Advertisement

Eye Donation Campaign: ನೇತ್ರದಾನ ಅಭಿಯಾನಕ್ಕೆ ಬೆಂಬಲಿಗರಾಗೋಣ

03:32 PM Sep 15, 2024 | Team Udayavani |

ಜಗತ್ತನ್ನೇ ನೋಡುವ ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಮನುಷ್ಯನು ಮೃತಪಟ್ಟ ಅನಂತರ ಕಣ್ಣುಗಳು ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕಾಗಿದೆ. ಕಣ್ಣು ದೇವರು ನೀಡಿದ ಅದ್ಭುತವಾದ ಕೊಡುಗೆ. ಈ ಸುಂದರವಾದ ಪ್ರಪಂಚದ ಸೌಂದರ್ಯವನ್ನು ಕಣ್ಣುಗಳಿಂದ ಸವಿಯಬಹುದು. ಅನೇಕ ಜನರಿಗೆ ಹಲವಾರು ರೀತಿಯ ದೃಷ್ಟಿ ದೋಷಗಳಿಂದಾಗಿ ಈ  ಸೊಬಗನ್ನು ಆನಂದಿಸಲಾಗದೆ ಕತ್ತಲೆಯಲ್ಲಿಯೇ ಜೀವನವನ್ನು ಕಳೆಯುತ್ತಿರುತ್ತಾರೆ. ಅಂತವರಿಗೆ ನೇತ್ರದಾನವನ್ನು ಮಾಡಿದರೆ ಜೀವನವನ್ನೇ ದಾನ ಮಾಡಿದಂತಾಗುತ್ತದೆ.

Advertisement

ಕುರುಡುತನವು ಕಾರ್ನಿಯಾಲ್‌ ದುರ್ಬಲತೆಯಿಂದಾಗಿ, ಕಣ್ಣಿನ ಪೊರೆ ಮತ್ತು ಗ್ಲುಕೋಮದಿಂದಾಗಿ ಉಂಟಾಗುತ್ತದೆ. ಈ ದುರ್ಬಲತೆಯನ್ನು ನೇತ್ರದಾನ ಮಾಡುವುದರ ಮೂಲಕ ಗುಣಪಡಿಸಬಹುದು. ಮರಣದ ಅನಂತರ ಇತರ ಅಂಗಾಂಗಗಳನ್ನು ದಾನ ಮಾಡಿದ ಹಾಗೆಯೇ ಕಣ್ಣಿನ ಕಾನೀìಯಾ  ಸಹ ದಾನ ಮಾಡುವ ಮೂಲಕ ಅಂದರ ಜೀವನಕ್ಕೆ ಬೆಳಕನ್ನು ಚೆಲ್ಲಬಹುದು.  ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಆಗಸ್ಟ್‌ 25 ರಿಂದ ಸೆಪ್ಟೆಂಬರ್‌ 8  ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು  ಆಚರಿಸಲಾಗುತ್ತದೆ.

ಕಾರ್ನಿಯಲ್‌ ಕುರುಡುತನದಿಂದ ಬಳಲುತ್ತಿರುವವರಿಗೆ ದೃಷ್ಟಿಯನ್ನು ನೀಡಲು ನೇತ್ರದಾನ ಮಾಡಿದವರ ಕಣ್ಣುಗಳನ್ನು ಬಳಸಲಾಗುತ್ತದೆ. ಕಾರ್ನಿಯಾವು ಕಣ್ಣಿನ ಮುಂಭಾಗದಲ್ಲಿರುತ್ತದೆ. ಇದು ದುರ್ಬಲ ಗೊಂಡಿದ್ದರೆ ದೃಷ್ಟಿ ಕಡಿಮೆಯಾಗುತ್ತದೆ ಅಥವಾ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕಾರ್ನಿಯಾದ ತೊಂದರೆಯಿಂದಾಗಿ ಕುರುಡುತನ ಸಂಭವಿಸಿದರೆ ಇದಕ್ಕೆ ಕಾರ್ನಿಯವನ್ನೇ ಬದಲಾಯಿಸುವುದನ್ನು ಬಿಟ್ಟು ಬೇರೆ ಯಾವುದೇ ಚಿಕಿತ್ಸೆಯಾಗಲಿ, ಪರಿಹಾರವಾಗಲಿ ಇಲ್ಲ. ನೇತ್ರದಾನ ಮಹಾದಾನ. ಮರಣದ ಅನಂತರ ಎಲ್ಲರೂ ನೇತ್ರದಾನ ಮಾಡುವ ಸಂಕಲ್ಪ ತೊಟ್ಟರೆ ಅಂಧತ್ವ  ನಿವಾರಣೆಗೆ ಕೈಜೋಡಿಸಿದಂತಾಗುತ್ತದೆ.

ವರನಟ ಡಾ| ರಾಜಕುಮಾರ್‌ ಅವರು ತಮ್ಮ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನವನ್ನು ಮಾಡುವ ಮೂಲಕ ನೇತ್ರದಾನದ ಅರಿವನ್ನು ಮೂಡಿಸಿದ್ದರು. ಅವರ ಹೆಸರಿನಲ್ಲಿಯೇ ನೇತ್ರ ಬ್ಯಾಂಕನ್ನು ಆರಂಭಿಸಲಾಗಿದೆ. ಅಕಾಲಿಕ ಮರಣಕ್ಕೆ ತುತ್ತಾದ  ಪುನೀತ್‌ ರಾಜಕುಮಾರ್‌ ಕೂಡ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ನಂತರ ನೇತ್ರದಾನವು ಚಳುವಳಿ ರೂಪವನ್ನು ಪಡೆದಿದೆ.

ನೇತ್ರದಾನ ಮಾಡಲು ಕೂಡ ಕೆಲವು ಅಗತ್ಯ ಕ್ರಮ ಅನುಸರಿಸಲಾಗುವುದು. ನೇತ್ರದಾನದ ವಾಗ್ಧಾನ ಮಾಡಿದವರು ಮೃತಪಟ್ಟ ಆರು ತಾಸಿನೊಳಗೆ ಕಾರ್ನಿಯವನ್ನು ಅವರ ದೇಹದಿಂದ ತೆಗೆಯಬೇಕು.

  • ನೇತ್ರದಾನ ಮಾಡಲು ಯಾವುದೇ ವಯಸ್ಸಿನ, ಲಿಂಗದ, ಧರ್ಮದ, ರಕ್ತದ ಗುಂಪುಗಳ ನಿರ್ಬಂಧ ವಿಲ್ಲ ಮರಣ ಅನಂತರ ಯಾರು ಬೇಕಾದರೂ ನೇತ್ರದಾನವನ್ನು ಮಾಡಬಹುದು.
  • ಕಣ್ಣಿನ ಪೊರೆ ಸಣ್ಣ ದೃಷ್ಟಿ ದೋಷ ಆಪರೇಟೆಡ್‌ ಕಣ್ಣುಗಳು ಅಥವಾ ಸಾಮಾನ್ಯ ಕಾಯಿಲೆ ಇರುವ ಯಾವ ವ್ಯಕ್ತಿಯಾದರೂ ನೇತ್ರದಾನ ಮಾಡಬಹುದು
  • ಒಬ್ಬ ವ್ಯಕ್ತಿ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರಿಗೆ ದೃಷ್ಟಿ ನೀಡಿದಂತಾಗುತ್ತದೆ. ನೇತ್ರದಾನ ಮಾಡಿದ ನಂತರ ದಾನಿಯ ಮುಖದಲ್ಲಿ ಯಾವುದೇ ಗಾಯವಾಗಲಿ ಮುಖ ವಿಕಾರವಾಗುವುದಾಗಲಿ ಆಗುವುದಿಲ್ಲ ಮೃತ ವ್ಯಕ್ತಿಯಿಂದ ಕಣ್ಣನ್ನು ತೆಗೆಯುವ ಪ್ರಕ್ರಿಯೆಗೆ 15 ರಿಂದ 20 ನಿಮಿಷ ಸಾಕಾಗುತ್ತದೆ
  • ನೇತ್ರದಾನೀಯ ಹಾಗೂ ಸ್ವೀಕರಿಸುವವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ. ನೇತ್ರದಾನ ಮಾಡುವುದಕ್ಕಾಗಿ ಸ ರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳಲ್ಲಿ ಉಚಿತವಾಗಿ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ.
  • ನೇತ್ರದಾನ ಮಾಡಲು ಇಚ್ಚಿಸುವ ವ್ಯಕ್ತಿಗಳು ನೇತ್ರ ಬ್ಯಾಂಕ್‌ ನಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು. ಆ ವ್ಯಕ್ತಿಯು ಮರಣಕ್ಕೀಡಾದ ನಂತರ ವಿಷಯವನ್ನು ಕಣ್ಣಿನ ಬ್ಯಾಂಕಿಗೆ ತಿಳಿಸಬೇಕು. ಅವರ ತಂಡವು ಬಂದು ಕಾರ್ನಿಯಾವನ್ನು ಸಂಗ್ರಹಿಸಿಕೊಳ್ಳುತ್ತದೆ. ರಕ್ತದೊತ್ತಡ ಮಧುಮೇಹದಂತಹ ದೀರ್ಘ‌ಕಾಲದ ಕಾಯಿಲೆ ಇದ್ದು ಮೃತಪಟ್ಟವರು ಕೂಡ ತಮ್ಮ ನೇತ್ರಗಳನ್ನು ದಾನ ಮಾಡಬಹುದು.
Advertisement

ನೇತ್ರದಾನದ ವಾಗ್ಧಾನ ಮಾಡಿದವರೆಲ್ಲರ ನೇತ್ರಗಳನ್ನು ಇನ್ನೊಬ್ಬರಿಗೆ ಜೋಡಿಸಲು ಕೆಲವೊಂದು ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. 85ವರ್ಷ ಮೇಲ್ಪಟ್ಟವರ ಹಾಗೂ ಹೆಪಟೈಟಿಸ್‌, ವೈರಲ್‌ ಸಮಸ್ಯೆಗಳಿಂದ ಮೃತಪಟ್ಟವರ ನೇತ್ರಗಳನ್ನು ಜೋಡಣೆ ಮಾಡಲು ಆಗುವುದಿಲ್ಲ. ದೀಪದಿಂದ ದೀಪ ಬೆಳಗು ಎನ್ನುವಂತೆ ಒಂದು ಕಣ್ಣಿನ ಜ್ಯೋತಿ ಇನ್ನೊಂದು ದೃಷ್ಟಿ ಬೆಳಗಲಿ ಕಣ್ಣಿನ ಅಂಧತ್ವದೊಡನೆ ನೇತ್ರದಾನದ ಕುರಿತಾದ ಪೂರ್ವಾಗ್ರಹಗಳು ಅಳಿಯಲಿ , ತನ್ಮೂಲಕ ಬಾಳು ಬೆಳಕಾಗಲಿ.

– ಚೇತನ ಭಾರ್ಗವ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next