Advertisement

ಭಜರಂಗಿ-2 ಮತ್ತೆ ಪ್ರದರ್ಶನ ಶುರು…

11:14 AM Nov 03, 2021 | Team Udayavani |

ಕಳೆದ ಶುಕ್ರವಾರ (ಅ. 29) ತೆರೆಕಂಡ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ “ಭಜರಂಗಿ-2′ ಚಿತ್ರ ಭರ್ಜರಿಯಾಗಿ ಓಪನಿಂಗ್‌ ಪಡೆದುಕೊಂಡಿತ್ತು. ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಕಣ್ತುಂಬಿಕೊಳ್ಳಲು ಶಿವಣ್ಣನ ಫ್ಯಾನ್ಸ್‌ ಕಾತುರರಾಗಿದ್ದು, ಬೆಳಿಗ್ಗೆ 5 ಗಂಟೆಯಿಂದಲೇ “ಭಜರಂಗಿ-2′ ಚಿತ್ರದ ಪ್ರದರ್ಶನ ರಾಜ್ಯದ ಹಲವೆಡೆ ಶುರುವಾಗಿತ್ತು.

Advertisement

ನಟ ಶಿವರಾಜಕುಮಾರ್‌ ಕೂಡ ಬೆಳ್ಳಂಬೆಳಿಗ್ಗೆ ಹಲವು ಥಿಯೇಟರ್‌ ಗಳಿಗೆ ಭೇಟಿ ಕೊಟ್ಟಿದ್ದರು. “ಭಜರಂಗಿ-2′ ತೆರೆಕಂಡ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ಹೌಸ್‌ಫ‌ುಲ್‌ ಬೋರ್ಡ್‌ಗಳು ಬಿದ್ದಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಇಡೀ ಚಿತ್ರೋದ್ಯಮದ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಯ್ತು. ಪುನೀತ್‌ ರಾಜಕುಮಾರ್‌ ನಿಧನದ ಸುದ್ಧಿ ಚಿತ್ರೋದ್ಯಮಕ್ಕೆ ಬರಸಿಡಿಲಿನಂತೆ ಬಂದೆರಗಿತು. ಪುನೀತ್‌ ನಿಧನದ ಸುದ್ದಿ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ, ಚಿತ್ರೋದ್ಯಮದ ಚಟುವಟಿಕೆಗಳು ಸಂಪೂರ್ಣ ಬಂದ್‌ ಆದವು.

ಪುನೀತ್‌ ಅಗಲಿಕೆಯ ದುಃಖದಿಂದ, ರಾಜ್ಯದ ಎಲ್ಲ ಚಿತ್ರಮಂದಿರಗಳು ಕೂಡ ಸ್ವಯಂಪ್ರೇರಿತವಾಗಿ ಸಿನಿಮಾಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದವು. ಇದರಿಂದಾಗಿ, ಅದ್ಧೂರಿಯಾಗಿ ಓಪನಿಂಗ್‌ ಪಡೆದುಕೊಂಡಿದ್ದ “ಭಜರಂಗಿ-2′ ಚಿತ್ರಕ್ಕೆ ಮೊದಲ ದಿನವೇ ದೊಡ್ಡ ಆಘಾತ ಎದುರಾಯಿತು. ಇದೀಗ ಪುನೀತ್‌ ರಾಜಕುಮಾರ್‌ ಅಂತ್ಯಕ್ರಿಯೆ, ಹಾಲು-ತುಪ್ಪ ಕಾರ್ಯ ಮುಗಿದಿದ್ದು, ಕಳೆದ ಐದಾರು ದಿನಗಳಿಂದ ಶೋಕಾಚರಣೆಯ ಸಲುವಾಗಿ ಸ್ಥಗಿತಗೊಂಡಿದ್ದ ಸಿನಿಮಾಗಳ ಚಿತ್ರೀಕರಣ, ಪ್ರದರ್ಶನ ಮತ್ತಿತರ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. ಹಾಗೆಯೇ ಕಳೆದ ಶುಕ್ರವಾರ (ಅ. 29)ದ ಮಧ್ಯಾಹ್ನದಿಂದಲೇ ಸ್ಥಗಿತಗೊಂಡಿದ್ದ “ಭಜರಂಗಿ-2′ ಚಿತ್ರದ ಪ್ರದರ್ಶನ ಕೂಡ ಮತ್ತೆ ಶುರುವಾಗಿದೆ.

“ಭಜರಂಗಿ-2′ ಚಿತ್ರದ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲೂ ನಿಧಾನಗತಿಯಲ್ಲಿ ಏರಿಕೆ ಕಂಡುಬರುತ್ತಿದೆ. ಈ ಬಗ್ಗೆ ಮಾತನಾಡುವ “ಭಜರಂಗಿ-2′ ಚಿತ್ರದ ನಿರ್ದೇಶಕ ಹರ್ಷ ಎ, “ನಮ್ಮ ಸಿನಿಮಾಕ್ಕೆ ತುಂಬ ಒಳ್ಳೆಯ ಓಪನಿಂಗ್‌ ಸಿಕ್ಕಿತ್ತು. ಸಿನಿಮಾ ನೋಡಿದವರಿಂದ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿತ್ತು. ಆದ್ರೆ ಪುನೀತ್‌ ರಾಜಕುಮಾರ್‌ ಅವರ ನಿಧನದಿಂದ ನಾವೇ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದೆವು. ಈಗ ಮತ್ತೆ ಪ್ರದರ್ಶನಗಳು ಶುರುವಾಗಿದ್ದು, ಪ್ರೇಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಶೀಘ್ರದಲ್ಲಿಯೇ ಈ ವಾರದ ಬಳಿಕ ಥಿಯೇಟರ್‌ಗಳ ಸಂಖ್ಯೆಯಲ್ಲೂ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ;- 10 ದಿನದಲ್ಲಿ ಪೊಲೀಸರಿಗೆ ವಿಶೇಷ ಭತ್ಯೆ ಬಿಡುಗಡೆ

Advertisement

“ಭಜರಂಗಿ-2′ ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಪುನೀತ್‌ ರಾಜಕುಮಾರ್‌ “ಭಜರಂಗಿ-2′ ಚಿತ್ರದ ಹಾಡುಗಳು, ಟ್ರೇಲರ್‌ ಮತ್ತು ಮೇಕಿಂಗ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆದಷ್ಟು ಬೇಗ ಸಿನಿಮಾವನ್ನು ನೋಡುವುದಾಗಿಯೂ ಹೇಳಿದ್ದರು. ಆದರೆ “ಭಜರಂಗಿ-2’ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಸಿನಿಮಾದ ಬಿಡುಗಡೆಗೂ ಮೊದಲೇ ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದ ಪುನೀತ್‌ ರಾಜಕುಮಾರ್‌ ಮಾತ್ರ ಸಿನಿಮಾ ನೋಡಲು ನಮ್ಮೊಂದಿಗೆ ಇಲ್ಲ ಎಂಬ ಬೇಸರ ಚಿತ್ರತಂಡದಲ್ಲಿ ಮನೆ ಮಾಡಿದೆ.

ಮೆಡಿಕಲ್‌ ಮಾಫಿಯಾ ಮತ್ತು ಪಾರಂಪರಿಕ ವೈದ್ಯಪದ್ದತಿ ಸುತ್ತ “ಭಜರಂಗಿ-2′ ಚಿತ್ರದ ಕಥೆಯನ್ನು ನಿರ್ದೇಶಕ ಹರ್ಷ ಹೆಣೆದಿದ್ದಾರೆ. “ಜಯಣ್ಣ ಫಿಲಂಸ್‌’ ಬ್ಯಾನರ್‌ನಲ್ಲಿ ಜಯಣ್ಣ ಮತ್ತು ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್‌ಗೆ ಜೋಡಿಯಾಗಿ ಭಾವನಾ ಅಭಿನಯಿಸಿದ್ದಾರೆ. ಶ್ರುತಿ, ಲೋಕಿ, ಶಿವರಾಜ್‌ ಕೆ.ಆರ್‌ ಪೇಟೆ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ದೀಪಾವಳಿ ವೇಳೆಗೆ ಮತ್ತೆ ಸೌಂಡ್‌ ಮಾಡುತ್ತಿರುವ “ಭಜರಂಗಿ-2′ ಥಿಯೇಟರ್‌ ನತ್ತ ಪ್ರೇಕ್ಷಕರನ್ನು ಸೆಳೆಯುತ್ತಿದೆ.­

Advertisement

Udayavani is now on Telegram. Click here to join our channel and stay updated with the latest news.

Next