ಬೆಂಗಳೂರು: ವಿಚಿತ್ರ ಸನ್ನಿವೇಶದಲ್ಲಿ ಸಚಿವ ಸಂಪುಟ ರಚನೆಯಾಗಿರುವುದರಿಂದ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನವಾಗಿರುವುದು ಸತ್ಯ. ಬಾಕಿಯಿರುವ ಆರು ಖಾತೆ ಹಂಚಿಕೆ ವೇಳೆ ಮುಖ್ಯಮಂತ್ರಿಗಳು ಈ ಬಗ್ಗೆ ಯೋಚಿಸುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
“ಉದಯವಾಣಿ’ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಪುಟದಲ್ಲಿ ಬೆಂಗಳೂರು, ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ ಎಂಬ ಮಾತಿದೆ. ಆ ಎರಡು ಜಿಲ್ಲೆಗಳಿಂದಲೇ ಹೆಚ್ಚು ಮಂದಿ ಪಕ್ಷಕ್ಕೆ ಬಂದಿದ್ದಾರೆ. ಮೊದಲ ಬಾರಿಯ ವಿಸ್ತರಣೆಯಲ್ಲೇ ಈ ಜಿಲ್ಲೆಗಳಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಪ್ರಾತಿನಿಧ್ಯ ತುಸು ಹೆಚ್ಚಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಗೆ ಸಂಪುಟದಲ್ಲಿ ನ್ಯಾಯಯುತ ಸ್ಥಾನಮಾನ ಸಿಗಲೇ ಬೇಕು. ಕ್ಯಾಬಿನೆಟ್ ವಿಚಿತ್ರ ಸನ್ನಿವೇಶದಲ್ಲಿ ರಚನೆಯಾಗಿದೆ. ಬೇರೆ ಪಕ್ಷದಿಂದ ಬಂದ 15 ಮಂದಿ ಬೆಂಬಲಿಸದಿದ್ದರೆ ಸಂಪುಟವೇ ಆಗುತ್ತಿರಲಿಲ್ಲ. ಅವರಿಗೆಲ್ಲಾ ಕೊಟ್ಟ ಮಾತು ಉಳಿಸಿಕೊಳ್ಳುವುದು ನ್ಯಾಯಯುತ ಎಂದು ಸಮರ್ಥಿಸಿಕೊಂಡರು.
ಇಷ್ಟಪಟ್ಟು ಕೆಲಸ ಮಾಡಬೇಕು: ಕೆಲ ನೂತನ ಸಚಿವರು ಇಂಥದ್ದೇ ಖಾತೆ ಬೇಕು ಎಂದು ಒತ್ತಡ ಹೇರಿದ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಎಲ್ಲರೂ ಸಚಿವರಾಗಲೆಂದೇ ಬಂದಿದ್ದಾರೆ. ಶಿಕ್ಷಣ ಖಾತೆ ಲಾಭದಾಯಕವಲ್ಲ, ಕೇಳುವವರೇ ಇಲ್ಲ ಎಂಬ ಮಾತು ಕೇಳಿ ಬಂದಿತ್ತು. ಹಿಂದೆ ಶಿಕ್ಷಣ ಕ್ಷೇತ್ರ ನಿಭಾಯಿಸಿದ್ದ ಎಚ್.ವಿಶ್ವನಾಥ್, ಕಿಮ್ಮನೆ ರತ್ನಾಕರ್, ಗೋವಿಂದೇಗೌಡ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ.
ಹಿಂದೆ ಬಸವಲಿಂಗಪ್ಪ ಅವರು ತಮಗೆ ಸಿಕ್ಕ ಪರಿಸರ ಖಾತೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಕೊಟ್ಟ ಖಾತೆಯನ್ನು ಹೇಗೆ ಇಷ್ಟಪಟ್ಟು ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಅಂತಿಮವಾಗಿ ಇದು ವ್ಯಕ್ತಿಯ ಪ್ರಶ್ನೆಯಷ್ಟೇ ಎಂದು ಹೇಳಿದರು.
ಕೆಲ ಕ್ಷೇತ್ರಗಳಲ್ಲಿ ಅನುಭವವಿರುವುದರಿಂದ ಚೆನ್ನಾಗಿ ಕೆಲಸ ಮಾಡಬೇಕು ಎಂಬ ಚಿಂತನೆ ಕೆಲವರಲ್ಲಿರಬಹುದು. ಸಚಿವ ಸ್ಥಾನ ಸಿಕ್ಕವರು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಪಕ್ಷ, ಸರ್ಕಾರದ ವರ್ಚಸ್ಸು ಅವಲಂಬಿತ ವಾಗಿರುತ್ತದೆ. 2008-13ರ ಅವಧಿಯಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡಿತ್ತು ಎಂಬುದು ನನ್ನ ಭಾವನೆ.
ಕೆಜೆಪಿ, ಬಿಜೆಪಿ ಎಂದಾಗದಿದ್ದರೆ ಒಳ್ಳೆಯ ಸಂಖ್ಯೆಯನ್ನೇ ಪಡೆಯುತ್ತಿದ್ದೆವು. ಹಾಲಿ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಎರಡು ತಿಂಗಳ ಅಧಿಕಾರಾವಧಿ ಬಾಕಿ ಇದೆ. ಯಾವ ರೀತಿ ಕೆಲಸ ಮಾಡುತ್ತೇವೆ, ಜನರಿಗೆ ಹತ್ತಿರವಾಗುತ್ತೇವೆ ಎಂಬುದರ ಮೇಲೆ ವರ್ಚಸ್ಸು ಅವಲಂಬಿತವಾಗಿ ರುತ್ತದೆ ಎಂದು ಅಭಿಪ್ರಾಯಪಟ್ಟರು.