ಬಳ್ಳಾರಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಿರುಗುಪ್ಪ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ಸಚಿವ ಸ್ಥಾನ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಸಿರುಗುಪ್ಪ ತಾಲೂಕು ಅಧ್ಯಕ್ಷ ದಮ್ಮೂರು ಸೋಮಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿರುವ ಇವರು ಜನರ ವಿಶ್ವಾಸಗಳಿಸಿದ್ದಾರೆ. ಮೇಲಾಗಿ ಈವರೆಗೂ ಯಾವೊಂದು ರಾಜಕೀಯ ಪಕ್ಷದ ಕದತಟ್ಟದೇ ಬಿಜೆಪಿಯಲ್ಲೇ ಉಳಿಯುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ.
ಬಡಜನರ ಪರ ಗುಣಗಳುಳ್ಳ ಶಾಸಕ ಸೋಮಲಿಂಗಪ್ಪ ಅವರು ಸಚಿವರಾಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸೋಮಲಿಂಗಪ್ಪರಿಗೆ ಸಚಿವ ಸ್ಥಾನ ನೀಡಬೇಕು ಎಂದವರು ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಭಿವೃದ್ಧಿಗೆ ಮಾಜಿ ಸಿಎಂ ಯಡಿಯೂರಪ್ಪರಷ್ಟೇ ಮಾಜಿ ಸಚಿವ ಈಶ್ವರಪ್ಪ ಸಹ ಶ್ರಮಿಸಿದ್ದಾರೆ.
ಪಕ್ಷದಲ್ಲೂ ಹಿರಿಯರಾಗಿದ್ದಾರೆ. ಆರ್‌ಎಸ್‌ಎಸ್, ಸಂಘ ಪರಿವಾರದ ಒಡನಾಡಿಯೂ ಆಗಿರುವ ಈಶ್ವರಪ್ಪ ದೇಶಭಕ್ತಿ, ರಾಷ್ಟ್ರ ಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಈ ಹಿಂದೆಯೇ ಒಮ್ಮೆ ಉಪಮುಖ್ಯಮಂತ್ರಿಗಳಾಗಿ ಮತ್ತು ವಿವಿಧ ಖಾತೆಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ. ಹಾಗಾಗಿ ಸದಾ ಪಕ್ಷನಿಷ್ಠೆ ಮೆರೆಯುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರನ್ನು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಜಾಕ್, ಗವಿಸಿದ್ದಪ್ಪ, ಶರಣಪ್ಪ, ಹನುಮಂತಪ್ಪ, ಸುಧಾಕರ್, ಕಾವಲಿಗೌಡ, ಶೇಷಪ್ಪ, ರಾಘವೇಂದ್ರ ಸೇರಿ ಹಲವರು ಇದ್ದರು.