು ಮಸ್ತಿಗೆ ರಾತ್ರಿ ವೇಳೆಯಲ್ಲಿ ಹೆಚ್ಚು ಬರುತ್ತಿದ್ದಾರೆ, ರಾತ್ರಿ ವೇಳೆ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬರು ವುದರಿಂದ ಇಲ್ಲಿ ಸಂಚಾರ ಮಾಡುವ ವಿವಿಧ ಬಗೆಯ ಜೀವ ಸಂಕುಲಗಳಿಗೆ ತೊಂದರೆ ಉಂಟಾಗುತ್ತಿದೆ.

ಜೀವಸಂಕುಲಕ್ಕೆ ತೊಂದರೆ: ಮುಂಗಾರು ಮಳೆ ತಂಪಾದ ವಾತಾವರಣ ಚುಮು ಚುಮು ಚಳಿ, ಮೋಡಗಳ ಸಾಲು ಹಸಿರಿನಿಂದ ಕಂಗೊಳಿಸುವ ಅರಣ್ಯ ನೋಡಲು ಎರಡು ಕಣ್ಣು ಸಾಲದು ಇಂಥ ಸೊಬಗು ನೋಡಿ ಆನಂದ ಪಟ್ಟು ಹೋದರೆ ತೊಂದರೆ ಇಲ್ಲ, ಇಲ್ಲಿಗೆ ಬರುವವರು ಮಾಡುವ ಕೀಟಲೆಗಳಿಂದ ಇಲ್ಲಿಯ ಜೀವಸಂಕುಲಕ್ಕೆ ತೊಂದರೆ ಯಾಗುತ್ತಿದೆ.

ಯುವ ಜನರೇ ಹೆಚ್ಚು ಭೇಟಿ: ಕಳೆದ ಕೆಲ ತಿಂಗಳಿನಿಂದ ಕೋವಿಡ್ ದಿಂದ ಈಗ ಲಾಕ್‌ಡೌನ್‌ ತೆರವುಗೊಳಿಸಿದಾಗಿನಿಂದ ಇಲ್ಲಿನ ಹಸಿರು ಬೆಟ್ಟಗಳ ತಂಪಾದ ವನಸಿರಿಗೆ ಆಕರ್ಷಿತರಾದ ಬೆಂಗಳೂರು, ತುಮಕೂರಿನ ಯುವ ಜನಾಂಗ ಬೈಕ್‌, ಕಾರುಗಳ ಮೂಲಕ ಸೂರ್ಯೋದಯಕ್ಕಿಂತ ಮುಂಚೆಯೇ ದುರ್ಗಮ ಕಾಡಿನ ಬೇರೆ ಬೇರೆ ಬೆಟ್ಟಗಳ ಶಿಖೀರಗಳ ಮೇಲೆ ಛಾಯಾಗ್ರಹಣಕ್ಕಾಗಿ, ಸೆಲ್ಫಿಗಾಗಿ ನೂರಾರು ಜನ ಬರುತ್ತಿದ್ದಾರೆ.

Advertisement

ಇದಲ್ಲದೇ ಪ್ರೇಮಿಗಳು ಮತ್ತು ಮದುವೆ ಮಾಡಿಕೊಳ್ಳುವ ಯುವ ಜೋಡಿಗಳು ಫೋಟೋ ಸೆಷನ್‌ಗಾಗಿ ಇಲ್ಲಿಗೆ ಬರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರಿ ಇಡೀ ಈ ಅರಣ್ಯ ಪ್ರದೇಶದಲ್ಲಿ ವಾಹನಗಳ ಸಂಚಾರ ಇರುತ್ತದೆ. ಇದರಿಂದ ಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಈ ವೇಳೆ ಈ ವಾಹನ ಸವಾರರನ್ನು ತಡೆಯುವವರು ಯಾರೂ ಅರಣ್ಯ ಪ್ರದೇಶದಲ್ಲಿ ಇರುವುದಿಲ್ಲ.

ಮೋಜು ಮಸ್ತಿಗೆ ಹಾಜರು: ವಾರದ ಅಂತ್ಯದಿನಗಳಾದ ಶನಿವಾರ ಹಾಗೂ ಭಾನುವಾರ ಬಂತೆಂದರೆ ಕಾಡಿನ ಮೂಲೆ ಮೂಲೆಗಳಲ್ಲಿ ಕುಡುಕರ

ಗುಂಪಿನಿಂದ ಗುಂಡು ತುಂಡುಗಳ ವಿನಿಮಯ, ಆಹಾರ ತಯಾರಿ, ಮೋಜು ಮಸ್ತಿ ಎಲ್ಲಾ ಇರುತ್ತದೆ. ಸಂರಕ್ಷಿತ ಕಾಡಿನಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿದವರೆಲ್ಲಾ ಅಕ್ಷರಸ್ಥರಾಗಿದ್ದರೂ ಅನಾಗರಿಕರಂತೆ ಕೇಕೆ, ಶಿಳ್ಳೆ, ಮೊಬೈಲ್‌ ಸಂಗೀತ ಎಲ್ಲೆ ಮೀರಿ ಪ್ರಶಾಂತ ಕಾಡಿನ ಪರಿಸರದಲ್ಲಿ ಕೇಳಿ ಬರುತ್ತಿದೆ. ಪ್ರತಿದಿನ ಪ್ಲಾಸ್ಟಿಕ್‌, ಗಾಜಿನ ಬಾಟಲ್‌ ಗಳು ಇತ್ಯಾದಿ ಘನ ತ್ಯಾಜ್ಯಗಳು ಕಾಡಿನ ಗರ್ಭಕ್ಕೆ ಸೇರ್ಪಡೆಯಾಗುತ್ತಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರು. ನಾಮದಚಿಲುಮೆ, ರಾಮದೇವರಬೆಟ್ಟ, ಚಿನ್ನಿಗ ಬೆಟ್ಟ ಯೋಗನರಸಿಂಹ ದೇವಸ್ಥಾನದ ಆಸುಪಾಸಿನಲ್ಲಿ ಅಪರೂಪದ ಕೀಟಹಾರಿ ಸಸ್ಯಗಳು, ನೆಲ ಆರ್ಕಿಡ್‌ ಗಳು, ಜರೀಗಿಡಗಳು, ಹಾವಸೆ ಸಸ್ಯಗಳು ಬೆಳೆಯುವ ಕಾಲವಿದು, ಇದಲ್ಲದೆ ಕಪ್ಪೆಗಳು, ಜೇಡ, ನೂರಾರು ಬಗೆಯ ಕೀಟಗಳ ಸಂತಾನ ಕಾಲ ಸಹ ಮಳೆಗಾಲವೇ ಆಗಿರುವುದರಿಂದ ಜನಗಳ ಓಡಾಟದಿಂದ ಇಂಥ ಅಪರೂಪದ ಜೀವ ಸಂಕುಲಗಳು ಕಣ್ಮರೆಯಾಗುತ್ತವೆ. ರಾತ್ರಿ ವೇಳೆಯಲ್ಲಿ ವಾಹನಗಳ ಒಡಾಟ ಹೆಚ್ಚಿರುವುದರಿಂದ ನಿಶಾಚರಿ ಪ್ರಾಣಿಗಳಾದ ಕಾಡುಪಾಪ, ಹಾವುಗಳು, ಕಪ್ಪೆಗಳು, ಪಕ್ಷಿಗಳು ರಸ್ತೆ ಅಪಘಾತದಲ್ಲಿ ನಿರಂತರ ಸಾವನ್ನಪ್ಪುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ರವರೆಗೆ ಮಾತ್ರ ದೇವಸ್ಥಾನಕ್ಕೆ ಹೋಗಿ ಬರಲು ಅವಕಾಶ ಮಾಡಿಕೊಟ್ಟು ಉಳಿದ ಸಮಯದಲ್ಲಿ ಸಾರ್ವಜನಿಕರ ಓಡಾಟ ಸಂಪೂರ್ಣ ನಿರ್ಬಂಧಿಸಿ ಅಲ್ಲಿನ ವನ್ಯಜೀವಿಗಳ ಸ್ವಚಂದ ಜೀವನಕ್ಕೆ ಅವಕಾಶ ಮಾಡಿ ಕೊಡಬೇಕು ಎನ್ನುತ್ತಾರೆ ವನ್ಯಜೀವಿ ತಜ್ಞ ಬಿ.ವಿ.ಗುಂಡಪ.

ರಾತ್ರಿ ಇಡೀ ವಾಹನ ಸಂಚಾರ :  ಇನ್ನು ಬೆಳಗಿನ ಜಾವ ಹಕ್ಕಿಗಳು, ಚಿಟ್ಟೆಗಳು, ಮೊಲ, ಜಿಂಕೆ, ಕಡವೆ, ಮುಂಗಸಿ ಮುಂತಾದ ಪ್ರಾಣಿಗಳು ಆಹಾರಾನ್ವೇಷಣೆ ಯಲ್ಲಿ ತೊಡಗಿರುತ್ತವೆ, ಮುಸ್ಸಂಜೆ ರಾತ್ರಿ ಆರಂಭ ವಾದ ತಕ್ಷಣ ಚಿರತೆ, ಕರಡಿ, ಕಾಡುಹಂದಿ, ಕಾಡು ಪಾಪ, ಪತಂಗಗಳು, ಹಾವುಗಳು, ಕಪ್ಪೆಗಳು ಆಹಾರ ಹುಡುಕಲು ಪ್ರಾರಂಭಿಸುತ್ತವೆ. ಇಂತಹ ವೇಳೆಯಲ್ಲಿ ದೇವರಾಯನ ದುರ್ಗದ ಕಾಡಿನುದ್ದಕ್ಕೂ ಬೆಳಗಿನಿಂದ ರಾತ್ರಿವರೆಗೂ ಮಾನವರ ಓಡಾಟ ನಿರಂತರವಾಗಿರು ವುದರಿಂದ ಪ್ರಾಣಿ, ಪಕ್ಷಿಗಳ ಖಾಸಗಿ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ.

ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕೆಲವರು ಹಗಲು ರಾತ್ರಿ ಎನ್ನದೇ ಸಂಚಾರ ಮಾಡುವುದು, ಅಲ್ಲಿ ಪಾರ್ಟಿ ಮಾಡಿ ಅಲ್ಲಿಯ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದನ್ನು ತಡೆಗಟ್ಟಲು ಅರಣ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವ ತುಮಕೂರಿನಿಂದ 5 ಮೈಲಿ ಸರ್ಕಲ್‌ ಮತ್ತು ಊರ್ಡಿಗೆರೆ ಬಳಿ ಚೆಕ್‌ ಪೋಸ್ಟ್‌ ತೆರೆಯಲು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗಳಿಗೆ ಪತ್ರ ಬರೆದಿದ್ದಾರೆ. ಅಲ್ಲಿಂದ ಆದೇಶ ಬಂದ ತಕ್ಷಣ ಚೆಕ್‌ಪೋಸ್ಟ್‌ ಹಾಕಲಾಗುವುದು. ಗಿರೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು

 

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next