Advertisement

ಏಷ್ಯಾಡ್‌ಗೆ ಬಜರಂಗ್‌, ವಿನೇಶ್‌ ನೇರ ಆಯ್ಕೆ ಮತ್ತೂಂದು ಜಂಗೀಕುಸ್ತಿ!

12:11 AM Jul 30, 2023 | Team Udayavani |

ಭಾರತದ ಕ್ರೀಡಾ ಅಖಾಡದಲ್ಲಿ ಮತ್ತೂಂದು ಜಂಗೀಕುಸ್ತಿಯ ಛಾಯೆ ಕಾಣಿಸಿಕೊಂಡಿದೆ. ಮೊನ್ನೆ ಮೊನ್ನೆಯ ತನಕ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಆರೋಪ ಹೊರಿಸಿ, ಕುಸ್ತಿಪಟು ಗಳೆಲ್ಲ ಭಾರೀ ಪ್ರತಿಭಟನೆಗೆ ಇಳಿದಿದ್ದರು. ಇದು ವಿಶ್ವ ಕುಸ್ತಿ ಫೆಡೆರೇಶನ್‌ ತನಕ ತಲುಪಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಆಗಿತ್ತು. ನಮ್ಮಲ್ಲಿ ಇದಕ್ಕೆ ನಾನಾ ರಾಜಕೀಯ ಬಣ್ಣವನ್ನೂ ಬಳಿಯಲಾಗಿತ್ತು. ಒಂದು ಹಂತಕ್ಕೆ ಇದು ಮುಕ್ತಾಯ ಗೊಂಡಿತು ಎನ್ನುವಾಗಲೇ ಕುಸ್ತಿ ಅಖಾಡ ಮತ್ತೆ ಕಾವೇರಿಸಿಕೊಂಡಿದೆ.

Advertisement

ಭಾರತದ ಖ್ಯಾತ ಕುಸ್ತಿಪಟುಗಳಾದ ಬಜ ರಂಗ್‌ ಪೂನಿಯ ಮತ್ತು ವಿನೇಶ್‌ ಫೋಗಟ್‌ ಅವರಿಗೆ ಮುಂದಿನ ಏಷ್ಯಾಡ್‌ಗೆ ನೇರ ಪ್ರವೇಶ ನೀಡಿರುವುದು ವಿವಾದದ ಕೇಂದ್ರ. ಇವರಿಬ್ಬರೂ ಬ್ರಿಜ್‌ಭೂಷಣ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಿರುವಾಗ ಇವರಿಗೆ ಏಷ್ಯಾಡ್‌ಗೆ ಹೇಗೆ ನೇರ ಪ್ರವೇಶ ನೀಡಲಾಯಿತು? ತಿಂಗಳುಗಟ್ಟಲೆ ನಡೆದ ಪ್ರತಿಭಟನೆ ವೇಳೆ ಇವರು ಯಾವ ಪ್ರಾಕ್ಟೀಸ್‌ ಕೂಡ ನಡೆಸಿರಲಿಲ್ಲ. ಹೀಗಿರುವಾಗ ನೇರ ಪ್ರವೇಶ ಎಷ್ಟು ಸಮಂಜಸ? ಇವರನ್ನೂ ಆಯ್ಕೆ ಟ್ರಯಲ್ಸ್‌ ಮೂಲಕವೇ ಆರಿಸಬಹುದಿತ್ತಲ್ಲ? ಇದು ಉಳಿದವರ ಪ್ರಶ್ನೆ.

ಒಂದು ಹಂತಕ್ಕೆ ಈ ಘಟನೆಗೆ ಅಲ್ಪ ವಿರಾಮ ಲಭಿಸಿದೆ. ಈಗಾಗಲೇ ಏಷ್ಯಾಡ್‌ ಆಯ್ಕೆ ಟ್ರಯಲ್ಸ್‌ ಮುಗಿದಿದೆ. ಕುಸ್ತಿಪಟುಗಳ ಆಯ್ಕೆಯೂ ನಡೆದಿದೆ. ಆದರೆ ನೇರ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನವಂತೂ ಇದ್ದೇ ಇದೆ.

ಇದೊಂದು ಸಹಜ ಪ್ರಕ್ರಿಯೆ
ನೇರ ಆಯ್ಕೆ ಎಂಬುದೊಂದು ಸಹಜ ಪ್ರಕ್ರಿಯೆ. ಟಾಪ್‌ ಕ್ಲಾಸ್‌ ಆ್ಯತ್ಲೀಟ್‌ಗಳಿಗೆ, ಪದಕ ಗೆಲ್ಲಬಲ್ಲ ಫೇವರಿಟ್‌ಗಳಿಗೆ ಇಂಥದೊಂದು ಗೌರವ ಸಲ್ಲಿಸುವ ಸಂಪ್ರದಾಯವನ್ನು ಜಗತ್ತಿನ ಎಲ್ಲ ದೇಶಗಳೂ ಪಾಲಿಸಿಕೊಂಡು ಬರುತ್ತವೆ. ಆದರೆ ಸದ್ಯದ ಬಿಸಿ ವಾತಾವರಣದಲ್ಲಿ ಬಜರಂಗ್‌ ಮತ್ತು ವಿನೇಶ್‌ಗೆ ಇಂಥದೊಂದು ರಾಜ ಮರ್ಯಾದೆ ನೀಡಿದ ಕ್ರಮ ಸರಿಯಲ್ಲ ಎಂಬುದಷ್ಟೇ ಉಳಿದವರ ವಾದ.

ಇಂಥ ನೇರ ಆಯ್ಕೆಗಳ ಹಿಂದೆ ಹಿಂದಿನ ಕೂಟಗಳ ಸಾಧನೆಯನ್ನೂ ಪರಿಗಣಿ ಸಲಾಗುತ್ತದೆ. ಬಜರಂಗ್‌ ಮತ್ತು ವಿನೇಶ್‌ ಇಬ್ಬರೂ 2018ರ ಜಕಾರ್ತಾ ಏಷ್ಯಾಡ್‌ನ‌ಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ಮಾನ ದಂಡದಂತೆ, ಇವರಿಬ್ಬರ ನೇರ ಪ್ರವೇಶದಲ್ಲಿ ವಿವಾದದ ಅಂಶವೇನೂ ಕಾಣಿಸದು. ಬಜರಂಗ್‌ ಮತ್ತು ವಿನೇಶ್‌ ಮಾತ್ರವಲ್ಲ,

Advertisement

ಸಾಕ್ಷಿ ಮಲಿಕ್‌ ಅವರಲ್ಲೂ ಏಷ್ಯಾಡ್‌ಗೆ ನೇರ ಆಯ್ಕೆಯ ಪ್ರಸ್ತಾವ ಮಾಡಲಾಗಿತ್ತು. ಆದರೆ ಸಾಕ್ಷಿ ಇದನ್ನು ತಿರಸ್ಕರಿಸಿದರು. ಆಯ್ಕೆ ಟ್ರಯಲ್ಸ್‌ನಿಂದಲೂ ದೂರ ಉಳಿದರು. ಈ ಪ್ರಕ್ರಿಯೆ ಕುಸ್ತಿಪಟುಗಳ ಒಗ್ಗಟ್ಟನ್ನು ಮುರಿ ಯುವ ಷಡ್ಯಂತ್ರ ಎಂಬುದು ಸಾಕ್ಷಿ ಆರೋ ಪವಾಗಿತ್ತು.

ಇದೇ ಅಂತಿಮವಲ್ಲ

ಬಜರಂಗ್‌ ಮತ್ತು ವಿನೇಶ್‌ ಅವರಿಗೆ ನೇರವಾಗಿ ಏಷ್ಯಾಡ್‌ ಪ್ರವೇಶ ಕಲ್ಪಿಸಿದ್ದು ಅಡ್‌-ಹಾಕ್‌ ಸಮಿತಿ. ಆದರೆ ಇದೇ ಅಂತಿಮವಲ್ಲ. ಸೆ. 16ರಿಂದ, ಅಂದರೆ ಏಷ್ಯಾಡ್‌ಗೂ ಮೊದಲು ಬೆಲ್ಗೆಡ್‌ನ‌ಲ್ಲಿ ವಿಶ್ವ ಕುಸ್ತಿ ಚಾಂಪಿ ಯನ್‌ಶಿಪ್‌ ಸಾಗಲಿದೆ. ಇದಕ್ಕಾಗಿ ಸದ್ಯದಲ್ಲೇ ಆಯ್ಕೆ ಟ್ರಯಲ್ಸ್‌ ನಡೆಯಲಿದೆ. ಇಲ್ಲಿ ಗೆದ್ದರಷ್ಟೇ ಬಜರಂಗ್‌ ಮತ್ತು ವಿನೇಶ್‌ಗೆ ಏಷ್ಯಾಡ್‌ ಅವಕಾಶ ನೀಡಬೇಕೆಂದು ಭಾರತೀಯ ಕುಸ್ತಿಯ ತಾತ್ಕಾಲಿಕ ಸಮಿತಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ ಸೂಚಿಸಿದೆ. ಅಕಾಸ್ಮಾತ್‌ ಇಲ್ಲಿ ಮುಗ್ಗರಿಸಿದರೆ ಇವರಿಗೆ ಏಷ್ಯಾಡ್‌ ಟಿಕೆಟ್‌ ಲಭಿಸದು ಎಂಬುದೂ ಮುಖ್ಯ.

ಟ್ರಯಲ್ಸ್‌ ವಿರೋಧಿಸಿಲ್ಲ
ನೇರ ಆಯ್ಕೆಯ ವಿವಾದ ತೀವ್ರಗೊಂಡಾಗ, ಇದು ನ್ಯಾಯಾಲಯದ ಮೆಟ್ಟಿಲು ಏರಿದಾಗ ಇಬ್ಬರೂ ಪ್ರತಿಕ್ರಿಯಿಸಿದ್ದರು. “ನಾವೇನೂ ಆಯ್ಕೆ ಟ್ರಯಲ್ಸ್‌ ವಿರೋಧಿಸಿಲ್ಲ. ಪಲಾಯನವನ್ನೂ ಮಾಡಿಲ್ಲ. ಟ್ರಯಲ್ಸ್‌ಗೆ ಹೆಚ್ಚಿನ ಸಮಯಾವಕಾಶ ನೀಡಿ ಎಂದು ಕೇಳಿಕೊಂಡಿದ್ದೆವು. ಯುವ ಕುಸ್ತಿಪಟುಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೆ ಕುಸ್ತಿ ಫೆಡರೇಶನ್‌ ರಾಜಕೀಯ ಮಾತ್ರ ಅರ್ಥವಾಗುತ್ತಿಲ್ಲ’ ಎಂದಿದ್ದರು.

ನ್ಯಾಯಾಲಯದ ತಡೆ ಇಲ್ಲ
ಬಜರಂಗ್‌ ಪುರುಷರ 65 ಕೆ.ಜಿ., ಹಾಗೂ ವಿನೇಶ್‌ ವನಿತೆಯರ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಇದೇ ವಿಭಾಗದ ಆಕಾಂಕ್ಷಿಗಳಾದ ಸುಜೀತ್‌ ಕಲ್ಕಲ್‌ ಮತ್ತು ಅಂತಿ ಮ್‌ ಪಂಘಲ್‌, ಈ ತಾರತಮ್ಯ ಸರಿಯೇ ಎಂದು ಪ್ರಶ್ನಿಸಿ ದಿಲ್ಲಿ ನ್ಯಾಯಾಲಯದ ಮೆಟ್ಟಿ ಲೇರಿದ ವಿದ್ಯಮಾನವೂ ಸಂಭವಿಸಿತು. ಇದರಲ್ಲಿ ಇವರಿಬ್ಬರಿಗೂ ಹಿನ್ನಡೆಯಾಗಿದೆ. ನೇರ ಆಯ್ಕೆ ವಿಚಾರದಲ್ಲಿ ತಾನು ಮಧ್ಯ ಪ್ರವೇಶಿ ಸುವು ದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚೆಂಡು ಈಗ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ.

ಈ ನಡುವೆ ಟ್ರಯಲ್ಸ್‌ನಲ್ಲಿ ಅಂತಿಮ್‌ ಪಂಘಲ್‌ ಜಯ ಸಾಧಿಸಿದ್ದಾರೆ. ಸದ್ಯ ಮೀಸಲು ಯಾದಿಯಲ್ಲಿದ್ದಾರೆ. ಪ್ರಕರಣ ಇಲ್ಲಿಗೇ ಕೊನೆಗೊಳ್ಳುವ ಸೂಚನೆಯಂತೂ ಲಭಿಸಿದೆ. ಆದರೆ ಇಂಥ ಜಂಗೀಕುಸ್ತಿ ಭಾರತದ ಕ್ರೀಡೆಯ ಪಾಲಿಗೆ ಹಿತಕರ ಬೆಳವಣಿಗೆಯಂತೂ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next