ಬಳ್ಳಾರಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಸರ್ಕಾರ ತಡೆಹಿಡಿದಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಅಖೀಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು. ರಾಜ್ಯದ ವಿವಿಧ ಇಲಾಖೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ.
ಖಾಲಿ ಆಗುತ್ತಲೇ ಇವೆ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡದೇ, ದಿನಗೂಲಿ, ಗುತ್ತಿಗೆ, ಅರೆ-ಗುತ್ತಿಗೆ, ಅತಿಥಿ ಮುಂತಾದ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ. ಅರ್ಜಿ ಶುಲ್ಕದ ಮೂಲಕ ಹಣ ಸಂಗ್ರಹಿಸಲು ಎಂದೋ ನಡೆಯುವ ಅಲ್ಪಸ್ವಲ್ಪ ನೇಮಕಾತಿಯ ಪ್ರಹಸನ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡುವುದನ್ನು ನಿಲ್ಲಿಸಿ ಯಾವುದೋ ಕಾಲವಾಗಿದೆ. ಇನ್ನೊಂದೆಡೆ ವ್ಯಾಪಕ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ನಿರುದ್ಯೋಗವು ಭೂತಾಕಾರವಾಗಿ ಬೆಳೆದು, ಇಡೀದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ಕೈಗಳು ತಮ್ಮ ಕತ್ತನ್ನೇ ಹಿಸುಕಿಕೊಂಡು ಆತ್ಮಹತ್ಯೆಗೆ ಮರೆ ಹೋಗುತ್ತಿವೆ. ಹಾಗಾಗಿ ಇನ್ನಷ್ಟು ತಡಮಾಡದೆ ರಾಜ್ಯ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. 2021ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯ ಸರ್ಕಾರದಿಂದ ತಡೆ ಹಿಡಿದ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಈ ಕೂಡಲೇ ಪುನರ್ ಆರಂಭಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿಗೊಳಿಸಬೇಕು.
2020ರಲ್ಲಿ ಆರಂಭವಾದ ಪ್ರಥಮ/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನೇಮಕ ಪತ್ರವನ್ನು ನೀಡಬೇಕು. ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಲಾಕ್‌ಡೌನ್ ಅವ ಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು.
ಕಟ್ಟಡ ಕಾರ್ಮಿಕ ಕಲ್ಯಾಣ ನಿ ಯ ದುರುಪಯೋಗವನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಮಿತಿಯ ಜಗದೀಶ್ ನೇಮಕಲ್ ಸೇರಿದಂತೆ ಹಲವು ನಿರುದ್ಯೋಗಿಗಳು ಇದ್ದರು.