ಈ ವಾರ್ಡ್‌ನಲ್ಲಿನ ಗೌಳೇರಹಟ್ಟಿ, ಲಾಲಾಕಮಾನ್, ಬಾಲಾಂಜನೇಯ ಬೀದಿ, ಬಂಡಿಮೋಟ್, ಮೃತ್ಯುಂಜಯ ನಗರ ಪ್ರದೇಶಗಳು ಬರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಡಿ ಮನೆಗಳೇ ಇರುವ ಈ ಬೀದಿಗಳಲ್ಲಿ ಸಮರ್ಪಕ ಸಿಸಿ ರಸ್ತೆ ನಿರ್ಮಾಣ, ತಡವಾದರೂ ಸಮಪರ್ಕವಾಗಿ ಕುಡಿವ ನೀರಿನ ಸೌಲಭ್ಯ ಲಭಿಸುವ ಮೂಲಕ ನೋಡಲು ಪ್ರತಿಷ್ಠಿತ ಬಡಾವಣೆಗಳು ಎನಿಸಿದರೂ, ಸ್ಥಳೀಯ ಜನರನ್ನು ಮಾತಿಗೆಳೆದಾಗ ಸಮಸ್ಯೆಗಳ
ಹೂರಣ ಹೊರಬೀಳುತ್ತದೆ.
ವಾರ್ಡ್‌ನಲ್ಲಿ ಎಲ್ಲೆಡೆ ನಿರ್ಮಿಸಲಾಗಿರುವ ಸಿಸಿ ರಸ್ತೆಯ ಎರಡೂ ಬದಿ ಪಾಲಿಕೆಯಿಂದ ನಿರ್ಮಿಸಲಾಗಿರುವ ತೆರೆದ ಚರಂಡಿಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಚಿಕ್ಕಚಿಕ್ಕ ಓಣಿಗಳಲ್ಲಿನ ತೆರೆದ ಚರಂಡಿ ಕಾಲುವೆಗಳು ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಯ ದೊಡ್ಡ ಕಾಲುವೆಗಳೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮ ತೆರೆದ ಚರಂಡಿಗಳಲ್ಲಿ ಸರಾಗವಾಗಿ ಮುಂದಕ್ಕೆ ಹರಿಯಬೇಕಿದ್ದ ಕೊಚ್ಚೆ ನೀರು ಅಲ್ಲೇ ಸ್ಥಗಿತಗೊಂಡು ದುರ್ನಾಥ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‌ನ ನಾಲ್ಕೈದು ಕಡೆ ಇದೇ ರೀತಿ ಅವೈಜ್ಞಾನಿಕವಾಗಿ ತೆರೆದ
ಚರಂಡಿಯನ್ನು ನಿರ್ಮಿಸಲಾಗಿದ್ದು, ತ್ಯಾಜ್ಯ ಸಂಗ್ರಹವಾಗಿ ಕಾಲುವೆಗಳೇ ಮುಚ್ಚಿಹೋಗಿವೆ ಎಂದು ಪಾಲಿಕೆ ಅಧಿ ಕಾರಿ, ಜನಪ್ರತಿನಿ ಧಿಗಳ
ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ರಾಜು.
Advertisement
ಬಾರದ ವಾಹನ, ತೆರವಾಗದ ತ್ಯಾಜ್ಯ: ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗಳ ಮೇಲೆ ಬಿಸಾಡದಂತೆ ಮನೆಯಿಂದ ಕಸ ಸಂಗ್ರಹಿಸಲು ಪಾಲಿಕೆಯಿಂದ ವಾಹನಗಳ ವ್ಯವಸ್ಥೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಈವರೆಗೂ ಈ ವಾರ್ಡ್‌ಗೆ ಪ್ರತಿದಿನ ಕಸಸಂಗ್ರಹ ವಾಹನ ಬರಲ್ಲ. ಒಂದು ದಿನ ಬಿಟ್ಟು ಒಂದು ದಿನ ಬರಲಿದೆ ಎಂದು ಮನೆಯಲ್ಲೇ ಕಸವನ್ನು ಸಂಗ್ರಹಿಸಿಟ್ಟುಕೊಂಡರೆ ಮಾರನೇ
ದಿನವೂ ಬರಲ್ಲ. ಇದರಿಂದ ಮನೆಯಲ್ಲೇ ಕಸದ ಪ್ರಮಾಣ ಹೆಚ್ಚಾಗಿ ಹುಳ-ಹುಪ್ಪಡಿಗಳ ಕಾಟ ಹೆಚ್ಚಾಗಲಿದೆ ಎಂದು ಸಮೀಪದ ತಿಪ್ಪೆಗುಂಡಿಯಲ್ಲಿ ಬಿಸಾಕುತ್ತೇವೆ. ಅಲ್ಲಿಯೂ ಎರಡು ಮೂರು ವಾರಗಳು ಗತಿಸಿದರೂ ಕಸವನ್ನು ತೆರವುಗೊಳಿಸುವುದು ಅನುಮಾನ. ರಾಶಿ ರಾಶಿ ತ್ಯಾಜ್ಯ ಸಂಗ್ರಹವಾಗಿ ರಸ್ತೆ ಮೇಲೆಲ್ಲಾ ವ್ಯಾಪಿಸಿ ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ಒಳಚರಂಡಿಗೆ ನಿರ್ಮಿಸಿರುವ ಚೇಂಬರ್‌ಗಳ ಮುಚ್ಚಳಗಳು ಒಡೆದು, ದುರಸ್ತಿಗೆ ಬಂದಿದೆ. ಚಿಕ್ಕ ಚಿಕ್ಕ ಮಕ್ಕಳು ತಿರುಗಾಡುವ ಈ ರಸ್ತೆಗಳಲ್ಲಿ ಅನಾಹುತ ಸಂಭವಿಸುವ ಮುನ್ನವೇ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.