Advertisement

Medicine ಜನೌಷಧ ಕೇಂದ್ರದಲ್ಲಿ ಸಿಗುತ್ತಿಲ್ಲ ಅಗತ್ಯ ಔಷಧ!

12:59 AM Sep 12, 2024 | Team Udayavani |

ಉಡುಪಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕೈಗೆಟುಕುವ ದರದಲ್ಲಿ ಜನ ಸಾಮಾನ್ಯರಿಗೆ ಔಷಧ ಸಿಗಬೇಕು ಎಂಬ ಪರಿ ಕಲ್ಪನೆಯಲ್ಲಿ ಆರಂಭಗೊಂಡಿರುವ ಜನೌಷಧ ಕೇಂದ್ರಗಳಿಗೆ ಪ್ರಸ್ತುತ ತುರ್ತು ಔಷಧಗಳೇ ಸರಿಯಾಗಿ ಪೂರೈಕೆ ಆಗುತ್ತಿಲ್ಲ.

Advertisement

ಜನೌಷಧ ಕೇಂದ್ರ ಗಳಲ್ಲಿ ವಿವಿಧ ಮಾತ್ರೆ, ಔಷಧ ಹಾಗೂ ಶಸ್ತ್ರ ಚಿಕಿತ್ಸೆಯ ಸಾಮಗ್ರಿಗಳ ಸಹಿತ ಸುಮಾರು 2 ಸಾವಿರ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರಕಾರ ಅನುಮತಿ ಕಲ್ಪಿಸಿದೆ.

ಜನೌಷಧ ಕೇಂದ್ರಗಳಲ್ಲಿ ಲಭ್ಯವಿರುವ ಎಲ್ಲ ಮಾತ್ರೆಗಳು ಮತ್ತು ಔಷಧಗಳು ಇತರ ಔಷಧಾಲಯಗಳಲ್ಲಿ ಸಿಗುವ ಅದೇ ಮಾದರಿಯ ಔಷಧಕ್ಕಿಂತ ಶೇ. 50ರಿಂದ ಶೇ. 80ರಷ್ಟು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸಿಗುತ್ತಿವೆ.

ಆದರೆ ಇತ್ತೀಚೆಗಿನ ದಿನಗಳಲ್ಲಿ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಜನೌಷಧ ಕೇಂದ್ರಗಳ ಮೇಲೆ ಜನರಲ್ಲಿ ನಂಬಿಕೆ ಕ್ಷಿಣಿಸಲಾರಂಭಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ 1,280 ಜನೌಷಧ ಕೇಂದ್ರಗಳಿವೆ. ಈ ಪೈಕಿ ಉಡುಪಿಯಲ್ಲಿ 64 ಹಾಗೂ ದಕ್ಷಿಣ ಕನ್ನಡದಲ್ಲಿ 102 ಇವೆ. ಆದರೆ ಇಡೀ ರಾಜ್ಯಕ್ಕೆ ಇರುವುದು ಕೇವಲ ಮೂವರು ಔಷಧ ವಿತರಕರು. ಹೀಗಾಗಿ ಉಡುಪಿ, ದ.ಕ. ಜಿಲ್ಲೆಗಳಿಗೆ ಜನರಿಗೆ ಅಗತ್ಯವಿರುವ ಔಷಧಗಳು ಕ್ಲಪ್ತ ಸಮಯದಲ್ಲಿ ಪೂರೈಕೆಯಾಗುತ್ತಿಲ್ಲ. ಉಡುಪಿ, ದ.ಕ., ಉ.ಕ. ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಿತರಕರನ್ನು ನಿಯೋಜಿಸುವಂತೆ ಈಗಾಗಲೇ ಜನೌಷಧ ಕೇಂದ್ರಗಳ ಮಾಲಕರ ಸಂಘದ ಮೂಲಕ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.

Advertisement

ಇದ್ದ ಏಕೈಕ ಉಗ್ರಾಣವೂ ಮುಚ್ಚಿದೆ
ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆ ಮಾಡಲು ಬೆಂಗಳೂರಿನಲ್ಲಿ ಒಂದು ಉಗ್ರಾಣ ತೆರೆಯಲಾಗಿತ್ತು. ಅಲ್ಲಿಂದ ಪೂರೈಕೆಯಾಗುತ್ತಿದ್ದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಔಷಧಗಳು ಬರುತ್ತಿದ್ದವು. ಈಗ ಈ ಉಗ್ರಾಣವನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಔಷದಗಳು ಹೊರ ರಾಜ್ಯಗಳಿಂದ ಪೂರೈಕೆ ಆಗಬೇಕಿದೆ. ಇದರಿಂದ ವೆಚ್ಚವೂ ಹೆಚ್ಚಾಗುತ್ತಿದೆ, ಪೂರೈಕೆಯೂ ವಿಳಂಬವಾಗುತ್ತಿದೆ. ಕೆಲವೊಮ್ಮೆ ಅಗತ್ಯವಿರುವ ಕೆಲವು ಉತ್ಪನ್ನಗಳು ಎಷ್ಟು ದಿನ ಕಳೆದರೂ ಬರುವುದೇ ಇಲ್ಲ. ಒಂದು ಸಲ ಬಂದ ಔಷಧ ಇನ್ನೊಂದು ಸಲ ಬರುವುದಿಲ್ಲ. ಹೀಗಾಗಿ ನಿರಂತರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಒಂದು ಸುಸಜ್ಜಿತ ಉಗ್ರಾಣ ಆಗಬೇಕು ಎಂಬುದು ಜನೌಷಧ ಕೇಂದ್ರದ ಮಾಲಕರು ಆಗ್ರಹವಾಗಿದೆ.

ಅರಿವು ಅಗತ್ಯ
ಜನೌಷಧ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧಗಳು ಲಭ್ಯವಾಗುತ್ತಿವೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು. ವಿಶೇಷವಾಗಿ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮೊದಲಾದ ಕಡೆಗಳಿಗೆ ಅಗತ್ಯವಿರುವ ಸರ್ಜಿಕಲ್‌ ಐಟಂಗಳನ್ನು ಜನೌಷಧ ಕೇಂದ್ರಗಳ ಮೂಲಕ ಖರೀದಿಸುವಂತೆ ಅರಿವು ಮೂಡಿಸುವ ಅಗತ್ಯವಿದೆ ಎಂದ ಜನೌಷಧ ಕೇಂದ್ರದ ಮಾಲಕರ ಸಂಘದ ಪ್ರತಿನಿಧಿ ಸುಂದರ್‌ ಪೂಜಾರಿ ತಿಳಿಸಿದ್ದಾರೆ.

ಯಾವ ಔಷಧಗಳಿಗೆ ಬೇಡಿಕೆ ಹೆಚ್ಚು?
ಮಧುಮೇಹ (ಶುಗರ್‌), ಅಧಿಕ ರಕ್ತದೊತ್ತಡ (ಬಿಪಿ) ಮನೋರೋಗ, ಮೈಕೈ ನೋವು ಹಾಗೂ ಜ್ವರ, ಶೀತ, ಕೆಮ್ಮು ಸಹಿತ ದಿಢೀರ್‌ ಅನಾರೋಗ್ಯಗಳಿಗೆ ಸಂಬಂಧಿಸಿದ ಔಷಧಗಳು.

ಜನೌಷಧ ಕೇಂದ್ರಗಳಿಗೆ
ತುರ್ತು ಅಗತ್ಯದ ಔಷಧಗಳು ಲಭ್ಯವಾಗದೆ ಇರುವುದರ ಸಹಿತ ಜನೌಷಧ ಕೇಂದ್ರಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಜನೌಷಧ ಕೇಂದ್ರಗಳ ಮಾಲಕರ ಸಂಘದಿಂದ ಮನವಿ ಸಲ್ಲಿಸಿದ್ದಾರೆ. ಅದರಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಸಮಸ್ಯೆಯ ತೀವ್ರತೆಯನ್ನು ತಿಳಿಸಲಾಗುವುದು. ಹಾಗೆಯೇ ಅವರನ್ನು ಖುದ್ದು ಭೇಟಿ ಮಾಡಿ ಜನೌಷಧ ಕೇಂದ್ರಗಳ ಬಲವರ್ಧನೆಗೆ ಅಗತ್ಯವಾದ ಎಲ್ಲ ಕ್ರಮ ತೆಗೆದುಕೊಳ್ಳಲು ಕೋರಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next