Advertisement

ಕರಾವಳಿಯಲ್ಲಿ ‘ಬಾಹುಬಲಿ- 2’ಕಮಾಲ್‌

09:13 PM Apr 27, 2017 | Karthik A |

ಮಹಾನಗರ: ‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ’ ಎಂಬುದೇ ಎಲ್ಲರ ಪ್ರಶ್ನೆ. ಕೆಲವರು ಬೇರೆ ಬೇರೆ ರೀತಿಯಲ್ಲಿ ಉತ್ತರ ಹುಡುಕಿದರೆ, ಇನ್ನು ಕೆಲವರು ಬೇರೆ ಬೇರೆ ಕಾರಣಗಳನ್ನು ಕೊಡಲಾರಂಭಿಸಿದರು. ಇಂತಹ ‘ಡೌಟ್‌’ಗಳಿಗೆ ನಿಜವಾದ ಉತ್ತರ ನೀಡುವ ‘ಬಾಹುಬಲಿ- 2’ರ ಅಬ್ಬರ ಕರಾವಳಿಯಲ್ಲೂ ಜೋರಾಗಿದೆ. ಬಹುನಿರೀಕ್ಷೆಯ ‘ಬಾಹುಬಲಿ-2’ ಸಿನೆಮಾ ಇಂದಿನಿಂದ ತೆರೆಗೆ ಬರಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಸಿನೆಮಾ ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿಯೇ ಉಭಯ ಜಿಲ್ಲೆಗಳ 4 ಮಲ್ಟಿಪ್ಲೆಕ್ಸ್‌ ಹಾಗೂ 9 ಥಿಯೇಟರ್‌ ಸೇರಿ ಒಟ್ಟು 14 ಚಿತ್ರಮಂದಿರಗಳಲ್ಲಿ 113 ಪ್ರದರ್ಶನಗಳು ನಡೆಯಲಿವೆ. ಇದು ಕರಾವಳಿಯಲ್ಲಿ ಇನ್ನೊಂದು ಹೊಸ ದಾಖಲೆ  ನಿರ್ಮಿಸಲಿದೆ.

Advertisement

ಮಂಗಳೂರಿನ ಸಿನೆಪೊಲಿಸ್‌, ಬಿಗ್‌ ಸಿನೆಮಾಸ್‌, ಪಿವಿಆರ್‌ ಹಾಗೂ ಮಣಿಪಾಲದ ಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ 74 ಶೋ ಇರಲಿದೆ. ಪಾಂಡೇಶ್ವರದ ಪಿವಿಆರ್‌ನ 6 ಸ್ಕ್ರೀನ್‌ಗಳಲ್ಲಿ, 24 ಶೋ, ಭಾರತ್‌ಮಾಲ್‌ನ ಬಿಗ್‌ ಸಿನೆಮಾಸ್‌ನ 5 ಸ್ಕ್ರೀನ್‌ನಲ್ಲಿ 21 ಶೋ ಇದ್ದರೆ, ಸಿಟಿಸೆಂಟರ್‌ನ ಸಿನೆಪೊಲಿಸ್‌ನ 5 ಸ್ಕ್ರೀನ್‌ಗಳಲ್ಲಿ 18 ಶೋಗಳಿವೆ. ಐನಾಕ್ಸ್‌ ನಲ್ಲಿ 11 ಶೋಗಳಿವೆ.
ಉಳಿದಂತೆ ಉಭಯ ಜಿಲ್ಲೆಗಳ 9 ಥಿಯೇಟರ್‌ನಲ್ಲಿ 35 ಶೋ ಇರಲಿದೆ. ಮಂಗಳೂರಿನ ಜ್ಯೋತಿ ಸಿನೆಮಾ ಮಂದಿರದಲ್ಲಿ 4 ಶೋಗಳಿದ್ದು, ಸುರತ್ಕಲ್‌ನ ನಟರಾಜ್‌ ಥಿಯೇಟರ್‌ನಲ್ಲಿ 4, ಸುಳ್ಯದ ಸಂತೋಷ್‌ನಲ್ಲಿ 4, ಮೂಡಬಿದ್ರೆಯ ಅಮರಶ್ರೀಯಲ್ಲಿ 3, ಬೆಳ್ತಂಗಡಿಯ ಭಾರತ್‌ನಲ್ಲಿ 4, ಪುತ್ತೂಧಿರಿನ ಅರುಣಾ ಥಿಯೇಟರ್‌ನಲ್ಲಿ 4 ಶೋ ಇರಲಿದೆ. ಉಳಿದಂತೆ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರಿನಲ್ಲೂ ತಲಾ ನಾಲ್ಕು ಪ್ರದರ್ಶನಗಳಿವೆ. ಚಿತ್ರದ ಅವಧಿ ಸ್ವಲ್ಪ ಜಾಸ್ತಿ ಇರುವುದರಿಂದ ಜ್ಯೋತಿ ಸೇರಿದಂತೆ ಕೆಲವೆಡೆ ಅರ್ಧ ತಾಸು ಬೇಗ ಆರಂಭವಾಗಲಿದೆ. ಬೆಳಗ್ಗೆ 10 ರ ಪ್ರದರ್ಶನ 9.30ಕ್ಕೆ ಆರಂಭ.

ಬಾಹುಬಲಿ ಹಂಚಿಕೆದಾರರು ಹಾಗೂ ಮಲ್ಟಿಪ್ಲೆಕ್ಸ್‌ ಮಧ್ಯೆ ನಡೆದ ದರ ನಿಗದಿಯ ಬಗ್ಗೆ ಸೂಕ್ತ ತೀರ್ಮಾನ ಆಗದ ಕಾರಣ ಬುಧವಾರ ಸಂಜೆಯವರೆಗೂ ಮಂಗಳೂರು, ಉಡುಪಿ ಸೇರಿದಂತೆ ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ ನಡೆದಿರಲಿಲ್ಲ. ಹೊರರಾಜ್ಯ ಹಾಗೂ ಹೊರದೇಶದಲ್ಲಿ ಬುಕ್ಕಿಂಗ್‌ ನಡೆದಿತ್ತು. ಕರಾವಳಿ ಭಾಗದ ಸಿಂಗಲ್‌ ಥಿಯೇಟರ್‌ ಹೊರತುಪಡಿಸಿ, ಮಲ್ಟಿಪ್ಲೆಕ್ಸ್‌ ನಲ್ಲಿ ಗುರುವಾರ ಬೆಳಗ್ಗೆಯಿಂದ ಮುಂಗಡ ಬುಕ್ಕಿಂಗ್‌ ಶುರುವಾಗಿತ್ತು.

ಪ್ರೀಮಿಯರ್‌ ಶೋ ಹೌಸ್‌ಫುಲ್‌
ಬಾಹುಬಲಿ-2 ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಗುರುವಾರ ರಾತ್ರಿಯೇ ಮಂಗಳೂರಿನ ಮೂರೂ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೀಮಿಯರ್‌ ಶೋ ನಡೆಯಿತು. ಪರಿಣಾಮವಾಗಿ ರಾತ್ರಿಯೇ ಬಹುತೇಕ ಜನರು ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಆನ್‌ಲೈನ್‌ ಮೂಲಕವೇ ಟಿಕೆಟ್‌ ಬುಕ್ಕಿಂಗ್‌ ಮಾಡಿ, ಚಿತ್ರ ವೀಕ್ಷಿಸಿ ಫೇಸ್‌ಬುಕ್‌, ವಾಟ್ಸಪ್‌ ಮೂಲಕ ಅಭಿಪ್ರಾಯ ಹರಿಯಬಿಟ್ಟಿದ್ದಾರೆ.

‘ಬಾಹುಬಲಿ’ ಅಬ್ಬರಕ್ಕೆ ಉಳಿದ ಚಿತ್ರಗಳು ಬಲಿ..!
ಬಾಹುಬಲಿ ದಾಂಗುಡಿ ಇಡುತ್ತಿದ್ದಂತೆ ಕನ್ನಡದ ಮಿತ್ರ ಅವರ ‘ರಾಗ’ ಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ಸ್ಯಾಂಡಲ್‌ವುಡ್‌ನ‌ಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕನ್ನಡಪರ ಹೋರಾಟಗಾರರು ಇದನ್ನು ವಿರೋಧಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಕರಾವಳಿ ಭಾಗದಲ್ಲೂ ಬಾಹುಬಲಿಯ ಪರಿಣಾಮವಾಗಿ ರಾಗ ಚಿತ್ರಕ್ಕೆ ಅವಕಾಶ ಸಿಗದಾಗಿದೆ. ಹಲವು ಶೋ ಕಾಣುತ್ತಿದ್ದ ಕಿರಿಕ್‌ ಪಾರ್ಟಿ, ರಾಜಕುಮಾರ ಕನ್ನಡ ಚಿತ್ರಕ್ಕೆ ಒಂದೆರಡು ಶೋ ಮಾತ್ರ ಲಭಿಸಿದೆ. ಉಳಿದಂತೆ ಕೊಂಕಣಿಯ ಯಶಸ್ವಿ ‘ಅಶೆಂ ಜಲೆಂ ಕಶೇಂ’ ಚಿತ್ರಕ್ಕೂ ಕೆಲವು ಥಿಯೇಟರ್‌ನಲ್ಲಿ 2-3 ಶೋಗಳಿಗೆ ಮಾತ್ರ ಅವಕಾಶ ದೊರಕಿದೆ. 

Advertisement

ಕೋಸ್ಟಲ್‌ವುಡ್‌ನ‌ಲ್ಲಿ ಎದ್ದಿತ್ತು ಪ್ರಶ್ನೆ…!
ಇತ್ತೀಚೆಗೆ ತೆರೆಕಂಡ ‘ಪಿಲಿಬೈಲ್‌ ಯಮುನಕ್ಕ’ ಚಿತ್ರದಲ್ಲಿ ಬಾಹುಬಲಿಯ ವಿಚಾರ ಬಹುಮುಖ್ಯ ಕಾಮಿಡಿಯಾಗಿ ಮೂಡಿಬಂದಿತ್ತು. ವಿಸ್ಮಯ ವಿನಾಯಕ್‌ ಅವರು, ಸತೀಶ್‌ ಬಂದಲೆ ಅವರಲ್ಲಿ ‘ಓ ಕಟ್ಟಪ್ಪ… ಬಾಹುಬಲಿನ್‌ ದಾಯೆ ಕೆರ್ನಿ’ ಎಂದು ಅಡಿಗಡಿಗೂ ಕೇಳಿದ ಪ್ರಶ್ನೆ ಕೋಸ್ಟಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸಿತ್ತು. ಇದೇ ಬೇಸ್‌ನಲ್ಲಿ ಸಾಗಿದ ಚಿತ್ರದ ಕಾಮಿಡಿ ಹಿಟ್‌ ಆಗಿತ್ತು. ಜತೆಗೆ ವಾಟ್ಸಪ್‌, ಫೇಸ್‌ಬುಕ್‌ನಲ್ಲೂ ಇದು ಪ್ರಶ್ನೆಯಾಗಿಯೇ ಚರ್ಚೆಗೆ ವೇದಿಕೆ ಒದಗಿಸಿತ್ತು.

ಟಿಕೆಟ್‌ ದರ 200 ರೂ. ಮೀರಿದೆ..!
ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್‌ ದರ 200 ರೂ.ಗೆ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆದರೆ ಅದು ತತ್‌ಕ್ಷಣದಿಂದ ಜಾರಿಯಾಗಲಿಲ್ಲ. ಪರಿಣಾಮವಾಗಿ ಬಾಹುಬಲಿಯ ಟಿಕೆಟ್‌ ದರ 200 ರೂ. ಮೀರಿದೆ. ಮಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಬಾಹುಬಲಿ 200, 230, 250, 300, 450 ರೂ.ಗಳಿಗೂ ಬುಕ್ಕಿಂಗ್‌ ಆಗಿದೆಯಂತೆ. ದರ ಏರಿಕೆ ಬಗ್ಗೆ ಪ್ರಶ್ನಿಸಿದರೆ, ನಮಗೆ ಸರಕಾರದ ಸೂಚನೆ ಕೈ ಸೇರಿಲ್ಲ ಎನ್ನುತ್ತಾರೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next