Advertisement

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

04:17 PM Sep 13, 2024 | Team Udayavani |

ಉದಯವಾಣಿ ಸಮಾಚಾರ
ಕೊಂಡ್ಲಹಳ್ಳಿ: ಮಳೆ ಬಂದರೆ ಸಾಕು ಈ ಶಾಲೆಯ ಕೊಠಡಿಗಳೆಲ್ಲಾ ಸೋರುತ್ತವೆ, ಮೇಲ್ಛಾವಣಿಯ ಹೆಂಚುಗಳು ಪುಡಿ
ಪುಡಿಯಾಗಿ ಕೆಳಗೆ ಬೀಳುತ್ತಿರುತ್ತವೆ. ಮಳೆಗಾಲ ಬಂದರೆ ಸಾಕು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಆತಂಕ. ಇದು ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿ. 1995ರಲ್ಲಿ
ಆರಂಭಗೊಂಡಿರುವ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯ 52 ವಿದ್ಯಾರ್ಥಿಗಳಿದ್ದಾರೆ.

Advertisement

ಮೂರು ಕೊಠಡಿಗಳಲ್ಲಿ ಶಾಲಾರಂಭದ ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಎರಡು ಹೆಂಚಿನ ಕೊಠಡಿಗಳ ಮೇಲ್ಛಾವಣಿಯ
ಹೆಂಚುಗಳು ಶಿಥಿಲಗೊಂಡು ಪುಡಿಯಾಗಿ ಕೆಳಗೆ ಬೀಳುತ್ತಿರುತ್ತವೆ. ಹೆಂಚಿನ ಮೇಲ್ಛಾವಣಿಯ  ಮೇಲೆ ಸಿಮೆಂಟ್‌ ಪ್ಲಾಸ್ಟರಿಂಗ್‌
ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಮೇಲ್ಛಾವಣಿಯಿಂದ ಬಿರುಕು ಬಿಟ್ಟಿರುವ ಗೋಡೆಗಳ ಮೂಲಕ ನೀರು ಒಳಬಂದು ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.

2011-12ರಲ್ಲಿ ಎಸ್‌ಎಸ್‌ಎ ಅಡಿಯಲ್ಲಿ ನಿರ್ಮಿಸಿರುವ ಆರ್‌ಸಿಸಿ ಕೊಠಡಿಯ ಮೇಲ್ಛಾವಣಿಯ ಸಿಮೆಂಟಿನ ತುಂಡುಗಳು ಕೆಳಗೆ ಉದುರುತ್ತಿದ್ದು, ಕಬ್ಬಿಣದ ಸಲಾಕೆಗಳು ಹೊರ ಬಂದಿವೆ. ಈ ಕೊಠಡಿ ಕೂಡ ಶಿಥಿಲಗೊಂಡು ಆರ್‌ಸಿಸಿ ಉದುರುತ್ತಿದ್ದು, ಸಣ್ಣ ಮಳೆ ಬಂದರೂ ಸೋರುತ್ತಿದೆ. ಇದರಿಂದ ಮಳೆ ಬಂದರೆ ಈ ಶಾಲೆಯ ದಾಖಲಾತಿ ವಹಿಗಳು, ಇತರ ಅಗತ್ಯ ವಸ್ತುಗಳ
ಸಂಗ್ರಹಣೆಗೂ ತೊಂದರೆಯಾಗುತ್ತಿದೆ.

ಸ್ವಲ್ಪ ಮಳೆ ಬಂದರೂ ಮಳೆ ನೀರು ಮೇಲ್ಛಾವಣಿಗೆ ಸೇರಿ ಫ್ಯಾನ್‌ ಶಾರ್ಟ್‌ ಆಗಿ ಸುಟ್ಟು ಹೋಗುತ್ತಿದೆ. ಮಳೆಯಿಂದ ಇಡೀ ಕೊಠಡಿಗಳು ನೀರು ತುಂಬಿಕೊಂಡು ಮಕ್ಕಳು ಕುಳಿತುಕೊಳ್ಳಲು ಕೂಡ ಆಗದಷ್ಟು ತೊಂದರೆಯಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಚಂದ್ರಾ ನಾಯ್ಕ. ಮಳೆ ಬಂದರೆ ಶಾಲಾ ಕೊಠಡಿಗಳು ಸೋರುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕುಂಬಾರಹಟ್ಟಿ ಶಾಲೆ ದುರಸ್ತಿಗೆ ಕೂಡಲೇ ಮುಂದಾಗಬೇಕಿದೆ.

ಕಳೆದ 3-4 ವರ್ಷಗಳಿಂದಲೂ ಈ ಸಮಸ್ಯೆ ಇದೆ. ಕೊಠಡಿಗಳ ರಿಪೇರಿ ಮಾಡಿಸಿಕೊಡಲು ಬಿಇಒ ಅವರಿಗೆ ಹಾಗೂ ಕ್ಲಸ್ಟರ್‌ ಸಿಆರ್‌ಪಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ಅನುಕೂಲ ಆಗುತ್ತಿಲ್ಲ. ಕೊಠಡಿಗಳ ರಿಪೇರಿಗೆ ಅನುಕೂಲ ಮಾಡಿಕೊಡುವರೇನೋ ನಾವು ಚಾತಕಪಕ್ಷಿಯಂತೆ ಕಾಯುತ್ತಿದ್ದೇವೆ. ಯಾಕೆ ಈ ಉದಾಸೀನ ಎಂಬುದೇ ತಿಳಿಯುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಸಿಕೊಡಬೇಕು.
*ನಾಗರಾಜ್‌, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು

Advertisement

ಮೊಳಕಾಲ್ಮೂರು ತಾಲೂಕಿನ 10 ಪ್ರಾಥಮಿಕ ಶಾಲೆಗಳ 20 ಕೊಠಡಿಗಳ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಇಲಾಖೆಗೆ
ಕಳುಹಿಸಲಾಗಿದೆ. ಇದರಲ್ಲಿ ಕುಂಬಾರಹಟ್ಟಿಯ ಎರಡು ಶಾಲಾ ಕೊಠಡಿಗಳ ದುರಸ್ತಿಯೂ ಸೇರಿದೆ. ಇಲಾಖೆಯಿಂದ ಮಂಜೂರಾತಿ ದೊರೆತ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
*ಇ. ನಿರ್ಮಲಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ

*ಕೊಂಡ್ಲಹಳ್ಳಿ ರಾಮಚಂದ್ರಪ್ಪ

Advertisement

Udayavani is now on Telegram. Click here to join our channel and stay updated with the latest news.

Next