ಹೊಸಪೇಟೆ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಪುನರ್ ಆರಂಭ ಸೇರಿದಂತೆ ಹಲವು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾಸಮಿತಿ ಪದಾಧಿಕಾರಿಗಳು ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಖೇಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭೇಟಿ ಮಾಡಿದ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ನಿಲುಗಡೆಯಾಗಿರುವ ಹುಬ್ಬಳ್ಳಿ-ತಿರುಪತಿ, ಕೊಲ್ಲಾಪುರ-ಮಣಗುರು (ಹೈದ್ರಾಬಾದ್), ಯಶವಂತಪುರ-ಬಿಜಾಪುರ, ಇತ್ಯಾದಿ ಎಲ್ಲ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ಗಾಡಿಗಳನ್ನು ಪುನರ್ ಆರಂಭಿಸಬೇಕು. ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರ ರಿಯಾಯಿತಿ ಪ್ರಯಾಣ ದರಗಳನ್ನು ಜಾರಿಗೆ ತರಬೇಕು.
ಆನ್ ಲೈನ್ ಟಿಕೆಟ್ ವ್ಯವಸ್ಥೆಯ ಜೊತೆಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಸಾಮಾನ್ಯ ಕೌಂಟರ್‌ನಲ್ಲಿ ಟಿಕೆಟ್ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳ ಜನರ ಅನುಕೂಲಕ್ಕಾಗಿ ಬಳ್ಳಾರಿ-ಕೊಟ್ಟೂರು-ದಾವಣಗೆರೆ ನಡುವೆ ಪ್ರತಿ ದಿನ ಮುಂಜಾನೆ ಎರಡು ಕಡೆಯಿಂದ ಏಕ ಕಾಲಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸಬೇಕು. ಸೊಲ್ಲಾಪುರ-ಗದಗ (ಗಾಡಿಸಂಖ್ಯೆ: 71303-71304) ರೈಲನ್ನು ಕೂಡಲೇ ಹೊಸಪೇಟೆಯವರೆಗೆ ವಿಸ್ತರಿಸಬೇಕು ಹಾಗೂ ಹುಬ್ಬಳ್ಳಿ-ಬಳ್ಳಾರಿ ಪ್ಯಾಸೆಂಜರ್ ಗಾಡಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಬೇಕು ಎನ್ನುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕ್ರಿಯಾಸಮಿತಿ ಅಧ್ಯಕ್ಷರಾದ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡಿತಿನಿ, ಯು. ಅಶ್ವತಪ್ಪ, ಯು.ಆಂಜನೇಯಲು, ಎಚ್.ಎಲ್. ಕೊಟ್ರೇಶಪ್ಪ, ಜಿ.ಸೋಮಣ್ಣ, ಎಂ.ಲೋಗನಾಥನ್, ಎಚ್. ಮಹೇಶ್, ಜಿ.ಕೆ. ಆಚಾರ್, ಕಲ್ಲೇಶ್ ಜೀರ್, ವೈ. ಶೇಖರ್, ಜಾಲಿ ಅರವಿಂದ, ತಿಪ್ಪೇಸ್ವಾಮಿ, ಮೊಹಮ್ಮದ್ ಭಾಷ, ಎಲ್.ಕೆ. ತಾರಾನಾಥ, ಮಹಾಂತೇಶ್, ಐಲಿ ಸಿದ್ದಣ್ಣ ಹಾಗೂ ಹಿರಿಯ ಮುಖಂಡ ಹೇಮಯ್ಯ ಸ್ವಾಮಿ ಇನ್ನಿತರರಿದ್ದರು.