ಹಗರಿಬೊಮ್ಮನಹಳ್ಳಿ: ತಾಲೂಕಿನ ಪ್ರತಿ ಶಾಲೆಗಳ ಸುತ್ತುಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ 1098 ನಂಬರನ್ನು ಬರೆಯಿಸಬೇಕೆಂದು ಎಂದು ತಹಶೀಲ್ದಾರ್ ಶರಣಮ್ಮ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಚೈಲ್ಡ್‌ಲೈನ್ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚೈಲ್ಡ್‌ಲೈನ್ ಕಾರ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ತಾಲೂಕಿನ ವಿವಿಧ ಇಲಾಖೆ ಅಧಿ ಕಾರಿಗಳಿಗೆ ತಿಳಿಸಿದರು.
ಬಾಲ್ಯವಿವಾಹ ಮುಕ್ತ ಹಾಗೂ ಬಾಲ ಕಾರ್ಮಿಕ ಮುಕ್ತ ತಾಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗುತ್ತಿರುವ ಸ್ಥಳದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆದೇಶಿಸಿದರು. ಕಸ ವಿಲೇವಾರಿ ವಾಹನಗಳಲ್ಲಿ ಮಕ್ಕಳ ಹಕ್ಕುಗಳ ಸಂಬಂಧ ಆಡಿಯೋ ಅಳವಡಿಸುವಂತೆ ಪುರಸಭೆ ಮುಖ್ಯಾಧಿ ಕಾರಿಗಳಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳು ಎಲ್ಲ ಹಳ್ಳಿಗಳ ದೇವಸ್ಥಾನಗಳ ಮೈಕ್ ಗಳಲ್ಲಿ ವಾರದಲ್ಲಿ 2 ದಿನ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಕುರಿತಂತೆ ಪ್ರಚಾರ ಮಾಡುವಂತೆ ಆದೇಶಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಬ್ರೆಡ್ಸ್ ಬೆಂಗಳೂರು, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಮುಕ್ತ ವಿಜಯನಗರ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಿ ಸಂಗ್ರಹ ಮಾಡಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ ಸಹಿ ಮಾಡಿದರು.
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ರಚಿಸುವಂತೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಯಿತು. ಈ ಸಭೆಯಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಆನಂದ್, ಜಿಲ್ಲಾ ಸಂಯೋಜಕ ಶರಣಪ್ಪ, ಚೈಲ್ಡ್‌ಲೈನ್ ತಾಲೂಕು ಸಂಯೋಜಕರಾದ ಚಿದಾನಂದ, ಸಿಬ್ಬಂದಿ ನೇತ್ರಾ, ಸಂತೋಷ್, ಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆನ್ನಬಸಪ್ಪ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾ| ಶಿವರಾಜ್, ಬಾಲಕ ಕಾರ್ಮಿಕ ಯೋಜನಾ ಧಿಕಾರಿ ಮೌನೇಶ್, ಜಿಲ್ಲಾ ಚೈಲ್ಡ್‌ಲೈನ್ ಸಂಯೋಜಕರಾದ ಮಂಜುನಾಥ ಡಿ.ಜಿ., ಡಾನ್ ಬಾಸ್ಕೋ ಸಂಸ್ಥೆಯ ತಾಲೂಕು ಸಂಯೋಜಕರಾದ ಬಾಣದ ನಾಗರಾಜ್ ಮತ್ತಿತರರಿದ್ದರು.