Advertisement

ಕಾಲುವೆಯಲ್ಲಿ ಹರಿದ ನೀರು; ಕೃಷಿ ಚಟುವಟಿಕೆ ಚುರುಕು

06:31 PM Aug 03, 2021 | Team Udayavani |

ಆರ್‌.ಬಸವರೆಡ್ಡಿ ಕರೂರು

Advertisement

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ಎಲ್‌ಎಲ್‌ಸಿ ಕಾಲುವೆಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಿದ್ದು, ಎಲ್‌ಎಲ್‌ಸಿ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ತಾಲೂಕಿನಲ್ಲಿ ಒಟ್ಟು 23 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಇಲ್ಲಿಯವರೆಗೆ 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಮುಗಿದಿದ್ದು, ಇನ್ನುಳಿದ ಪ್ರದೇಶದಲ್ಲಿ ಭತ್ತನಾಟಿಕಾರ್ಯ ಭರದಿಂದ ಸಾಗಿದೆ.

ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಜೋರಾಗಿ ನಡೆದಿದ್ದು, ಈ ಭಾಗದಲ್ಲಿ ಕೃಷಿ ಚಟುವಟಿಕೆ ಕಂಡುಬರುತ್ತಿವೆ. ಗದ್ದೆಗಳಲ್ಲಿ ನಾಟಿಮಾಡುವ ಮಹಿಳೆಯರು ಮತ್ತು ನಾಟಿಗೆ ಬೇಕಾದ ಸಸಿಯನ್ನು ಕೀಳುವ ಗಂಡಸರ ಗುಂಪುಗಳು ಜಮೀನುಗಳಲ್ಲಿ ಕಂಡುಬರುತ್ತಿವೆ.

ಜಲಾಶಯದಲ್ಲಿ ನೀರು ತುಂಬುತ್ತವೊ ಇಲ್ಲವೋ ಎನ್ನುವ ಆತಂಕದಲ್ಲಿ ತಾಲೂಕಿನಲ್ಲಿ ಬೋರ್‌ ವೆಲ್‌ ಹೊಂದಿದ ರೈತರು ಮಾತ್ರ ಸಸಿಮಡಿಗಳನ್ನು ಬೆಳೆಸಿದ್ದು, ಕಾಲುವೆಯಲ್ಲಿ ನೀರು ಬಿಟ್ಟಿರುವುದರಿಂದ ಈಗ ಭತ್ತದ ಸಸಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಒಂದು ಸೆಂಟ್ಸ್‌ ಸಸಿಗೆ ರೂ. 1250ರಿಂದ ರೂ.1400ರ ವರೆಗೆ ಮಾರಾಟವಾಗುತ್ತಿದ್ದು, ಸಸಿ ಬೆಳೆಸಿದ ರೈತರು ಈ ವರ್ಷ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Advertisement

ಕಾಲುವೆ ವ್ಯಾಪ್ತಿ ರೈತರಿಗೆ ಸಸಿ ಬೆಳೆಯಲು ನೀರು ಸಿಗದ ಕಾರಣ ಕಾಲುವೆ ನೀರಿನ ರೈತರು ಸಸಿ ಮಡಿಗಳನ್ನು ಬೆಳೆಸಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಸಸಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈಗ ಕಾಲುವೆ ನೀರಿನ ರೈತರು ತಮ್ಮ ಗದ್ದೆಗಳಲ್ಲಿ ಸಸಿಯನ್ನು ನಾಟಿಮಾಡಲು ಕೊಂಡುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಸಿ ಬೆಳೆದ ರೈತರಿಗೆ ಉತ್ತಮ ಲಾಭ ಸಿಗುತ್ತಿದೆ.

ಇಲ್ಲಿವರೆಗೆ ತಾಲೂಕಿನಲ್ಲಿ ಸುಮಾರು 2000 ಹೆಕ್ಟೇರ್‌ ನಲ್ಲಿ ಭತ್ತದ ನಾಟಿಕಾರ್ಯ ಮುಗಿದಿದೆ. ವೇದಾವತಿ ಹಗರಿನದಿ ಮತ್ತು ದೊಡ್ಡಹಳ್ಳ, ಗರ್ಜಿಹಳ್ಳದಲ್ಲಿ ನೀರು ಹರಿಯುತ್ತಿರುವುದರಿಂದ ಈ ಭಾಗದಲ್ಲಿಯೂ ಭತ್ತ ನಾಟಿಕಾರ್ಯ ಭರದಿಂದ ಸಾಗಿದೆ. ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಈ ಭಾಗದಲ್ಲಿ ಭತ್ತದ ನಾಟಿಕಾರ್ಯವು ಭರದಿಂದ ನಡೆಯುತ್ತಿದ್ದು, ಇಲ್ಲಿ ರೈತರೇ ತಮ್ಮ ಹೊಲಗಳಿಗೆ ನಾಟಿಮಾಡಲು ಬೇಕಾದ ಸಸಿಯನ್ನು ಬೆಳೆಸಿಕೊಂಡಿದ್ದಾರೆ.

ಹಚ್ಚೊಳ್ಳಿ, ರಾರಾವಿ, ಸಿರಿಗೇರಿ, ಕರೂರು ಭಾಗದ ಮಳೆಯಾಶ್ರಿತ ಪ್ರದೇಶದಲ್ಲಿ ಕೂರಿಗೆ ಮೂಲಕ ಭತ್ತ ಬಿತ್ತನೆ ಕಾರ್ಯ ಮಾಡಿದ್ದು, ಹಳ್ಳ, ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಕೂರಿಗೆ ಮೂಲಕ ಭತ್ತ ಬಿತ್ತನೆ ಮಾಡಿದ ರೈತರು ಏತನೀರಾವರಿ ಮೂಲಕ ಭತ್ತಕ್ಕೆ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next