ಭಾಲ್ಕಿ: ಗಡಿಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆ ನಿಷೇಧಿಸುವಂತೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ತಹಶೀಲ್ ಕಚೇರಿಯಲ್ಲಿ ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ, ಕಾರವಾರ, ನಿಪ್ಪಾಣಿ ಪ್ರದೇಶಗಳು ಕನ್ನಡಿಗರ ಅವಿಭಾಜ್ಯ ಅಂಗವಾಗಿವೆ. ನೆರೆಯ ರಾಜ್ಯದ ರಾಜಕೀಯ ಪುಢಾರಿಗಳು ಕೇವಲ ತಮ್ಮ ಸ್ವಾರ್ಥ ಸಾಧನೆಗೋಸ್ಕರ ಪದೇ-ಪದೇ ಕ್ಯಾತೆ ತೆಗೆದು ಅಣ್ಣ-ತಮ್ಮಂದಿರಂತೆ ಜೀವಿಸುವ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ದುರುದ್ದೇಶದಿಂದ ವೈ ಮನಸ್ಸು ಮೂಡಿಸಲು ಕೆಲ ಪಿತೂರಿಗಳು ಇಂತಹ ನೀಚ ಕೆಲಸಕ್ಕಿಳಿದಿರುವುದು ಸರಿಯಲ್ಲ. ರಾಜ್ಯದಲ್ಲಿನ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಬೇಕು ಎಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್, ಹಿರಿಯ ಸಲಹೆಗಾರ ರಮೇಶ ಚಿದ್ರಿ, ಉಪಾಧ್ಯಕ್ಷ ಅನಿಲ ದಾಡಗೆ, ಪ್ರಮುಖರಾದ ಸುದೀಪ ತೂಗಾಂವೆ, ದಶರಥ ಢೊಳೆ, ವಿನೋದ ಮೇತ್ರೆ, ಚನ್ನು ಮೀನಕೆರೆ, ಸಂಜು ಲಂಜವಾಡೆ, ಸಾಗರ ಸ್ವಾಮಿ, ಆನಂದ ಸ್ವಾಮಿ, ಹಣಮಂತ ಸೆಡಮ್ಮೆ, ಅಜಯ ಕರಸಣ್ಣ, ದತ್ತಾ ಜಗತಾಪ್, ಹರ್ಷವರ್ಧನ ಕಲಾ ಇದ್ದರು.