Advertisement

ಚುನಾವಣೆ ಕಾರ್ಯ ಚುರುಕಿಗೆ ಬಹುಗುಣ ಸಲಹೆ

05:06 PM Apr 29, 2018 | Team Udayavani |

ಧಾರವಾಡ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರುವ ವಿವಿಧ ತಂಡಗಳು ಚುರುಕು ಕಾರ್ಯಾಚರಣೆಗೆ ಒತ್ತು ನೀಡಬೇಕು ಎಂದು ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್‌ ಅಧಿಕಾರಿ ರಾಜೇಶ ಬಹುಗುಣ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಗೆ ಆಗಮಿಸಿರುವ ಸಾಮಾನ್ಯ, ಪೊಲೀಸ್‌ ಹಾಗೂ ವೆಚ್ಚ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ವಿಡಿಯೋ ಕಣ್ಗಾವಲು ತಂಡ ಪ್ರತಿನಿತ್ಯ ನೀಡುವ ಎಲ್ಲ ಅಭ್ಯರ್ಥಿಗಳ ಚಿತ್ರೀಕರಣಗಳನ್ನು ವಿವಿಟಿ ತಂಡವು ಸೂಕ್ಷ್ಮವಾಗಿ ವೀಕ್ಷಿಸಿ ಸಕಾಲಕ್ಕೆ ವರದಿಗಳನ್ನು ಸಲ್ಲಿಸಬೇಕು. ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆ ಬಗೆಗೆ ಎಚ್ಚರ ವಹಿಸಬೇಕು. ವೆಬ್‌ ಕಾಸ್ಟಿಂಗ್‌ ಮಾಡಲು ಸಾಧ್ಯವಿಲ್ಲದ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಬೇಕು. ಮತಗಟ್ಟೆ ಸಿಬ್ಬಂದಿ ಹಾಗೂ ಮತದಾರರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಮತಗಟ್ಟೆಗಳಾಗಿರುವ ಶಾಲೆಗಳು ಮತ್ತು ವರ್ಗಕೋಣೆಗಳಲ್ಲಿ ಹಾಕಲಾಗಿರುವ ಫೋಟೋಗಳು ಮತ್ತು ಇತರೆ ಲಾಂಛನಗಳು, ಚಿತ್ರಗಳನ್ನು ತೆಗೆದು ಹಾಕಬೇಕು ಎಂದು ಸೂಚಿಸಿದರು.

ವೀಕ್ಷಕ ಭಾನುಪ್ರಕಾಶ ಏಟೂರು ಮಾತನಾಡಿ, ಮತದಾರರ ಗುರುತಿನ ಚೀಟಿಗಳ ವಿತರಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಮತದಾರರ ಮನೆ ಬಾಗಿಲಿಗೆ ಮತದಾರರ ಭಾವಚಿತ್ರವುಳ್ಳ ಚೀಟಿ ಹಾಗೂ ಮತದಾರರ ಮಾರ್ಗದರ್ಶಿ ಪುಸ್ತಕ ವಿತರಿಸಬೇಕು. ಮತಗಟ್ಟೆಗೆ ನೇಮಕಗೊಂಡಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಂಚಿತವಾಗಿ ಸೂಕ್ತ ತರಬೇತಿ ಮತ್ತು ಪರಸ್ಪರ ಪರಿಚಯ ಮಾಡಿಕೊಟ್ಟಿರಬೇಕು ಎಂದರು.

ಪೊಲೀಸ್‌ ವೀಕ್ಷಕರಾದ ಸಚಿನ್‌ ಪಾಟೀಲ ಮಾತನಾಡಿ, ಹಿಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಗಳನ್ನು ಗುರುತಿಸಿ, ಅಲ್ಲಿಗೆ ಭೇಟಿ ನೀಡಿ ಸದ್ಯದ ಪರಿಸ್ಥಿತಿ ಅರಿತುಕೊಳ್ಳಬೇಕು. ಸ್ಥಳೀಯ ಜನರ ಭಾವನೆಗಳಿಗೆ ಸ್ಪಂದಿಸಬೇಕು. ಅಭ್ಯರ್ಥಿಗಳು ಅನುಮತಿ ಪಡೆದುದಕ್ಕಿಂತಲೂ ಹೆಚ್ಚು ವಾಹನಗಳನ್ನು ಬಳಸುತ್ತಿರುವುದು ಕಂಡುಬಂದರೆ ಕೂಡಲೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯ ಜನಸಂಖ್ಯೆ ಮತ್ತು ಮತದಾರರ ಅನುಪಾತ, ಮತಗಟ್ಟೆಗಳ ಸಂಖ್ಯೆ, ಅಧಿ ಕಾರಿಗಳಿಗೆ ನೀಡಿರುವ ತರಬೇತಿ, ಮಾದರಿ ನೀತಿ ಸಂಹಿತೆ ಪಾಲನೆಗೆ ರಚಿಸಲಾಗಿರುವ ವಿವಿಧ ತಂಡಗಳ ವಿವರವಾದ ಮಾಹಿತಿ ಒದಗಿಸಿದರು.

Advertisement

ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಹಾಗೂ ಎಸ್ಪಿ ಜಿ. ಸಂಗೀತಾ ಅವರು ಭದ್ರತಾ ಏರ್ಪಾಡುಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಸ್ವೀಪ್  ಸಮಿತಿ ಅಧ್ಯಕ್ಷೆಯಾದ ಜಿಪಂ ಸಿಇಒ ಸೇ°ಹಲ್‌ ಆರ್‌. ಅವರು ಮತದಾರರ ಜಾಗೃತಿಗಾಗಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು.

ಸಾಮಾನ್ಯ ವೀಕ್ಷಕರಾದ ಡಾ| ಸಂಜಯ್‌ ಸಿನ್ಹಾ, ರೂಪಕ್‌ ಕೆ.ಆರ್‌. ಮಜುಂದಾರ್‌, ಪ್ರಕಾಶ ಚಂದ್‌ ಪವನ್‌, ಸಂಜಯ್‌ ಗುಪ್ತಾ, ಖರ್ಚು ವೆಚ್ಚಗಳ ವೀಕ್ಷಕರಾದ ಆನಂದಕುಮಾರ್‌, ಪಿ.ಆರ್‌. ಉನ್ನಿಕೃಷ್ಣನ್‌, ಆರ್‌.ಆರ್‌.ಎನ್‌. ಶುಕ್ಲಾ, ಜ್ಯೋತೀಸ್‌ ಕೆ.ಎ. ಮತ್ತಿತರ ಹಿರಿಯ ಅಧಿಕಾರಿಗಳು ಚುನಾವಣೆ ಸಿದ್ಧತೆಗೆ ಹಲವು ಸಲಹೆಗಳನ್ನು ನೀಡಿದರು. ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಮಹೇಶಕುಮಾರ್‌, ವೆಚ್ಚ ನೋಡಲ್‌ ಅಧಿಕಾರಿ ಎಸ್‌. ಉದಯಶಂಕರ್‌ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವೀಕ್ಷಕರ ಸಮ್ಮುಖದಲ್ಲಿ ಗಣಕೀಕೃತ ರ್‍ಯಾಂಡಮೈಸೇಷನ್‌ ಮೂಲಕ ತಂಡಗಳನ್ನಾಗಿ ರಚಿಸುವ ಕಾರ್ಯವನ್ನು ಎನ್‌ಐಸಿ ಅಧಿ ಕಾರಿಗಳು ನಿರ್ವಹಿಸಿದರು. ಮತ ಎಣಿಕೆ ಕೇಂದ್ರಗಳಿಗೆ ಭೇಟಿ: ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುತ್ತಿರುವ ಮತ ಎಣಿಕೆ ಕೇಂದ್ರಕ್ಕೆ ಎಲ್ಲ ವೀಕ್ಷಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪ್ರತಿ ಕ್ಷೇತ್ರಕ್ಕೆ ಗುರುತಿಸಲಾಗಿರುವ ಭದ್ರತಾ ಕೊಠಡಿಗಳು ಹಾಗೂ ಎಣಿಕೆ ಕೌಂಟರ್‌ಗಳನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next