ಮಡಂತ್ಯಾರು: ಕೊಯ್ಯೂರು ಗ್ರಾಮದ ಬಜಿಲ-ಬಂದಾರು ಗ್ರಾಮದ ಬೈಪಾಡಿ-ಪುತ್ತಿಲ ಕೂಡು ರಸ್ತೆಯ ಮೂಲಕ ಕೊಯ್ಯೂರು, ಬೆಳ್ತಂಗಡಿ ತಲುಪುವ ಅರ್ಧ ಕಿ.ಮೀ. ರಸ್ತೆಯಲ್ಲಿರುವ ಡಾಮರು ಸಂಪೂರ್ಣವಾಗಿ ಎದ್ದು ಹೋಗಿದ್ದು, ವಾಹನ ಸವಾರರು ಹೊಂಡ-ಗುಂಡಿಗಳನ್ನು ತಪ್ಪಿಸಿ ಪ್ರಯಾಣಿಸುವುದರಲ್ಲಿ ಹೈರಾಣರಾಗಿದ್ದಾರೆ.
ಈ ಮಾರ್ಗದಲ್ಲೇ ಪುರಾತನ ಕಾಲದ ದೇವಸ್ಥಾನವಿದ್ದು ನೂರಾರು ಭಕ್ತರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ಬರುವಾಗ ಹೊಂಡ, ಗುಂಡಿಗಳನ್ನು ತಪ್ಪಿಸಿಕೊಂಡು ಮುಂದುವರೆದಾಗ 2 ಕಿ.ಮೀ.ಪ್ರಯಾಣ ಮಾಡಿದ ಕಷ್ಟದ ಅನುಭವ ಆಗುತ್ತದೆ ಎಂದು ಅವರು ಹೇಳುತ್ತಾರೆ.
ಈ ಮಾರ್ಗವು ಕೊಯ್ಯೂರು- ಬಂದಾರು ಪಂಚಾಯತ್‌ಗಳ ಸಂಪರ್ಕ ಕಲ್ಪಿಸುತ್ತದೆ. 2 ಗ್ರಾಮದ ಪಂಚಾಯತ್ ವ್ಯಾಪ್ತಿ ಯಲ್ಲಿ ಸುಮಾರು 300ಕ್ಕೂ ಹೆಚ್ಚು ಕೃಷಿಕರ ಮನೆಗಳು ಇವೆ. ಜತೆಗೆ ಕೊಯ್ಯೂರು-ಉಜಿರೆಗೆ ಹೋಗುವ ಸರಕಾರಿ ಬಸ್ ಸಂಚಾರವು ಇಲ್ಲಿ ಇದೆ. ರಸ್ತೆಯಲ್ಲಿನ ಹೊಂಡದಿಂದ ಈ ಭಾಗದ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಹೈನುಗಾರಿಕೆ ಕೃಷಿಕರು, ನೂರಾರು ವಾಹನಗಳು, ಸಾವಿರಾರು ಜನರಿಗೆ ಸಮಸ್ಯೆಯಾಗಿದೆ.
ಹೈನುಗಾರಿಕರು ಹಾಗೂ ಕೃಷಿಕರು ತಮ್ಮ ದ್ವಿಚಕ್ರ ವಾಹನದಲ್ಲಿ ತರಕಾರಿ, ಹಾಲು ಸಾಗಾಟ ಮಾಡುವ ಸಂದರ್ಭ ರಸ್ತೆಯಲ್ಲಿ ಚೆಲ್ಲಿ ಹಾಲಿನ ಅಭಿಷೇಕವಾದ ಘಟನೆಗಳ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಗುಂಡಿ ಮುಚ್ಚಲು ಸಂಬಂಧಿಸಿದ ಇಲಾಖೆ ಗ್ರಾ.ಪಂ. ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾ ಧಾನ ವ್ಯಕ್ತ ಪಡಿಸಿದ್ದಾರೆ.
ರಸ್ತೆಯಲ್ಲೇ ನೀರು; ಸಂಚಾರಕ್ಕೆ ಅಡ್ಡಿ
ಅಂದಾಜು ಅರ್ಧ ಕಿ.ಮೀ. ರಸ್ತೆ ಹದಗೆಟ್ಟು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೂಲಕ ಶೇಖರಣೆಯಾಗಿ ಹೆಚ್ಚಿನ ನೀರು ರಸ್ತೆಯ ಇಕ್ಕೆಲಗಳಲ್ಲಿ ಹಾದು ಹೋಗುತ್ತದೆ. ಈ ಭಾಗದ ಗ್ರಾಮಸ್ಥರು, ಶಾಲಾ ಮಕ್ಕಳು ಕೆಸರು ನೀರಿನಲ್ಲೇ ನಿತ್ಯ ಓಡಾಡುವಾಗ ಅಗುವ ತೊಂದರೆಗಳನ್ನು ತಪ್ಪಿಸಿಕೊಂಡು ಹೋಗುವುದಕ್ಕೆ ಕಷ್ಟ. ದೊಡ್ಡ ಗಾತ್ರದ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರಿಗೆ ಅರಿವಿಗೆ ಬಾರದೆ ಹೊಂಡಕ್ಕೆ ಬೀಳುವುದರಿಂದ ತೊಂದರೆ ಆಗುತ್ತಿದೆ.