ಬಳ್ಳಾರಿ: ಕೋವಿಡ್ ಸೋಂಕು, ಲಾಕ್‌ಡೌನ್ ನಿಂದ ಮುಚ್ಚಲಾಗಿದ್ದ ವ್ಯಾಣಿಜ್ಯ ಮಳಿಗೆಗಳನ್ನು ಸುಮಾರು 2 ತಿಂಗಳ ನಂತರ ಬಹುತೇಕ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ಹಸಿರು ನಿಶಾನೆ ಸಿಗುತ್ತಲೇ ಬಳ್ಳಾರಿಯ ವಾಣಿಜ್ಯ ಪ್ರದೇಶಗಳು, ರಸ್ತೆ, ಹೊಟೇಲ್, ಸರ್ಕಾರಿ ಕಚೇರಿಗಳು ಮಂಗಳವಾರ ಆರಂಭವಾಗಿ ಗಿಜುಗುಡುತ್ತಿದ್ದವು. ಬೆಳಗ್ಗೆ 8 ಗಂಟೆಯಿಂದಲೇ ಎಲ್ಲ ರಸ್ತೆಗಳಲ್ಲಿ ವಾಹನ, ಪಾದಾಚಾರಿಗಳು ಕಂಡುಬಂದರು.
ಸರ್ಕಾರಿ ಬಸ್, ಆಟೋ, ಲಾರಿ, ಟೆಂಪೋ ಹೀಗೆ ತರೇಹವಾರಿ ವಾಹನಗಳು ರಸ್ತೆಗೆ ಇಳಿದಿದ್ದರಿಂದ ರಸ್ತೆ ತುಂಬಿ ತುಳುಕುತ್ತಿದ್ದವು. ಬೆಂಗಳೂರು ರಸ್ತೆಯಂತೂ ಇಡೀ ಊರ ಜನರನ್ನು ತನ್ನ ಒಡಲೊಳಗೆ ಇಟ್ಟುಕೊಂಡಂತೆ ಕಂಡುಬಂತು. ಬಂಗಾರ, ಬಟ್ಟೆ, ಗಾರ್ಮೆಂಟ್ಸ್ ಅಂಗಡಿ, ಕಿರಾಣಿ, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಇದೇ ಮೊದಲ ಬಾರಿಗೆ 2 ತಿಂಗಳ ನಂತರ ಬಾಗಿಲು ತೆರೆದುಕೊಂಡಿದ್ದರಿಂದ ಈ ಅಂಗಡಿಗಳಲ್ಲೂ ಜನ ಜಂಗುಳಿ ಸಹಜವಾಗಿಯೇ ಕಂಡುಬಂತು.
ಕೆಲ ಅಂಗಡಿಗಳ ಮುಂದೆ ಸೇರಿಕೊಂಡಿದ್ದ ಜನರ ಕೈಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಸರಿಯಾಗಿ ಧರಿಸಿಕೊಂಡು ಒಳಗೆ ಬರುವಂತೆ ಸ್ವಾಗತ ಮಾಡುತ್ತಿದ್ದರು. ಚಿನ್ನದ ಅಂಗಡಿಗಳಲ್ಲಿ ದೂರ ದೂರ ಕುರ್ಚಿಗಳನ್ನು ಹಾಕಿ, ಅದರಲ್ಲೇ ಕುಳಿತುಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒತ್ತುನೀಡುತ್ತಿದ್ದುದು ಕಂಡುಬಂತು. ಇನ್ನು ರಸ್ತೆಗಳಲ್ಲಿ ವಾಹನ ದಟ್ಟಣೆ ಮಾತ್ರ ಭೀತಿಗೊಳಿಸುವಂತೆ ಇತ್ತು. ಒಂಚೂರು ಜಾಗವಿಲ್ಲದಂತೆ ಜನರು ವಾಹನದಲ್ಲಿ ಸಾಗುತ್ತಿದ್ದುದು ಕಂಡುಬಂತು.
ರಸ್ತೆ ಬದುವಿನ ವಾಹನಗಳ ಸಾಲು ಸಾಲು ಕಂಡುಬಂತು. ಇದರ ಮಧ್ಯೆಯೇ ರಸ್ತೆ ಬದುವಿನ ಬಡ ವ್ಯಾಪಾರಿಗಳು ಹೊಸ ಹುರುಪಿನೊಂದಿಗೆ ಮೂಗಿನ ಮೇಲೆ ಮಾಸ್ಕ್ ಧರಿಸಿ, ಜನರನ್ನು ತಮ್ಮ ವಸ್ತುಗಳ ಖರೀದಿಗೆ ಅಹ್ವಾನ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಇನ್ನು ಅಲ್ಲಲ್ಲೇ ನಿಂತಿದ್ದ ಪೊಲೀಸರು ಕೊಂಚ ನಿರಾಳರಾದಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು.
ಹೊಟೇಲ್‌ಗಳಲ್ಲಿಲ್ಲ ಅಂತರ; ರಾಜ್ಯ ಸರ್ಕಾರ ಅನ್ ಲಾಕ್ 2.0ನಲ್ಲಿ ಹೊಟೇಲ್‌ಗಳಿಗೂ ಶೇ.50 ರಷ್ಟು ಆಸನಗಳೊಂದಿಗೆ ನಡೆಸಲು ಅವಕಾಶ ಕಲ್ಪಿಸಿದೆ. ಆದರೆ, ನಗರದ ಬಹುತೇಕ ಬೃಹತ್ ಹೊಟೇಲ್ ಗಳಲ್ಲಿ ಈ ನಿಯಮ ಉಲ್ಲಂಘನೆಯಾಗಿತ್ತು. ಹೊಟೇಲ್‌ಗಳಲ್ಲೇ ಊಟ, ಉಪಾಹಾರ ಸೇವಿಸಲು ಇದ್ದ ಕುರ್ಚಿಗಳಲ್ಲಿ ಯಾವುದೇ ಕಡಿಮೆಯಾಗಿರಲಿಲ್ಲ. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಚೇರ್‌ಗಳನ್ನು ದೂರ ದೂರದಲ್ಲೂ ಇಟ್ಟಿರಲಿಲ್ಲ. ಈ ಹಿಂದಿನಂತೆ ಮುಂದುವರೆಸಿದ್ದು, ಯಾವುದೇ ಸಾಮಾಜಿಕ ಅಂತರವಿಲ್ಲದೇ ಈ ಹಿಂದಿನಂತೆ ವ್ಯವಸ್ಥೆ ಮಾಡಲಾಗಿತ್ತು.
ಹೆಚ್ಚಿದ ಸಾರಿಗೆ ಬಸ್‌ಗಳ ಸಂಖ್ಯೆ; ಕೋವಿಡ್ ಅನ್‌ಲಾಕ್ 2.0 ಜಾರಿಯಾದ ಎರಡನೇ ದಿನ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರದಲ್ಲಿ ಹೆಚ್ಚಳವಾಗಿದ್ದು, ಮಂಗಳವಾರ 110 ಬಸ್‌ಗಳು ಸುಮಾರು 220-250 ಟ್ರಿಪ್‌ಗ್ಳು ಸಂಚರಿಸಿವೆ. ನೆರೆಯ ಆಂಧ್ರದ ಗುಂತಕಲ್ಲು, ಗುತ್ತಿ, ಅನಂತಪುರ ಜಿಲ್ಲೆಗಳಿಗೂ 20 ಬಸ್‌ಗಳು ಸಂಚರಿಸಿವೆ. ಸದ್ಯ ಬೆಂಗಳೂರು, ಹೊಸಪೇಟೆ, ಗಂಗಾವತಿ, ಸಿರುಗುಪ್ಪ ಸೇರಿ ತಾಲೂಕು ಕೇಂದ್ರಗಳಿಗೆ ಮಾತ್ರ ಬಸ್ ಗಳು ಸಂಚರಿಸುತ್ತಿದ್ದು, ಮುಂದಿನ ಹಂತದಲ್ಲಿ ಗ್ರಾಮಗಳಿಗೂ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿ ಕಾರಿ ರಾಜಗೋಪಾಲ್ ವಿ.ಪುರಾಣಿಕ್ ತಿಳಿಸಿದರು.