Advertisement

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ

07:25 AM May 11, 2019 | Lakshmi GovindaRaj |

ಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೈಯಪ್ಪನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ.

Advertisement

ಬೈಯಪ್ಪನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಜತೆಗೆ, ಶಾಂಪಿಂಗ್‌ ಮಾಲ್‌, ವಸತಿ ಸಮುತ್ಛಯ, ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು, ಈಗಾಗಲೇ ರೈಲ್ವೆ ಇಲಾಖೆ ಈ ಕುರಿತಂತೆ ಯೋಜನಾ ವರದಿ ಸಿದ್ಧಪಡಿಸಿ, ಟೆಂಡರ್‌ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಅದರಂತೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ವಾಣಿಜ್ಯ ಚಟುವಟಿಕೆಗಳ ಕಟ್ಟಡಗಳು ನಿರ್ಮಾಣವಾಗಲಿದ್ದು, ಇಲಾಖೆಗೆ ಆಮೂಲಕ ಆದಾಯ ಬರಲಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲ್ವೆ ಇಲಾಖೆಗೆ ಸೇರಿದ 136 ಎಕರೆ ಜಾಗವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮಾದರಿ ರೈಲು ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ರೈಲ್ವೆ ಇಲಾಖೆಗೆ ಸೇರಿದ 136 ಎಕರೆ ಜಾಗವನ್ನು ವಿವಿಧ ಮಾದರಿಯಲ್ಲಿ ವಿಭಾಗಿಸಲಾಗಿದ್ದು, ಯಾವ ಜಾಗದಲ್ಲಿ ಯಾವ ಯೋಜನೆ ರೂಪಿಸಬೇಕೆಂಬ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಅದರಂತೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಮಾಲ್‌, ಆಸ್ಪತ್ರೆ ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು 99 ವರ್ಷ ಭೋಗ್ಯಕ್ಕೆ ನೀಡಲು ನಿರ್ಧರಿಸಿದ್ದರು, ಭೋಗ್ಯಕ್ಕೆ ಪಡೆದವರು ವಾರ್ಷಿಕ ಇಂತಿಷ್ಟು ಹಣವನ್ನು ಇಲಾಖೆಗೆ ಪಾವತಿಸಬೇಕಾಗುತ್ತದೆ.

ಅತ್ಯಾಧುನಿಕ ರೈಲು ನಿಲ್ದಾಣ ಅಭಿವೃದ್ಧಿ ನಿಗಮ ರೂಪಿಸಿರುವ ಯೋಜನೆಯಂತೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಂತೆ ನಿಲ್ದಾಣದಲ್ಲಿ ಕಿರು ಉದ್ಯಾನ ನಿರ್ಮಿಸುವುದು, ಖಾಸಗಿ ಸಂಸ್ಥೆ ನಿರ್ಮಿಸುವ ಕಟ್ಟಡಗಳಲ್ಲೂ ಹಸಿರು ಕಾಪಾಡುವಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗುತ್ತಿದೆ. ಆ ಮೂಲಕ ಅಭಿವೃದ್ಧಿ ಕಾಮಗಾರಿ ನಡೆದರೂ, ಹಸಿರು ಕಡಿಮೆಯಾಗದಂತೆ ಕ್ರಮವಹಿಸಲಾಗುತ್ತಿದೆ.

Advertisement

ನಿರ್ಮಾಣವಾಗಲಿದೆ ಹೈ-ಟೆಕ್‌ ನಿಲ್ದಾಣ: ಬೈಯಪ್ಪನಹಳ್ಳಿಯಲ್ಲಿ ಸದ್ಯ ಇರುವ ರೈಲು ನಿಲ್ದಾಣವನ್ನು ನೆಲಸಮಗೊಳಿಸಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗುತ್ತದೆ. ಅದರೊಂದಿಗೆ ಉಚಿತ ವೈ-ಫೈ, ಆಟೋಮೆಟಿಕ್‌ ಟಿಕೆಟ್‌ ಯಂತ್ರ ಹಾಗೂ ಆಗಮನ ನಿರ್ಮಾಣ ಬಾಗಿಲುಗಳು, ಎಸ್ಕಲೇಟರ್‌ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಹೈ-ಟೆಕ್‌ಗೊಳಿಸಲಾಗುತ್ತದೆ. ಆ ಮೂಲಕ ಅಂತಾರಾಷ್ಟ್ರೀಯ ಮಾದರಿ ರೈಲು ನಿಲ್ದಾಣ ನಿರ್ಮಿಸುವ ಗುರಿ ಹೊಂದಲಾಗಿದೆ.

ಪಾಲಿಕೆಯಿಂದ ರಸ್ತೆ ನಿರ್ಮಾಣ: ರೈಲು ನಿಲ್ದಾಣವನ್ನು ಸಂಪರ್ಕಿಸುವಂತಹ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರೈಲು ನಿಲ್ದಾನ ಅಭಿವೃದ್ಧಿ ನಿಗಮ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಅದರಂತೆ 10 ಮೀಟರ್‌ ಅಗಲದ ರಸ್ತೆಗಳನ್ನು 20 ಮೀಟರ್‌ಗೆ ಅಗಲೀಕರಣ ಮಾಡುವಂತೆ ಕೋರಲಾಗಿದ್ದು, ಪಾದಚಾರಿ ಮಾರ್ಗ, ಚರಂಡಿ ವ್ಯವಸ್ಥೆ ಅಭಿವೃದ್ಧಿಯ ಕುರಿತು ಉಲ್ಲೇಖೀಸಲಾಗಿದೆ. ನಿಗಮದ ಪ್ರಸ್ತಾವನೆ ಅನುಷ್ಠಾನಕ್ಕೆ ಪಾಲಿಕೆ ಸಮ್ಮತಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದೆ.

ರೈಲ್ವೆ ಇಲಾಖೆಯ 136 ಎಕರೆ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಿದ್ದು, ಅತ್ಯಾಧುನಿಕ ನಿಲ್ದಾಣದ ಜತೆಗೆ, ವಸತಿ ಸಮುತ್ಛಯ, ಆಸ್ಪತ್ರೆ, ಶಾಪಿಂಗ್‌ ಮಾಲ್‌ ನಿರ್ಮಿಸುವ ಉದ್ದೇಶವಿದೆ.
-ವಿ.ಶ್ರೀಧರ್‌, ಭಾರತೀಯ ರೈಲು ನಿಲ್ದಾಣ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ

ರೈಲ್ವೆ ಇಲಾಖೆಯಿಂದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಸ್ತಾವನೆ ಪರಿಶೀಲಿಸಿದ್ದು, ರೈಲು ನಿಲ್ದಾಣದ ಸುತ್ತಲ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.