Advertisement

ಬಜೆ ನೀರು ಎಪ್ರಿಲ್‌ ತನಕ ಮಾತ್ರ

01:40 PM Feb 17, 2017 | Team Udayavani |

ಉಡುಪಿ: ಬಜೆ ಡ್ಯಾಂನಲ್ಲಿ ಈಗಿರುವ ನೀರಿನ ಪ್ರಮಾಣ ನೋಡಿದರೆ ಉಡುಪಿ ನಗರಕ್ಕೆ ಮುಂದಿನ ಎಪ್ರಿಲ್‌ ಅಂತ್ಯದವರೆಗೆ ಮಾತ್ರ ನೀರು ಕೊಡಬಹುದು. ಮೇ ಅಂತ್ಯದವರೆಗೆ ನೀರು ಕೊಡುವ ಸಲುವಾಗಿ ಈಗಿನಿಂದಲೇ ನೀರು ಪೂರೈಕೆಯಲ್ಲಿ ಕಡಿತ ಅನಿವಾರ್ಯ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಗುರುವಾರ ಬಜೆ ಡ್ಯಾಂನ ನೀರು ಸಂಗ್ರಹ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಕಳೆದ ವರ್ಷ ಈ ದಿನಗಳಲ್ಲಿ ಸುಮಾರು 5.62 ಮೀ. ನೀರು ಇದ್ದರೆ ಈ ಬಾರಿ 5.32 ಮೀ. ನೀರು ಸಂಗ್ರಹವಿದೆ. ಸುಮಾರು 0.32 ಮೀ. ನೀರು ಕಡಿಮೆಯಿದ್ದು, ಎರಡು ದಿನಕ್ಕೊಮ್ಮೆ ಅಥವಾ ದಿನದಲ್ಲಿ ಕೆಲ ಗಂಟೆ ಮಾತ್ರ ನೀರು ಬಿಡುವ ಕ್ರಮ ಕೈಗೊಳ್ಳುವ ಬಗ್ಗೆ ನಗರಸಭೆ ಶೀಘ್ರ ಸಭೆ ಕರೆದು ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದರು.

Advertisement

24 ಗಂಟೆ ವಿದ್ಯುತ್‌ ಪೂರೈಕೆ
ಬಜೆ ಡ್ಯಾಂನ ನೀರು ಶೇಖರಣಾ ಘಟಕದಲ್ಲಿ ಒಂದು ಗಂಟೆ ವಿದ್ಯುತ್‌ ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಸದ್ಯ ಹಿರಿಯಡಕದಿಂದ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದ್ದು, ಹೆಚ್ಚುವರಿಯಾಗಿ ಮಣಿಪಾಲದಿಂದಲೂ ಎಕ್ಸ್‌ಪ್ರೆಸ್‌ ಕಾರಿಡಾರ್‌ ಲೈನ್‌ನಿಂದಲೂ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ 24 ಗಂಟೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಮೋದ್‌ ಹೇಳಿದರು.

ಕೃಷಿಗೆ ನೀರು: ರೈತರ ಮನವಿ
ಈ ಸಂದರ್ಭ ಬಜೆ ಡ್ಯಾಂನ ಆಸುಪಾಸಿನ ರೈತರು ಕೃಷಿಗೆ ಕನಿಷ್ಠ ವಾರದಲ್ಲಿ ಒಂದು ದಿನ ನೀರು ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ಕುದಿ ಶ್ರೀನಿವಾಸ್‌ ಭಟ್‌, ಭತ್ತದ ಕಟಾವು ಈಗಾಗಲೇ ಮುಗಿದಿದ್ದು, ಬಜೆ ಡ್ಯಾಂನ ನೀರು ಕಡಿತದಿಂದ ತೆಂಗು ಹಾಗೂ ಅಡಿಕೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕನಿಷ್ಠ ವಾರಕ್ಕೆ ಒಂದು ದಿನ ಆದರೂ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವರು ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆಯಾಗಿದ್ದು, ರೈತರು ಸಹಕರಿಸಬೇಕು ಎಂದರು. ಈ ಸಂದರ್ಭ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಸದಸ್ಯೆ ಚಂದ್ರಿಕಾ ಕೇಲ್ಕರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಜನಾರ್ದನ ಭಂಡಾರ್‌ಕರ್‌, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣಕ್ಕೆ ನೀರು ಸ್ಥಗಿತ
ಕಟ್ಟಡ ಕಾಮಗಾರಿಗಳಿಗೆ ನೀರು ಪೂರೈಕೆ ಮಾಡುವುದನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಹಾಗೇನಾದರೂ ಬಳಸಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಮಣಿಪಾಲಕ್ಕೂ 2 ದಿನಕ್ಕೊಮ್ಮೆ ಕೊಡುವ ಬಗ್ಗೆ ನಿರ್ಧರಿಸಲಾಗುವುದು. ಕಾಂಪ್ಲೆಕ್ಸ್‌ಗಳಿಗೂ 3ಕ್ಕಿಂತ ಹೆಚ್ಚಿನ ಮಳಿಗೆಯಿದ್ದರೆ ನೀರು ಕಡಿತಗೊಳಿಸುವ ಸಂಬಂಧ ಅಧಿಸೂಚನೆ ಕೊಟ್ಟಿದ್ದೇವೆ. ಟ್ಯಾಂಕರ್‌ ಮೂಲಕ ಕೆಲವೆಡೆ ಈಗಾಗಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ಲ ಸದಸ್ಯರ ಸಭೆ ಕರೆದು ಟಾಸ್ಕ್ಫೋರ್ಸ್‌ ರಚಿಸಿ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಿ ಎಂದು ನಗರಸಭಾ ಪೌರಾಯುಕ್ತ ಡಿ. ಮಂಜುನಾಥಯ್ಯ ಹೇಳಿದರು.

42 ದಶಲಕ್ಷ ಲೀಟರ್‌ ನೀರು ಅಗತ್ಯ
ಉಡುಪಿ ನಗರಕ್ಕೆ ದಿನವೊಂದಕ್ಕೆ 42 ದಶಲಕ್ಷ ನೀರು ಬೇಕಾಗುತ್ತಿದ್ದು, ಸದ್ಯ 22 ದಶಲಕ್ಷ ಲೀಟರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 25.85ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಬಜೆ ಡ್ಯಾಂನ ನೀರಿನ ಮಟ್ಟ 5.62 ಮೀಟರ್‌ ಇತ್ತು. ಅದೇ ಈಗ ಅಂದರೆ ಗುರುವಾರದವರೆಗೆ ನೀರಿನ ಮಟ್ಟ 5.32 ಮೀ. ಇದೆ. ಕಳೆದ ಬಾರಿಗಿಂತ ಶೇ. 32 ಮೀ. ನೀರು ಕೊರತೆಯಿದೆ. ಒಟ್ಟು 17, 862 ಮನೆಗಳು ಹಾಗೂ 8 ಗ್ರಾ. ಪಂ.ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

Advertisement

ಶೀಂಬ್ರದಲ್ಲಿ  ಅಣೆಕಟ್ಟು ನಿರ್ಮಾಣ
ಕುಡಿಯುವ ನೀರಿಗಾಗಿ ನಗರಕ್ಕೆ ಸುಮಾರು 102 ಕೋ.ರೂ. ಕುಡ್ಸೆಂಪ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ. ನೀರಿನ ಅಭಾವದಿಂದ ಜನರಿಗೆ ತೊಂದರೆಯಾಗದಂತೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಶೀಂಬ್ರದಲ್ಲಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ನೀರಾವರಿ ತಜ್ಞರನ್ನು ಕರೆಯಿಸಿ ಹೈಡ್ರೋಲಾಜಿಕಲ್‌ ಸರ್ವೇ ನಡೆಸಿ ಅಣೆಕಟ್ಟು ನಿರ್ಮಾಣದ ಬಗ್ಗೆ ನಿರ್ಧರಿಸಿ ಆನಂತರ ಟೆಂಡರ್‌ ಕರೆಯಲಾಗುವುದು. 8 ಕಡೆ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಹಾಗೂ ಪಂಪಿಂಗ್‌ ಕೆಪಾಸಿಟಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next