Advertisement

Tilak ವ್ಯಕ್ತಿಗುಣಗಳ ಶ್ರೀಮಂತಿಕೆಯಿಂದ ಲೋಕಮಾನ್ಯರಾದ ಕರ್ಮಸಿದ್ಧಾಂತಿ

08:31 AM Jul 23, 2024 | Team Udayavani |

“ನಾವು ಬಂದ ಅನಂತರವೂ ಭಾರತೀಯರು ಶಾಂತಿಯಿಂದಿದ್ದರು. ಅವರೊಳಗೆ ಕ್ರಾಂತಿಯ ವಿಷ ಬೀಜ ಬಿತ್ತಿದವರು ಬಾಲಗಂಗಾಧರ ತಿಲಕರು. ಭಾರತದ ಅಶಾಂತಿಯ ಜನಕ ತಿಲಕ್‌ ‘ – ಇದು ಬ್ರಿಟಿಷ್‌ ಇತಿಹಾಸಕಾರ ವಾಲೆಂಟೈನ್‌ ಶಿರೋಲ್‌ ಅಭಿಪ್ರಾಯ. ಸ್ವತ್ವವನ್ನು ಮರೆತಿದ್ದ ಭಾರತೀಯರನ್ನು ಎಚ್ಚರಿಸಿ ಅವರಲ್ಲಿ ರಾಷ್ಟ್ರೀಯ ಚೈತನ್ಯವನ್ನು ಜಾಗೃತಗೊಳಿಸಿದ ಕ್ರಾಂತಿಪುರುಷನ ಬಗೆಗೆ ಆ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅದೆಂತಹ ಭಯ, ಆಕ್ರೋಶಗಳಿದ್ದವು ಎಂಬು ದಕ್ಕೆ ಆಂಗ್ಲ ಇತಿಹಾಸಕಾರನ ಮಾತುಗಳೇ ಸಾಕ್ಷಿ.

Advertisement

1857ರ ಸ್ವಾತಂತ್ರ್ಯ ಸಂಗ್ರಾಮದ ಪರವಾಗಿ ಧ್ವನಿ ಎತ್ತಿದ್ದ ಬೇರು ಚಿಗುರುಗಳನ್ನು ಬ್ರಿಟಿಷರು ಒಂದೊಂದಾಗಿ ಕಿತ್ತುಹಾಕುತ್ತಾ ಬರುತ್ತಿತ್ತು. ನಾನಾ ಸಾಹೇಬ, ತಾತ್ಯಾಟೋಪೆ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ಮುಂತಾದ ರಣಕಲಿಗಳ ಆತ್ಮಾಹುತಿ ಯಾಯಿತು. ಸಾವಿರಾರು ದೇಶಭಕ್ತರನ್ನು ಬ್ರಿಟಿಷ್‌ ಸರಕಾರ ನಿರ್ದಯವಾಗಿ ನೇಣುಗಂಬಕ್ಕೇರಿಸಿತು. ಬ್ರಿಟಿಷರ ಮೃಗೀಯ ವರ್ತನೆಯಿಂದ ಭಾರತೀ ಯರು ನೆಮ್ಮದಿಯನ್ನು ಕಳೆದುಕೊಂಡು, ದೇಶದ ಭವಿಷ್ಯಕ್ಕೆ ಆವರಿಸಿರುವ ಕತ್ತಲೆಯೆಡೆಗೆ ದೈನ್ಯತೆ ಯಿಂದ ನೋಡುತ್ತಿರುವಾಗ, ಆ ಕತ್ತಲೆಯನ್ನು ತೊಡೆದು ಪ್ರಖರ ಬೆಳಕಿನಂತೆ ಉದಯಿಸಿದವರು ಬಾಲಗಂಗಾಧರ ತಿಲಕರು. ಜನತೆಯ ಜಡತ್ವ ದೂರಗೊಳಿಸಿ ಅವರಲ್ಲಿ ಆತ್ಮಪ್ರಜ್ಞೆ ಹಾಗೂ ಜಾಗೃತಿಯನ್ನು ಮೂಡಿಸುತ್ತಾ, ಭಾರತದ ಸಾಮಾಜಿಕ ನೇತೃತ್ವದ ಜವಾಬ್ದಾರಿಯನ್ನು ಹೆಗಲಿ ಗೇರಿಸಿಕೊಂಡು, ಲೋಕಮಾನ್ಯರೆನಿಸಿಕೊಂಡರು.

ಮಹಾರಾಷ್ಟದ ರತ್ನಗಿರಿಯಲ್ಲಿ 1856ರ ಜುಲೈ 23ರಂದು ಜನನ. ಬಾಲ್ಯದಿಂದಲೂ ಅಂಗ ಸಾಧನೆಗೆ ವಿಶೇಷ ಗಮನ. ಹಾಗೆಂದು ಓದಿನಲ್ಲಿ ಹಿಂದೆ ಬಿದ್ದವರಲ್ಲ. ಸಂಸ್ಕೃತ ಮತ್ತು ಗಣಿತಶಾಸ್ತ್ರ ಅವರ ಮೆಚ್ಚಿನ ವಿಷಯಗಳು. ತಿಲಕರ ತರ್ಕಬದ್ಧ ವಿಚಾರಶಕ್ತಿಯ ಬೆಳವಣಿಗೆಗೆ ಸಹಕಾರಿಯಾಗಿದ್ದು ಈ ಅಂಶಗಳೇ ಆಗಿದ್ದವು.

“ಭಾರತವನ್ನು ಮತ್ತೆ ಗತಕಾಲದ ವೈಭವದ ಸ್ಥಿತಿಗೆ ಒಯ್ಯಬೇಕು, ಯಾಕೆಂದರೆ ರಾಷ್ಟ್ರ ವೊಂದರ ಭವಿಷ್ಯವು ಅದರ ಇತಿಹಾಸದ ಆಧಾರದಲ್ಲಿ ರೂಪಿಸಲ್ಪಡಬೇಕು’ ಎಂಬ ಸ್ಪಷ್ಟ ಕಲ್ಪನೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕಿಳಿದವರು ತಿಲಕರು. “ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವುದು ಒಂದು ಮುಖವಾದರೆ, ರಾಷ್ಟ್ರವನ್ನು ಕಟ್ಟುವುದು ಮತ್ತೂಂದು ಮುಖ’ ಎಂಬ ಅರಿವಿದ್ದ ತಿಲಕರು, 1920ರ ವೇಳೆಗೇ ಸ್ವತಂತ್ರ ರಾಷ್ಟ್ರದ ರಚನಾತ್ಮಕ ನಕ್ಷೆಯನ್ನು ಸಿದ್ಧಪಡಿಸಿದ್ದರು. “ಭಾರತೀಯ ಮೌಲ್ಯಗಳ ಆಧಾರದಿಂದಲೇ ನಮ್ಮ ಜೀವನಕ್ರಮ ರೂಪಿತಗೊಳ್ಳಬೇಕು. ನಾವು ಇಚ್ಛಿಸುವ ಸುಧಾರಣೆ ಗಳು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಗಳಿಂದ ಪ್ರೇರಿತವಾಗಿರಬೇಕೇ ಹೊರತು ಅನ್ಯ ನಾಗರಿಕತೆ ಗಳ ಪ್ರತಿಬಿಂಬವಾಗಿರ ಬಾರದು’ ಎಂದು ಜನತೆ ಯಲ್ಲಿ ಜ್ಞಾನ ಮೂಡಿಸಿ ವಿವೇಚನ ಸಾಮರ್ಥ್ಯ ಬೆಳೆಸುವ ಕಾಯಕಕ್ಕೆ ಮುಂದಾದರು ತಿಲಕರು.

ಬೋಧಕ ವೃತ್ತಿ ಅವರ ಪ್ರೀತಿಯ ಕಾಯಕ. ಆದರೆ ರಾಷ್ಟ್ರ ಕಾರ್ಯಕ್ಕೆ ಸಮಯ ಸಾಲುತ್ತಿಲ್ಲ ವೆಂದರಿತು ರಾಜೀನಾಮೆ ನೀಡಿ ತಮ್ಮ ಪೂರ್ಣ ಸಮಯ ರಾಷ್ಟ್ರ ಕಾರ್ಯಕ್ಕಾಗಿ ಮೀಸಲಿಟ್ಟರು. ಆ ಸಂದರ್ಭದಲ್ಲಿ ಜನ್ಮ ತಾಳಿದ್ದು ಮರಾಠಿಯ “ಕೇಸರಿ’ ಮತ್ತು ಇಂಗ್ಲಿಷ್‌ನ “ಮರಾಠಾ’ ಪತ್ರಿಕೆಗಳು. “ಸ್ವರಾಜ್ಯವೆಂದರೆ ಕೇವಲ ಪರಕೀಯ ದಾಸ್ಯದಿಂದ ಮುಕ್ತರಾಗುವುದು ಮಾತ್ರವಲ್ಲ, ವ್ಯಕ್ತಿಯ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಮತ್ತು ವಿಕಾಸಕ್ಕೆ ಅವಕಾಶವಾಗುವ ವಾತಾವರಣದ ನಿರ್ಮಾಣ’ ಎಂದು ತಮ್ಮ ಸ್ವರಾಜ್ಯದ ಕುರಿತಾದ ಚಿಂತನೆಯನ್ನು ಜನರ ಮುಂದಿಡುತ್ತಿದ್ದರು. ಕೃಷಿ, ಕಂದಾಯ, ವಿದೇಶಿ ಹಣ ವಿನಿಮಯ ಮುಂತಾದ ಅನೇಕ ಸಂಗತಿಗಳ ಬಗೆಗೆ ಬೋಧಪ್ರದ ಬರಹಗಳನ್ನು ಹೊತ್ತು ಬರುತ್ತಿದ್ದವು ಆ ಪತ್ರಿಕೆಗಳು.

Advertisement

1890ರ ದಶಕದಲ್ಲಿ ಹಿಂದೂ ದೇಗುಲಗಳ ಮೇಲಣ ಅನ್ಯ ಧರ್ಮೀಯರ ದಾಳಿಗಳು ಮತ್ತೆ ಮತ್ತೆ ಮರುಕಳಿಸಿದಾಗ ದೇಶದಾದ್ಯಂತ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚ ರಿಸುವಂತೆ ಕರೆಕೊಟ್ಟರು. ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರವಲ್ಲ, ಭಾರತದ ಸನಾತನ ಧರ್ಮವನ್ನು, ದೇವಸ್ಥಾನಗಳನ್ನು ಸಂರಕ್ಷಿಸುವಲ್ಲಿ, ಸಾರ್ವಜನಿಕ ಗಣೇಶೋತ್ಸವದ ಪಾತ್ರ ಅದ್ವಿತೀಯ. “ಅಫ‌lಲಖಾನ ಒಬ್ಬ ಆಕ್ರಮಣಕಾರಿ, ಮತಾಂಧ. ಹಾಗಿರುವಾಗ ಶಿವಾಜಿ ಮಹಾರಾಜರು ಮಾಡಿರು ವುದು ದ್ರೋಹವಲ್ಲ, ಸ್ವಧರ್ಮ ರಕ್ಷಣೆಯ ಕ್ರಮ ವದು’ ಎಂದು ದೇಶದ ಜನರಲ್ಲಿ ಜ್ಞಾನ ತುಂಬಿದರು ಮತ್ತು ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ದೇಶಾದ್ಯಂತ ಸಾರ್ವಜನಿಕ ವಾಗಿ ಆಚರಿಸುವಂತೆ ಕರೆ ನೀಡಿದರು.

1896ರಲ್ಲಿ ಭಾರತದ ಬಹುತೇಕ ಪ್ರದೇಶಗಳು ತೀವ್ರ ಬರಗಾಲಕ್ಕೀಡಾದವು. ಅದರ ಅರಿವಿದ್ದೂ ಇಲ್ಲದಂತಿದ್ದ ಸರಕಾರದ ಕಣ್ತೆರೆಸಲು ತಿಲಕರು ಮುಂದಡಿಯಿಟ್ಟರು. ಕೃಷಿ ಕಾರ್ಮಿಕರ ದಿನಗೂಲಿ ಹೆಚ್ಚಳ, ಅರಣ್ಯಗಳ ಅಂಚಿನಲ್ಲಿ ದನಗಳನ್ನು ಮೇಯಿಸಲು ರೈತರಿಗೆ ಅವಕಾಶ, ಕಂದಾಯ ದರವನ್ನು ಕಡಿಮೆ ಮಾಡಬೇಕು ಮತ್ತು ಕಂದಾಯ ಪಾವತಿಸದ ರೈತರ ಜಮೀನು ,ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು, ಮೂರನೇ ಒಂದು ಭಾಗದಷ್ಟು ಫ‌ಸಲು ಬರದಿದ್ದಾಗ ಭೂಕಂದಾಯವನ್ನು ರದ್ದು ಪಡಿಸಬೇಕು ­ ಇಂತಹ ಜನಾಭಿಮುಖ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು. ಮುಂದಿನ ವರ್ಷ ಬರಗಾಲದ ಜತೆ ಪ್ಲೇಗ್‌ ಅಮರಿಕೊಂಡಿತು. ತಪಾಸಣೆ ದೃಷ್ಟಿಯಿಂದ ಮನೆಯೊಳಗೆ ಪ್ರವೇಶಿ ಸುವ ಸೈನಿಕರು ಹೊಣೆತಪ್ಪಿ ವರ್ತಿಸತೊಡಗಿರುವ ಸುದ್ದಿ ತಿಳಿಯುತ್ತಿದ್ದಂತೆ ತಿಲಕರು ತಾವೂ ಸೈನಿಕರ ಜತೆ ಮನೆಗಳಿಗೆ ಭೇಟಿ ನೀಡಿದರು. ಸಹಾನುಭೂತಿ ಯಿಂದ ವರ್ತಿಸುವಂತೆ ಅಧಿಕಾರಿಗಳು ಮತ್ತು ಸೈನಿಕರಿ ಕಿವಿ ಹಿಂಡಿದರು. ಸರಕಾರದ ವ್ಯವಸ್ಥೆಗಳು ಸಾಲದಾದಾಗ ಜನರ ನೆರವಿನಿಂದ ತಾವೇ ಒಂದು ಪ್ರತ್ಯೇಕ ಆಸ್ಪತ್ರೆಯೊಂದನ್ನು ಆರಂಭಿಸಿದರು.

ಪುಣೆಯ ಜಿಲ್ಲಾ ಅಸಿಸ್ಟೆಂಟ್‌ ಕಮಿಷನರ್‌ ರಾಂಡ್‌ನ‌ ಹತ್ಯೆಯ ಆರೋಪದಲ್ಲಿ ತಿಲಕರನ್ನು ಬಂಧಿಸಿದರು. ಆ ಸಮಯದಲ್ಲಿಯೇ “ಸ್ವರಾಜ್ಯ ನನ್ನ ಜನ್ಮಸಿದ್ಧಹಕ್ಕು, ಅದನ್ನು ಪಡೆದೇ ತೀರುತ್ತೇನೆ’ ಎಂಬ ಇತಿಹಾಸ ಪ್ರಸಿದ್ದ ಘೋಷಣೆ ರೂಪುಗೊಂಡಿದ್ದು.

1903ರಲ್ಲಿ ತಿಲಕರು ಬರೆದ “The Arctic Home in the VEDAS’ ಎಂಬ ಅದ್ವಿತೀಯ ಕೃತಿ ಅವರನ್ನು ನಾಡಿನ ಶ್ರೇಷ್ಠ ವಿದ್ವಾಂಸರ ಸಾಲಿನಲ್ಲಿ ಕೂರಿಸಿತು. 1903ರಲ್ಲಿ ಕೇಸರಿ ಪತ್ರಿಕೆಯಲ್ಲಿ ಬರೆದ “The Country’s Misfortune’ ಲೇಖನದ ಮೇಲೆ ಬ್ರಿಟಿಷ್‌ ಸರಕಾರ ರಾಜದ್ರೋಹದ ಆಪಾದನೆ ಹೊರಿಸಿತು. 6 ವರ್ಷಗಳ ಗಡೀಪಾರು ಶಿಕ್ಷೆ ವಿಧಿಸಿ ಬ್ರಹ್ಮದೇಶ (ಈಗಿನ ಮ್ಯಾನ್ಮಾರ್‌)ದ ಮಾಂಡಲೆ ಸೆರೆಮನೆಗೆ ಕಳುಹಿಸಿತು. ಅಂದಿನ ದಿನಗಳಲ್ಲಿ ಸುಶಿಕ್ಷಿತ ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನು ಉಂಟು ಮಾಡಿದ ತಿಲಕರ “ಗೀತಾ ರಹಸ್ಯ’ ಕೃತಿ ರಚನೆ ಯಾಗಿದ್ದು ಆಗಲೇ. 1914ರಲ್ಲಿ ಬಿಡುಗಡೆಯಾಗಿ 1916ರಲ್ಲಿ ಕರ್ನಾಟಕದ ಚಿಕ್ಕೋಡಿಯಲ್ಲಿ ಮಾಡಿದ ಭಾಷಣದ ವಿಚಾರವಾಗಿ ರಾಜ ದ್ರೋಹದ ಆಪಾದನೆ. ಆದರೆ ನ್ಯಾಯಾಲಯದಲ್ಲಿ ಮೊಕದ್ದಮೆ ಬಿದ್ದುಹೋಯಿತು. ತಿಲಕರ ಪರ ವಾಗಿ ಅಂದು ವಕಾಲತ್ತು ನಡೆಸಿ ವಾದ ಮಂಡಿಸಿ ದವರು ಬ್ಯಾರಿಸ್ಟರ್‌ ಮಹ್ಮದಾಲಿ ಜಿನ್ನಾ!

ವೈದ್ಯಕೀಯ ಸೇವೆ, ಪಾನನಿರೋಧ ಚಳವಳಿ, ಸ್ವದೇಶಿ ಉದ್ಯಮಗಳಿಗೆ ಪ್ರೇರಣೆ ನೀಡಿದರು. ಜೆಮ್‌ಶೆಡ್‌ಜೀ ಟಾಟಾ ಸಂಸ್ಥಾ ಸಮೂಹದ ಔದ್ಯಮೀಕರಣಕ್ಕೆ ಪ್ರೇರಣೆ ನೀಡಿದವರು ಬಾಲಗಂಗಾಧರ ತಿಲಕರು. ಹೀಗೆ ಸ್ವಾತಂತ್ರ್ಯ ಹೋರಾಟದ ಕಾರಣವೊಂದೆ ಅಲ್ಲದೇ ಅವರ ವ್ಯಕ್ತಿಗುಣಗಳ ಶ್ರೀಮಂತಿಕೆಯಿಂದಾಗಿಯೇ ಜಗತ್ತು ಅವರನ್ನು “ಲೋಕಮಾನ್ಯರು’ ಎಂದು ಪ್ರೀತಿಯಿಂದ ಗೌರವಿಸಿತು.

ಲೇಖನ: ಪ್ರಕಾಶ್ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next