ಬಾಲಿ (ಇಂಡೋನೇಷ್ಯಾ) : ಹಿಂದೂ ದೇವಸ್ಥಾನದ ಮುಂದೆ ವ್ಯಕ್ತಿಯೊಬ್ಬ ನಗ್ನವಾಗಿ ಧ್ಯಾನಕ್ಕೆ ಕುಳಿತಿರುವ ಘಟನೆಯ ವಿಡಿಯೋ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿದೇಶಿ ಪ್ರಜೆ ಆಗಿರುವ, ಪ್ರವಾಸಕ್ಕೆ ಬಂದಿರುವ ವ್ಯಕ್ತಿಯೊಬ್ಬ ಬಟ್ಟೆಯಿಲ್ಲದೆ ದೇಗುಲದ ಮುಂದೆ ಅಡ್ಡ ಕಾಲಿನಲ್ಲಿ ಕೂತುಕೊಂಡು ಧ್ಯಾನ ಮಾಡಿದ್ದಾನೆ.ಬಾಲಿಯ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸಿಗನ ಈ ಅನುಚಿತ ವರ್ತನೆಯ ವಿಡಿಯೋ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ವೀಡಿಯೊವನ್ನು ಬಾಲಿಯ ಸೋಶಿಯಲ್ ಮೀಡಿಯಾ ಪ್ರಭಾವಿ ನಿ ಲುಹ್ ಡಿಜೆಲಾಂಟಿಕ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು, ವಿದೇಶಿ ವ್ಯಕ್ತಿಯ ಅಗೌರವದ ಕೃತ್ಯದ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಲಸೆ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಯನ್ನು ಅಧಿಕಾರಿಗಳು ಗುರುತಿಸಿದ್ದು, ಅವರು ಇನ್ನೂ ಅವರ ಹೆಸರು ಅಥವಾ ರಾಷ್ಟ್ರೀಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಸದ್ಯ ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರವಾಸಿಗನ ಇಂತಹ ವರ್ತನೆ ವಿರುದ್ಧ ಅಸಮಾನಧಾನವನ್ನು ಹೊರಹಾಕಿದ್ದಾರೆ.
ಘಟನೆಯ ಬಗ್ಗೆ ತನಿಖೆಗಳು ನಡೆಯುತ್ತಿವೆ ಎಂದು ದೃಢಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿದೆ ಎಂದು ವಲಸೆ ಕಚೇರಿಯ ಮುಖ್ಯಸ್ಥ ಟೆಡಿ ರಿಯಾಂಡಿ ಹೇಳಿದ್ದಾರೆ.
ಬಾಲಿಯಲ್ಲಿ ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅನುಚಿತ ವರ್ತನೆಯಿಂದಾಗಿ ವಿದೇಶಿ ಪ್ರವಾಸಿಗರನ್ನು ಗಡೀಪಾರು ಮಾಡಲಾಗುತ್ತಿದೆ ಮತ್ತು ಅಂತಹವರಿಗೆ ಇಂಡೋನೇಷ್ಯಾ ಪ್ರವೇಶ ನಿಷೇಧಿಸಲಾಗಿದೆ.
ಇದೇ ವರ್ಷದ ಏಪ್ರಿಲ್ ನಲ್ಲಿ ಪವಿತ್ರ ಮರದ ಮುಂದೆ ತನ್ನ ನಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ರಷ್ಯಾದ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿಯನ್ನು ಬಾಲಿಯಿಂದ ಹೊರಹಾಕಲಾಗಿತ್ತು. ಡ್ಯಾನಿಶ್ ಮಹಿಳೆಯೊಬ್ಬರು ಬೈಕ್ ನಲ್ಲಿ ಹೋಗುವ ವೇಳೆ ಅನುಚಿತವಾಗಿ ವರ್ತಿಸಿದ್ದರು.