Advertisement
ಚಿಕ್ಕಬಳ್ಳಾಪುರ: ನಗರದ ಪ್ರಶಾಂತ್ ನಗರದ ದಿನ್ನೆಹೊಸಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಜಮಾಯಿಸಿದ್ದ ಮುಸ್ಲಿಮರು, ನಗರದ ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ ಮುಖಾಂತರ ದಿನ್ನೆಹೊಸಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಇಸ್ಲಾಂ ಧರ್ಮ ಗುರುಗಳಾದ ಮಹಮ್ಮದ್ ಮನ್ಸೂರ್ ಬಕ್ರೀದ್ ಹಬ್ಬ ಆಚರಣೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
Related Articles
Advertisement
ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಬಿಗಿ ಭದ್ರತೆ: ಬಕ್ರೀದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿತ್ತು. ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಹಾಗೂ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. ಪ್ರಮುಖ ಮಸೀದಿ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಈದ್ಗಾ ಮೈದಾನಗಳ ಬಳಿ ಹೆಚ್ಚುವರಿ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್, ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪ ಅಧೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಕಿಷ್ಕಿಂದೆಯಾಗಿದ್ದ ಈದ್ಗಾ ಮೈದಾನ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಈದ್ಗಾ ಮೈದಾನ ಅತ್ಯಂತ ಕಿರಿದಾಗಿದ್ದ ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯಯಕ್ಕೆ ಪ್ರಾರ್ಥನೆ ಮಾಡಲು ಸಾಧ್ಯವಾಗಲಿಲ್ಲ. ಕೆಲವರು ರಸ್ತೆಯಲ್ಲಿ ನಿಂತು ಪ್ರಾರ್ಥನೆ ಮಾಡಿದರೆ ಕೆಲವರು ಕೂರಲು ಜಾಗದ ಸಮಸ್ಯೆಯಿಂದ ಪ್ರಾರ್ಥನೆ ಕೈ ಬಿಟ್ಟರು. ಈದ್ಗಾ ಮೈದಾನ ಸಾಕಷ್ಟು ಕಿರಿದಾಗಿದ್ದರಿಂದ ಪ್ರಾರ್ಥನೆ ಮಾಡಲು ಪರದಾಡಬೇಕಾಯಿತು. ನಗರದ ಹೊರ ಭಾಗದಲ್ಲಿ ಈದ್ಗಾ ಮೈದಾನಕ್ಕೆ ಸ್ಥಳಾವಕಾಶ ಮಾಡಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ ಎಂಬ ಅಸಮಾಧಾನ ಸಮುದಾಯದ ಮುಖಂಡರಿಂದ ಕೇಳಿ ಬಂತು.
ಈದ್ಗಾ ಮೈದಾನಕ್ಕೆ ಬಾರದ ಜನ ನಾಯಕರು: ರಂಜಾನ್ ಆಗಲಿ ಅಥವಾ ಬಕ್ರೀದ್ ಹಬ್ಬವಾಗಲಿ, ಈದ್ಗಾ ಮೈದಾನಕ್ಕೆ ತಪ್ಪದೇ ಕ್ಷೇತ್ರದ ಶಾಸಕರು, ಸಂಸದರು ತಪ್ಪದೇ ಹಾಜರಾಗಿ ಮುಸ್ಲಿಂ ಸಮುದಾಯಕ್ಕೆ ಶುಭಾಷಯ ಕೋರುತ್ತಿದ್ದರು. ಆದರೆ, ಈ ಬಾರಿ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ಬರಲಿಲ್ಲ. ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ ಬರುತ್ತಾರೆಂಬ ನಿರೀಕ್ಷೆ ಹುಸಿಯಾದರೆ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಆಗಮನ ಕೊನೇ ಘಳಿಗೆಯಲ್ಲಿ ರದ್ದಾಯಿತು.