Advertisement

ಮತಪಟ್ಟಿ ಪರಿಷ್ಕರಣೆ: ಚನ್ನರಾಯಪಟ್ಟಣ ತಾಲೂಕು ಪ್ರಥಮ

09:33 PM Oct 29, 2019 | Lakshmi GovindaRaju |

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು ಮತದಾರರಿಂದ ಆಧಾರ್‌ ಹಾಗೂ ಪರಿತರ ಚೀಟಿ ಪಡೆಯುವ ಕಾರ್ಯ ಭರದಿಂದ ಸಾಗುತ್ತಿದ್ದು, ಎರಡು ಕಡೆ ಚುನಾವಣಾ ಗುರುತಿನ ಚೀಟಿ ಪಡೆದವರ ಪತ್ತೆಗೆ ತಾಲೂಕು ಆಡಳಿತ ಮುಂದಾಗಿದೆ. ಹಾಸನ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕು ಪ್ರಥಮ ಸ್ಥಾನದಲ್ಲಿ ಇರುವುದು ಹೆಗ್ಗಳಿಕೆಯ ವಿಷಯ.

Advertisement

ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಎರಡೂ ಕಡೆ ಮತದಾನ ಮಾಡುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಮತದಾರ ಪಟ್ಟಿಗೆ ಆಧಾರ್‌ ಹಾಗೂ ಪಡಿತರ ಚೀಟಿಯ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕಾಗಿದೆ.

ಹಾಸನ ಕೊನೆ ಸ್ಥಾನ: ಹಾಸನ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಿದ್ದು, ಈಗಾಗಲೇ ಏಕಕಾಲದಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಎರಡೆರಡು ಗುರುತಿನ ಚೀಟಿ ಹೊಂದಿರುವವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಚನ್ನರಾಯಪಟ್ಟಣ ತಾಲೂಕು ಪ್ರಥಮ ಸ್ಥಾನದಲ್ಲಿದ್ದರೆ ಜಿಲ್ಲಾ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳು ಇರುವ ಕ್ಷೇತ್ರ ಹಾಸನ ಕೊನೆ ಸ್ಥಾನದಲ್ಲಿದೆ. ಬೇಲೂರು ದ್ವಿತೀಯ, ಅರಕಲಗೂರು ತೃತೀಯ, ಸಕಲೇಶಪುರ ಚತುತ್ರ, ಅರಸೀಕೆರೆ ಮತ್ತು ಹೊಳೆನರಸೀಪುರ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿವೆ.

ಜಿಲ್ಲೆಯ ಅಂಕಿ ಅಂಶ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 2,01,454 ಮತದಾರರಿದ್ದು ಶೇ.88.72 ರಷ್ಟು ಕೆಲಸ ಮುಗಿದಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2,10,589 ಮಂದಿ ಮತದಾರರಿದ್ದು ಶೇ77.32 ರಷ್ಟು ಕೆಲಸ ಮುಗಿದಿದೆ, ಬೇಲೂರು 1,92,473ಮತದಾರರಿದ್ದು ಶೇ.83.11 ರಷ್ಟು ಮುಗಿದಿದೆ. ಹಾಸನ 2,16,171 ಮತದಾರರಿದ್ದು ಶೇ.55.58 ರಷ್ಟು ಪರಿಷ್ಕರಣೆ ಮಾಡಲಾಗಿದೆ. ಹೊಳೆನರಸೀಪುರ ಕ್ಷೇತ್ರದಲ್ಲಿ 2,12,416 ಮತದಾರರಿದ್ದು ಶೇ.60.37, ಅರಕಲಗೂಡು 2,19,380ರಲ್ಲಿ ಶೇ.80.97 ರಷ್ಟು ಮುಗಿದಿದೆ. ಸಕಲೇಶಪುರದಲ್ಲಿ 1,97,256 ಮತದಾರರಿದ್ದರು ಶೇ.78.35 ರಷ್ಟು ಕಾರ್ಯ ಮುಕ್ತಾಯವಾಗಿದೆ.

ಮೌಖಿಕ ಆದೇಶ: ಪ್ರತಿ ವರ್ಷದಂತೆ ಈ ಬಾರಿಯೂ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಆರಂಭವಾಗಿದ್ದು, ಪ್ರತಿಯೊಬ್ಬ ಮತದಾರರಿಂದ ಗುರುತಿನ ಚೀಟಿಯೊಂದಿಗೆ ಆಧಾರ್‌ ಹಾಗೂ ಪಡಿತರ ಚೀಟಿಯ ಒಂದು ನಕಲು ಪ್ರತಿ ಪಡೆಯುವಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಚುನಾವಣೆ ಶಾಖೆಯ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಚುರುಕುಗೊಂಡ ಕಾರ್ಯ: ಈ ಹಿನ್ನೆಲೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಷ ಕಡ್ಡಾಯವಾಗಿ ಆಧಾರ್‌ ಹಾಗೂ ಪಡಿತರ ಚೀಟಿ ನೀಡುವಂತೆ ಹೇಳುತ್ತಿದೆ. ಇದಲ್ಲದೇ ಗ್ರಾಮೀಣ ಭಾಗದಲ್ಲಿ ಇರುವ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಅಂಗವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮದಲ್ಲಿನ ಮತದಾರ ಪಟ್ಟಿ ಹಿಡಿದುಕೊಂಡು ಪ್ರತಿ ಮನೆ ಬಾಗಿಲು ಸುತ್ತುತ್ತಿದ್ದು ಹೊಸದಾರಿ ಪಟ್ಟಿಗೆ ಹೆಸರು ಸೇರಿಸುವವರು, ಮೃತಪಟ್ಟವರು ಹಾಗೂ ಪಟ್ಟಿಯಿಂದ ಹೆಸರು ತೆಗೆಯಬಹುದಾಗಿರುವವರನ್ನು ಕೈ ಬಿಡುವ ಕಾರ್ಯ ಚುರುಕಿನಿಂದ ಮಾಡುತ್ತಿದ್ದಾರೆ.

ಆ್ಯಪ್‌ ಮೂಲಕ ಆಧಾರ್‌ ಸಂಖ್ಯೆ ಜೋಡಣೆ: ತಾಲೂಕಿನ ಪ್ರತಿ ಬೂತ್‌ ಮಟ್ಟದ ಅಧಿಕಾರಿಗಳು ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಶರವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ದೇವಾಲಯ ಇಲ್ಲವೇ ಅರಳಿ ಕಟ್ಟೆಯಲ್ಲಿ ಚಾಪೆ ಹಾಕಿಕೊಂಡು ಪಡಿತರ ಚೀಟಿ ಹಾಗೂ ಆಧಾರ್‌ ನಕಲು ಪ್ರತಿ ಸಂಗ್ರಹಿಸಿ ತಮ್ಮ ಮೊಬೈಲ್‌ ಆ್ಯಪ್‌ನಲ್ಲಿ ಆಧಾರ್‌ ಜೋಡಣೆ ಮಾಡುತ್ತಿದ್ದಾರೆ.

ಆಯೋಗಕ್ಕೆ ಸಲುಭವಾಗಿ ಮಾಹಿತಿ ಲಭ್ಯ: ಮತದಾರರಿಂದ ಪಡೆಯುವ ಸಮಗ್ರ ಮಾಹಿತಿಯನ್ನು ಚುನಾವಣಾಧಿಕಾರಿಗಳು ಈಗಾಗಲೇ ಚುನಾವಣಾ ಆಯೋಗದ ಇಆರ್‌ಒನೆಟ್‌ ಆ್ಯಪ್‌ನಲ್ಲಿ ದಾಖಲಿಸಿದ್ದಾರೆ, ಈ ವೇಳೆ ಒಂದೇ ಹೆಸರು ಹಾಗೂ ಒಂದೇ ರೀತಿಯ ಭಾವಚಿತ್ರವಿರುವ ಚುನಾವಣಾ ಗುರುತಿನ ಚೀಟಿಗಳನ್ನು ಪತ್ತೆ ಮಾಡಲಾಗಿದ್ದು, ಅಂತಹ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಇರುವ ಸರ್ಕಾರಿ ಶಾಲೆ, ಅಂಗನವಾಡಿಯಿಂದ ಹಾಗೂ ನಾಡಕಚೇರಿ ಮೂಲಕ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪ್ರತಿ ಬೂತ್‌ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಆಯೋಗಕ್ಕೆ ಸುಲಭವಾಗಿ ಮಾಹಿತಿ ಲಭ್ಯವಾಗುತ್ತಿದೆ.

ಎಲೆಕ್ಟರ್‌ ವೇರಿಫಿಕೇಷನ್‌ ಪ್ರೋಗ್ರಾಂನಲ್ಲಿ ಮಾಹಿತಿ ಪಡೆಯಿರಿ: ಇವಿಪಿ ಯೋಜನೆಯನ್ನು ರೂಪಿಸಿರುವ ಚುನಾವಣಾ ಆಯೋಗವು ತಂತ್ರಜ್ಞಾನ ಬಳಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಪ್ರತಿಯೊಬ್ಬ ಮತದಾರರು ಗುರುತಿನ ಚೀಟಿಯ ನಮೂದಿಸಿರುವ ದೋಷವನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಜೊತೆಗೆ 2019ರ ಜ.1ರ ವೇಳೆಗೆ 18 ವರ್ಷ ತುಂಬಿರುವವರ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬಹದು.

ಸ್ಮಾರ್ಟ್‌ ಪೋನ್‌ ಹೊಂದಿರುವವರು ಚುನಾವಣಾ ಆಯೋಗದ ವೋಟರ್‌ ಹೆಲ್ಪ್ಲೈನ್‌ನ್ನು ಆ್ಯಪ್‌ ಅಥವಾ ಹೈಬ್ರಿಡ್‌ ಬಿಎಲ್‌ಒ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ತಾವೇ ಮತದಾರರ ಚೀಟಿಯಲ್ಲಿನ ದೋಷವನ್ನು ಸರಿಪಡಿಸಿಕೊಳ್ಳಬಹುದು. ಇದರೊಂದಿಗೆ ಚುನಾವಣಾ ಸಹಾಯ ದೂರವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ಮತದಾರರ ಪಟ್ಟಿ ಪರಿಶೀಲಿಸಿ ಕೊಳ್ಳಬಹುದಾಗಿದೆ.

ಚುನಾವಣಾ ಆಯೋಗದ ಇಆರ್‌ಒನೆಟ್‌ ಆ್ಯಪ್‌ ಮೂಲಕ ಒಂದೇ ರೀತಿಯ ಹೆಸರು ಹಾಗೂ ಫೋಟೋ ಇರುವ ಗುರುತಿಗನ ಚೀಟಿಯನ್ನು ಪತ್ತೆ ಹಚ್ಚಲಾಗುತ್ತಿದೆ. ಹಾಸನ ಜಿಲ್ಲೆಗೆ ಚನ್ನರಾಯಪಟ್ಟಣ ತಾಲೂಕು ಪ್ರಥಮ ಸ್ಥಾನ ಪಡೆಯಲು ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಸಹಕಾರದಿಂದ ಸಾಧ್ಯವಾಗಿದೆ.
-ಜೆ.ಬಿ.ಮಾರುತಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next