Advertisement

Bajpe: ಎಕ್ಕಾರ್‌ ಪಿಲಿ; ಅಮ್ಮನ ಸೇವೆಯೇ ಗುರಿ; ಹುಲಿ, ಸಿಂಹ ಇತರ ವೇಷಗಳ ಅಬ್ಬರ

01:15 PM Oct 09, 2024 | Team Udayavani |

ಬಜಪೆ: ಎಕ್ಕಾರಿನ ಸಮಸ್ತ ಜನರ ಭಕ್ತಿ ಭಾವದ ಪ್ರತೀಕವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗುವ ನವರಾತ್ರಿಯ ವೈಭವದ ಎಕ್ಕಾರ್‌ ಪಿಲಿ ಮೆರವಣಿಗೆಗೆ ಈಗ 66 ವರ್ಷ. 1958ರಲ್ಲಿ ಆರಂಭಗೊಂಡ ದಸರಾ ಮೆರವಣಿಗೆ ಪ್ರತಿ ವರ್ಷವೂ ನವರಾತ್ರಿಯ ಏಳನೇ ದಿನ, ಮೂಲಾ ನಕ್ಷತ್ರ-ಶಾರದಾ ಪೂಜೆಯಂದೇ ನಡೆಯುತ್ತದೆ. ಎಕ್ಕಾರು ಶ್ರೀ ಗೋಪಾಕೃಷ್ಣ ಭಜನ ಮಂದಿರದಿಂದ ಹೊರಟು ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಗೋಪುರ ಎದುರು ಪ್ರಾರ್ಥಿಸಿ ಕಟೀಲು ಕ್ಷೇತ್ರಕ್ಕೆ ತೆರಳುತ್ತದೆ. ಈ ಬಾರಿ ಅ. 9ರಂದು ಈ ಮೆರವಣಿಗೆ ನಡೆಯಲಿದ್ದು, ಅದಕ್ಕಾಗಿ 60ರಷ್ಟು ಹುಲಿಗಳು, ನಾನಾ ವೇಷಗಳೊಂದಿಗೆ ಊರಿನ ಜನರು ಸಜ್ಜಾಗಿದ್ದಾರೆ.

Advertisement

ದೇವರ ಸೇವೆ, ಹರಕೆಯ ಕುಣಿತ
ಕಟೀಲು ಜಾತ್ರೆ ಸಂದರ್ಭ ಕಟೀಲು ಶ್ರೀ ದುರ್ಗೆ ಆರಾಟೋತ್ಸವದಂದು ಎಕ್ಕಾರು ತಾಂಗಾಡಿ ಕಟ್ಟೆಗೆ ಮೆರವಣಿಗೆಯಲ್ಲಿ ಬಂದು ಪೂಜೆ ಸ್ವೀಕರಿಸುವುದು ಹಿಂದಿನಿಂದ ಬಂದ ಸಂಪ್ರದಾಯ. ನವರಾತ್ರಿ ವೇಳೆ ಎಕ್ಕಾರಿನ ಜನ ಭಕ್ತಿಯಿಂದ ಗುಂಪು ಗುಂಪಾಗಿ ವಿವಿಧ ವೇಷಗಳೊಂದಿಗೆ ಕಟೀಲಿಗೆ ಹೋಗುವುದು ಇನ್ನೊಂದು ಸಂಪ್ರದಾಯ.

ಎಕ್ಕಾರಿನಿಂದ ಹೊರಡುವ ಹುಲಿ, ಇತರ ವೇಷಗಳ ಗುರಿ ಅಮ್ಮನ ಸೇವೆ ಮಾತ್ರ. ಕೆಲವರು ವೃತಧಾರಿಗಳಾಗಿ ವೇಷ ಹಾಕುತ್ತಾರೆ, ಇಷ್ಟಾರ್ಥ ಸಿದ್ಧಿಯ ಹರಕೆ ಹೊತ್ತು ವೇಷ ಹಾಕುತ್ತಾರೆ. ಅವರವರ ಇಚ್ಛೆಯಂತೆ ವೇಷ ಹಾಕಿ ಕುಣಿಯು ತ್ತಾರೆ. ಇಲ್ಲಿ ವೇಷ ಹಾಕಿದವರು ಬೇರೆಲ್ಲೂ ಕುಣಿಯುವುದಿಲ್ಲ. ಹಣ ಸಂಗ್ರಹವಿಲ್ಲ. ಎಕ್ಕಾರಿ ನಿಂದ ಹೊರಟು, ದೇವರ ದರ್ಶನ ಮಾಡಿ ನಂದಿನಿಯಲ್ಲಿ ಸ್ನಾನ ಮಾಡುವಲ್ಲಿಗೆ ಮುಕ್ತಾಯ.

ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರಿಗೂ ವೇಷ ಹಾಕಲು ಅವಕಾಶವಿದೆ. ಆದರೆ ಹರಕೆ ವೇಷ ಹಾಕುವವರು ಮೊದಲು ಸಂಘಟಕರಿಗೆ ತಿಳಿಸಬೇಕು.

ಎಕ್ಕಾರು ಶ್ರೀ ಗೋಪಾಕೃಷ್ಣ ಭಜನ ಮಂದಿರ ದಿಂದ ಹುಲಿವೇಷ ಮೆರವಣಿಗೆ ಆರಂಭ.

Advertisement

 

ಕಾರ್ಮಿಕರು, ಮೇಸ್ತ್ರಿಗಳು ಮೊದಲ ಹುಲಿಗಳು
ಎಕ್ಕಾರಿನಲ್ಲಿ ಮೊದಲ ಬಾರಿಗೆ ಹುಲಿ ಹಾಕಿದ ತಂಡದಲ್ಲಿದ್ದದ್ದು ಮೇಸ್ತ್ರಿಗಳು, ಕಾರ್ಮಿಕರು. ಎಕ್ಕಾರಿನ ದಿ| ಧೂಮ ಮೇಸ್ತ್ರಿ ಅವರ ಕಾಲದಲ್ಲಿ ಮೊದಲ ಬಾರಿಗೆ ಹುಲಿ ವೇಷ ಹಾಕಲಾಗಿತ್ತು. ವ್ಯಾಯಾಮ ಗುರುಗಳಾಗಿದ್ದ ಅವರು ಹುಲಿ ಕುಣಿತದ ಹೆಜ್ಜೆಗಳನ್ನೂ ಕಲಿಸುತ್ತಿದ್ದರು. ದಿ| ಸಿದ್ದು ಪೂಜಾರಿ, ದಿ| ಮೋನಪ್ಪ ಮೊಲಿ, ಗಿರಿಯ ಮೂಲ್ಯ, ದಿ| ಸುಬ್ಬಯ್ಯ ಶೆಟ್ಟಿ, ದಿ| ಜೋಗಿ ಶೆಟ್ಟಿ, ದಿ.ಸುಂದರ್‌ ಸಾಲ್ಯಾನ್‌ ಇಂದಿಗೂ ಜನ ನೆನಪಿಸಿಕೊಳ್ಳುವ ಎಕ್ಕಾರಿನ ಹಳೆ ಹುಲಿಗಳು! ಅವರ ಜತೆಗೆ ಟೈಲರ್‌ ದಿ| ಶ್ರೀನಿವಾಸ ರಾವ್‌, ದಿ| ಲೋಕಯ್ಯ ಶೆಟ್ಟಿ, ದಿ| ತೋಂಚು ಪೂಜಾರಿ, ದಿ| ದೇಜು ಮೂಲ್ಯ, ದಿ| ವೆಂಕಟ ಶೆಟ್ಟಿ ಇತರ ವೇಷಗಳಲ್ಲಿ ಮಿಂಚಿದವರು.

ಹುಲಿ ವೇಷದ ಆರಂಭಿಕ ಹೆಜ್ಜೆಗಳು !

  • ಹುಲಿ ವೇಷಕ್ಕೆ ಬಣ್ಣ, ಹುಲಿ, ಕರಡಿ, ಸಿಂಹದ ಮಂಡೆಗಳನ್ನು ಅವರವರೇ ತಯಾರು ಮಾಡಬೇಕಿತ್ತು.
  • ಮೆರವಣಿಗೆಯ ಮುನ್ನಾ ದಿನ ಹುಲಿ ಕುಣಿತದ ಪೂರ್ವಾಭ್ಯಾಸ ನಡೆಯು ತ್ತಿತ್ತು. ಹೆಜ್ಜೆ ಸರಿ ಇಲ್ಲದಿದ್ದರೆ ಕಾಲಿಗೆ ಪೆಟ್ಟು ಮತ್ತು ಬಣ್ಣ ಹಚ್ಚಲು ಅವಕಾಶವಿಲ್ಲ.
  • ಗುಹೆಯಿಂದ ಹುಲಿ ಹೊರಬರುವ ಕಲ್ಪನೆ ಇಲ್ಲಿತ್ತು. ಮೊದಲು ಮರಿ ಹುಲಿ ಬಳಿಕ ದೊಡ್ಡಹುಲಿ. ತಾಯಿ ಹುಲಿ ಮಕ್ಕಳಿಗೆ ಹಾಲು ಉಳಿಸುವ ದೃಶ್ಯವೂ ಇತ್ತು.
  • ಕೆಲವು ವರ್ಷಗಳ ಅನಂತರ ನಾಲ್ವರು ಹೆಗಲ ಮೇಲೆ ಹೊತ್ತುಕೊಂಡ 4 ಒನಕೆ ಗಳ ಮೇಲೆ ಹುಲಿ ಕುಣಿಯುವ, ಜಂಡೆ ತಿರುಗಿಸುವ ಸಾಹಸವೂ ನಡೆಯುತ್ತಿತ್ತು.
  • ದಂಡಿಗೆಗೆ ಬಾಳೆ, ಸೊಪ್ಪುಗಳನ್ನು ಕಟ್ಟಿ ಹುಲಿ, ಸಿಂಹಗಳು ಪೊದೆಯಿಂದ ಹೊರಬರುವ ಸನ್ನಿವೇಶ ನಿರ್ಮಿಸಲಾಗುತ್ತಿತ್ತು.
  • ಹಿಡಿಯಲು ಎತ್ತರದ ವ್ಯಕ್ತಿಗಳ ಆಯ್ಕೆ ನಡೆಯುತ್ತಿತ್ತು.
  • ಹುಲಿ, ಸಿಂಹ, ಕರಡಿ, ಶಾದೂìಲ, ಬೇಟೆಗಾರನ ವೇಷಗಳ ಜತೆ ಕುರುಕುರು ಮಾಮ, ಜಕ್ಕ ಮದೀನ, ಅನಾರ್ಕಲಿ ವೇಷಗಳೂ ಇದ್ದವು. ಹೆಣ್ಮಕ್ಕಳಂತೂ ವೇಷಗಳ ಬಳಿ ಹೋಗಲು ನಾಚುತ್ತಿದ್ದರು!

ಪ್ರಥಮ ಮೆರವಣಿಗೆ ಖರ್ಚು 32 ರೂ.!
ದಿ| ಧೂಮ ಮೇಸ್ತ್ರಿ ಹುಲಿ ತಂಡ ಕಟ್ಟಿದರೆ ಹುಲಿ ಮತ್ತು ಮೆರವಣಿಗೆ ತಂಡಕ್ಕೆ ಪ್ರೋತ್ಸಾಹಕರಾಗಿ ನಿಂತವರು ದಿ| ಕಮಲಾಕ್ಷ ಭಟ್‌ ಕಲ್ಲಮುಂಡ್ಕೂರು, ದಿ| ರಮಾನಾಥ ಕಾಮತ್‌, ತಾಂಗಾಡಿ ದಿ| ಶ್ರೀನಿವಾಸ ರಾವ್‌. ಶಿಕ್ಷಕರಾದ ತಾಂಗಾಡಿ ದಿ| ಶ್ರೀನಿವಾಸ ರಾವ್‌ ಅವರು ವೇಷಭೂಷಣ, ಇತರ ಸಾಮಗ್ರಿ, ಮೆರವಣಿಗೆ ವ್ಯವಸ್ಥೆಗೆ ಮುಖ್ಯಸ್ಥರು. ಅವರ ಪುತ್ರರು ಅದನ್ನು ಮುಂದುವರಿ ಸಿದ್ದರು. ಈಗ ದಸರಾ ಮಹೋತ್ಸವ ಸಮಿತಿ ನೇತೃತ್ವ ವಹಿಸಿದೆ.

ಅಂದಹಾಗೆ ಪ್ರಥಮ ಮೆರವಣಿಗೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಮೊತ್ತ 38 ರೂ. 14 ಅಣೆ, ಖರ್ಚು 32 ರೂ. 14 ಅಣೆ, ಉಳಿತಾಯ 6 ರೂಪಾಯಿ!

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next