Advertisement

ಬೈಲಹೊಂಗಲ: ದೃಷ್ಟಿ ವಿಶೇಷ ಚೇತನರಿಗೆ ಹೊಸ ತಂತ್ರಾಂಶ

04:54 PM Jul 29, 2024 | Team Udayavani |

ಉದಯವಾಣಿ ಸಮಾಚಾರ
ಬೈಲಹೊಂಗಲ: ದೃಷ್ಟಿ ದೋಷ ಇರುವವರಿಗೆ ಕಂಪ್ಯೂಟರ್‌ ಬಳಕೆ ಸರಾಗಗೊಳಿಸಲು ಭಾರತೀಯ ಮೂಲದ ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿಯೊಬ್ಬರು ಅಭಿವೃದ್ಧಿಪಡಿಸಿದ ತಂತ್ರಾಂಶಕ್ಕೆ ಕನ್ನಡ ಭಾಷೆ ಅಳವಡಿಸುವ ಕಾರ್ಯದಲ್ಲಿ ಪಟ್ಟಣದ ತಾಪಂ ಉದ್ಯೋಗಿ, ದೃಷ್ಟಿ ವಿಶೇಷಚೇತನ ಸಿದ್ಧಲಿಂಗೇಶ್ವರ ಇಂಗಳಗಿ ಅಪಾರ ನೆರವು ನೀಡಿದ್ದಾರೆ.

Advertisement

ಅಮೆರಿಕದಲ್ಲಿ ವಾಸವಿರುವ ಸುರೇಶ್‌(65) ಎಂಬುವರು ದೃಷ್ಟಿ ವಿಶೇಷಚೇತನರ ಅನುಕೂಲಕ್ಕಾಗಿ ಹಲವು ಕಾರ್ಯ ಕೈಗೊಂಡಿದ್ದಾರೆ. ದೃಷ್ಟಿ ವಿಶೇಷ ಚೇತನರಿಗೆ ಕಂಪ್ಯೂಟರ್‌ ಬಳಕೆ ಸರಳಗೊಳಿಸುವ ಸಲುವಾಗಿ ಸುರೇಶ್‌ ಅವರು ಹಿಯರ್‌ ಟು ರೀಡ್‌ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ತಂತ್ರಾಂಶದಲ್ಲಿ ಕನ್ನಡ ಭಾಷೆಯ ಸಮರ್ಪಕ ಅಳವಡಿಕೆಗೆ ದೃಷ್ಟಿವಿಶೇಷ ಚೇತನ ಸಿದ್ಧಲಿಂಗೇಶ್ವರ ಇಂಗಳಗಿ ಅವರು ಸುರೇಶ ಅವರಿಗೆ ನೆರವಾಗಿದ್ದಾರೆ.

ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಸುವಾಗ ಉಂಟಾಗುವ ಸಮಸ್ಯೆಗಳ ಪರಿಹಾರ ಕುರಿತು ಸುರೇಶ್‌ ಅವರು ಸಿದ್ಧಲಿಂಗೇಶ್ವರ ಅವರ ನೆರವು ಪಡೆದಿದ್ದು ಇದೀಗ ಹಿಯರ್‌ ಟು ರೀಡ್‌ ತಂತ್ರಾಂಶ ಕನ್ನಡ ಭಾಷೆಯಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಹಿಯರ್‌ 2 ರೀಡ್‌ ತಂತ್ರಾಂಶಕ್ಕೆ ಯಾವುದೇ ಶುಲ್ಕ ಇಲ್ಲ. ತಂತ್ರಾಂಶವನ್ನು ಅವರ ಜಾಲತಾಣ https://hear2read.orgಕ್ಕೆ ಹೋಗಿ ಮೊದಲು nvda screenreader ತಂತ್ರಾಂಶವನ್ನು nvaccess.org ಜಾಲತಾಣದಿಂದ download ಮಾಡಿ ಇನ್ಸ್ಟಾಲ್‌ ಮಾಡಬೇಕು. ಈ ಬಗ್ಗೆ ಸಿದ್ಧಲಿಂಗೇಶ್ವರ ಮೊ. 8792639989 ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ತಂತ್ರಾಂಶ ಮಾಡುವುದೇನು?: ಈ ತಂತ್ರಾಂಶ ಕಂಪ್ಯೂಟರ್‌ ಪರದೆ ಮೇಲೆ ಮೂಡುವ ಅಕ್ಷರ, ಶಬ್ದಗಳನ್ನು ಓದಿ ಹೇಳುತ್ತದೆ. ಇದರಿಂದ ದೃಷ್ಟಿ ವಿಶೇಷ ಚೇತನರಿಗೆ ಕಂಪ್ಯೂಟರ್‌ನಲ್ಲಿ ಯಾವುದೇ ದೋಷವಿಲ್ಲದೆ ಟೈಪ್‌ ಮಾಡಲು ಅನುಕೂಲ ಮಾಡಿಕೊಡುತ್ತದೆ. ಕನ್ನಡ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಈ ತಂತ್ರಾಂಶ ಮೂಲಕ ಕಾರ್ಯ ನಿರ್ವಹಿಸ ಬಹುದಾಗಿದೆ. ಕನ್ನಡ ಭಾಷೆ ಅಳವಡಿಕೆಗೆ ಬೇಕಾದ ಅಗತ್ಯ ಸಹಕಾರವನ್ನು ಸಿದ್ಧಲಿಂಗೇಶ್ವರ ನೀಡಿದ್ದಾರೆ.

ಸಾಧನೆ ಮಾಡಬೇಕಾದರೆ ಯಾವುದೂ ಕೂಡ ಕಠಿಣವಲ್ಲ. ಸತತ ಪರಿಶ್ರಮದಿಂದ ಹಿಯರ್‌ ಟು ರೀಡ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ದೃಷ್ಟಿ ವಿಶೇಷಚೇತನವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇದು ತುಂಬಾ ಅನುಕೂಲವಾಗಿದೆ. ಇದರಿಂದ ವೆಬ್‌ ಜಾಲತಾಣದಲ್ಲಿ ಬರುವ ಪಠ್ಯಪುಸ್ತಕಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಲು ಮತ್ತು ಓದಲು ನೆರವಾಗುತ್ತದೆ.
●ಸಿದ್ಧಲಿಂಗೇಶ್ವರ ಇಂಗಳಗಿ,
ದೃಷ್ಟಿ ವಿಶೇಷಚೇತನರು, ತಾಪಂ ಉದ್ಯೋಗಿ, ಬೈಲಹೊಂಗಲ.

Advertisement

*ಎಂ.ಆರ್.ಬಡೇಘರ

Advertisement

Udayavani is now on Telegram. Click here to join our channel and stay updated with the latest news.

Next