Advertisement

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

03:34 PM Apr 10, 2024 | Team Udayavani |

■ ಉದಯವಾಣಿ ಸಮಾಚಾರ
ಬಳ್ಳಾರಿ: ದೇಶ ವೀದೇಶಗಳಲ್ಲಿ ಬಳ್ಳಾರಿಯನ್ನು ಸುವಿಖ್ಯಾತಗೊಳಿಸಿದ್ದ ರಾಘವರ ಶಿಷ್ಯ ಜೋಳದರಾಶಿ ದೊಡ್ಡನಗೌಡರು, ಮತ್ತವರ ಶಿಷ್ಯ ಸಿಡಿಗಿನಮೊಳೆ ಚಂದ್ರಯ್ಯ, ಇವರ ಶಿಷ್ಯರೇ ಬೆಳಗಲ್ಲು ವೀರಣ್ಣನವರಾಗಿದ್ದು, ಇಂದಿನ ಆಧುನಿಕ ಯುಗದಲ್ಲಿ ಗುರು-ಶಿಷ್ಯ ಪರಂಪರೆಗೆ ಜೀವಂತ ಸಾಕ್ಷಿಯಾಗಿದ್ದರು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ| ಕೆ.ಆರ್‌
.ದುರ್ಗಾದಾಸ ಹೇಳಿದರು.

Advertisement

ನಗರದ ರಾಘವಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಬೆಳಗಲ್ಲು ವೀರಣ್ಣ “ಆತ್ಮಕಥನ ನಾಟಕದ ಗೊಂಬೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಟಕ ರಂಗದಲ್ಲಿ ಸಾಕಷ್ಟು ಪಡಿಪಾಟಲು ಪಟ್ಟಿದ್ದ ಬೆಳಗಲ್ಲು ವೀರಣ್ಣನವರು, ಮನೆತನದ ಕುಲಕಸುಬು “ತೊಗಲುಗೊಂಬೆ’ ಆಟವನ್ನು ಕೈಗೆತ್ತಿಕೊಂಡು ಅದರಲ್ಲೇ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದರು. ಅತ್ಯಂತ ಸೌಮ್ಯ, ವಿನಯವಂತರಾಗಿದ್ದರೂ ಅನ್ಯಾಯವನ್ನು ವಿರೋಧಿ ಸುವ ಮನಸ್ಥಿತಿ ಅವರಿಗಿತ್ತು ಎಂದರು.

ಪ್ರಾಧ್ಯಾಪಕ ಡಾ|ರಾಜಪ್ಪ ದಳವಾಯಿ ಮಾತನಾಡಿ, ನಾಟಕ ರಂಗದಲ್ಲೂ ಸೈ ಎನಿಸಿಕೊಂಡಿದ್ದ ಬೆಳಗಲ್ಲು ವೀರಣ್ಣನವರು,
ನಂತರ ತೊಗಲುಗೊಂಬೆ ಆಟಕ್ಕೆ ಬಂದಿದ್ದರ ನೆನಪಿನಲಿ ನಾನೇ ನಿರೂಪಿಸಿದ ಅವರ ಆತ್ಮಕಥನಕ್ಕೆ “ನಾಟಕ ಗೊಂಬೆ’ ಶೀರ್ಷಿಕೆ ನೀಡಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿರುವ ಅದ್ಭುತ ಕಲಾವಿದರ ಜೀವನ ಗಾಥೆಯನ್ನು ಸಾಹಿತಿ ಬರಹಗಾರರು ಅವರೊಂದಿಗೆ ಅನುಸಂಧಾನ ನಡೆಸಿ ಬರೆದು ಪ್ರಕಟಿಸಬೇಕು ಎಂದ ಅವರು, ಬೆಳಗಲ್ಲು ವೀರಣ್ಣ ಸ್ಮರಣೆ ಎಂದರೆ ರಕ್ತರಾತ್ರಿ,
ತೊಗಲುಗೊಂಬೆ ಆಟ, ರಂಗಗೀತೆ ಇದ್ದಾಗಲೇ ಅದು ನಿಜವಾದ ಸ್ಮರಣೆ ಎಂದು ಗುಣಗಾನ  ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಂಜಿನಿಯರ್‌ ಎಂ.ಜಿ.ಗೌಡ ಮಾತನಾಡಿ, ಬೆಳಗಲ್ಲು ವೀರಣ್ಣನವರು ಅದ್ಭುತ ಜೀವನೋತ್ಸಾಹಿ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಬಂದಾಗ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂಡೋನೇಷಿಯಾ ಮುಸ್ಲಿಂ ರಾಷ್ಟ್ರ ವಾದರೂ ಅಲ್ಲಿಯ ರಾಮಾಯಣ ಅಭಿಮಾನ ಅವರ ಮನಸೂರೆಗೊಂಡಿತ್ತು ಎಂದು
ಹೇಳಿದರು.

ನಮ್ಮ ತಂದೆ ಹಾಗೂ ವೀರಣ್ಣನವರದು ಅವಿನಾಭಾವ ಸಂಬಂಧ. ಶಿವದುರಂಧರ ಬಯಲಾಟದಲ್ಲಿ ತಮ್ಮ ತಂದೆನೂ ಪಾತ್ರ
ಮಾಡಿದ್ದರು. ಅದರಲ್ಲಿ ವೀರಣ್ಣನವರದು ಸ್ತ್ರೀ ಪಾತ್ರ. ಒಮ್ಮೆ ವೀರಣ್ಣನವರು ನಮ್ಮ ಮನೆಗೇ ಬಂದು ತಂದೆಯವರನ್ನು ಸನ್ಮಾನಿಸಿದ್ದು ಅವರ ಹಿರಿಮೆಯ ಸದ್ಗುಣ ಎಂದು ಅಭಿಪ್ರಾಯಪಟ್ಟರು.

Advertisement

ಮೈಸೂರಿನ ರಂಗಕರ್ಮಿ ಬಿ.ಎಂ. ರಾಮಚಂದ್ರ ಮಾತನಾಡಿದರು. ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್‌ ಕೊಡಮಾಡುತ್ತಿರುವ
“ನಾಡೋಜ ಬೆಳಗಲ್ಲು ವೀರಣ್ಣ’ ಪ್ರಥಮ ಪ್ರಶಸ್ತಿಯನ್ನು ತೊಗಲುಗೊಂಬೆ ಕಲಾವಿದ 91 ವರ್ಷದ “ನಾರಾಯಣಪ್ಪ ಕಾರಿಗನೂರು’ ಅವರಿಗೆ ನಟರಾಜ ವಿಗ್ರಹದೊಂದಿಗೆ 11 ಸಾವಿರ ರೂ.ಚೆಕ್‌ ನೀಡಿ ಗೌರವಿಸಲಾಯಿತು. ಬಳಿಕ ಡಾ|ರಾಜಪ್ಪ ದಳವಾಯಿ, ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ|ಕೆ.ಆರ್‌. ದುರ್ಗಾದಾಸ  ಅವರನ್ನು ಗೌರವಿಸಲಾಯಿತು.

ಕೆ.ವಸಂತಕುಮಾರ, ಕವಿತಾ ಗಂಗೂರ ಗೀತ ನಮನ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕ್ಯಾಷಿಯೋ ತಿಪ್ಪೇಸ್ವಾಮಿ ಹಾಗೂ ತಬಲಾ ವಿರುಪಾಕ್ಷಪ್ಪ ಸಾಥ್‌ ನೀಡಿದರು. ರಂಗತೋರಣ ಅಧ್ಯಕ್ಷ ಪ್ರೊ|ಆರ್‌ .ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಟ್ರಸ್ಟ್‌ ಅಧ್ಯಕ್ಷ ಎಚ್‌.ತಿಪ್ಪೇಸ್ವಾಮಿ ಇದ್ದರು. ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ, ಬೆಳಗಲ್ಲು ವೀರಣ್ಣರ ಕುರಿತು ಬರೆದ ಕವನ ವಾಚಿಸಿದರು. ಎಚ್‌. ತಿಪ್ಪೇಸ್ವಾಮಿ ನಿರೂಪಿಸಿದರು. ಬಯಲಾಟ ಕಲಾವಿದ ಸುಬ್ಬಣ್ಣ ವಂದಿಸಿದರು. ಶ್ರೀರಾಮಾಂಜನೇಯ
ತೊಗಲುಗೊಂಬೆ ಟ್ರಸ್ಟ್‌ನಿಂದ “ಮಹಾತ್ಮಾಗಾಂಧಿ ’ ತೊಗಲುಗೊಂಬೆ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next