Advertisement

Desi Swara: Bahrain ಕನ್ನಡ ಸಂಘ; ಸ್ವಾತಂತ್ರ್ಯ ಉತ್ಸವ ಸಂಭ್ರಮಾಚರಣೆ

06:04 PM Aug 29, 2023 | Team Udayavani |

ಇಲ್ಲಿನ ಕನ್ನಡ ಸಂಘ ಬಹ್ರೈನ್‌ ವತಿಯಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.18ರಂದು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕನ್ನಡ ಭವನದಲ್ಲಿ ದೇಶಭಕ್ತಿಯ ಅಭಿಮಾನದೊಂದಿಗೆ, ಜನಸಮೂಹದಲ್ಲಿ ಉತ್ಸಾಹ ತುಂಬುವಂತೆ “ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಕನ್ನಡ ಭವನದ ಆಶಾ ಪ್ರಕಾಶ್‌ ಶೆಟ್ಟಿ ಸಭಾಂಗಣದಲ್ಲಿ ದೇಶಭಕ್ತಿಯು ತುಂಬಿತುಳುಕುತ್ತಿತ್ತು. ಸಂಘದ ಸದಸ್ಯರು ಮತ್ತು ಮಕ್ಕಳು, ಒಟ್ಟಾಗಿ ದೇಶಭಕ್ತಿಯ ಹಾಡುಗಳಿಗೆ ಆಕರ್ಷಕ ನೃತ್ಯ -ಗಾಯನ ಪ್ರದರ್ಶನಗಳನ್ನು ನೀಡಿದರು. ಈ ಕಾರ್ಯಕ್ರಮವು ಮಾತೃಭೂಮಿಯ ಬಗ್ಗೆ ಭಾರತೀಯರಲ್ಲಿ ಆಳವಾಗಿ ಬೇರೂರಿರುವ ಪ್ರೀತಿಯನ್ನು ಪ್ರದರ್ಶಿಸುವುದರೊಂದಿಗೆ, ನೆರೆದಿದ್ದ ಮುನ್ನೂರಕ್ಕೂ ಮಿಕ್ಕಿದ ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣವನ್ನೂ ನೀಡಿತು.

ವಿಶೇಷವಾಗಿ ಅಮೆರಿಕದ ಫಿಲಡೆಲ್ಫಿಯಾದಿಂದ ಅದರ ಕಲಾ ನಿರ್ದೇಶಕಿ ವಿಜಿ ರಾವ್‌ ನೇತೃತ್ವದ ಹೆಸರಾಂತ “ತ್ರಿ ಅಕ್ಷ ‘ ನಾಟ್ಯ ತಂಡದ 8 ಮಂದಿ ಪ್ರತಿಭಾನ್ವಿತ ಕಲಾವಿದರಿಂದ ಅಮೋಘವಾದ ಶಾಸ್ತ್ರೀಯ ನೃತ್ಯದ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಿತು. ಗಾಯಕಿ ಪ್ರತಿಮಾ ಅರುಣ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ದೇಶಭಕ್ತಿಗಾಯನ ಸುಂದರವಾಗಿ ಮೂಡಿಬಂತು.

ಸಂಘದ ಅಧ್ಯಕ್ಷರಾದ ಅಮರನಾಥ ರೈ ಹಾಗೂ ಪದಾಧಿಕಾರಿಗಳು ಸದಸ್ಯರ ಕುಟುಂಬಗಳಿಗೆ ಸ್ವಾತಂತ್ರÂ ದಿನಾಚರಣೆಯ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು. ಅನಂತರ ಮಾತನಾಡಿದ ಅಮರನಾಥ ರೈ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ ಅವರ ತ್ಯಾಗಬಲಿದಾನಗಳ ಕುರಿತು ಮಾತನಾಡಿದರು. ಕಳೆದ ಏಳು ದಶಕಗಳಲ್ಲಿ ಭಾರತದಲ್ಲಿ ಆಗಿರುವ ಪ್ರಗತಿ ಮತ್ತು ಭಾರತದ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಯುವ ಪೀಳಿಗೆಗೆ ಮಾತೃಭೂಮಿಯ ಐತಿಹ್ಯವನ್ನು ಪರಿಚಯಿಸಲು ಸಂಘದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಪ್ರಾಯೋಜಕರು, ಸ್ವಯಂಸೇವಕರು ಮತ್ತು ಇತರರಿಗೆ ಅವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್‌ ಕುಮಾರ್‌ ಶೆಟ್ಟಿಯವರು ತಮ್ಮ ಭಾಷಣದಲ್ಲಿ, ನೂತನ ಕನ್ನಡ ಭವನಕ್ಕೆ ಸಂಬಂಧಿಸಿದ ಬದ್ಧತೆಗಳನ್ನು ಪೂರೈಸುವಲ್ಲಿ ಮತ್ತು ಸಂಘದ ಗುರಿಗಳನ್ನು ಸಾಧಿಸಲು ಸಂಘದ ಸದಸ್ಯರು ಸಮಿತಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಮಹತ್ವವನ್ನು ಒತ್ತಿ ಹೇಳಿದರು.

Advertisement

ಹಿರಿಯ ಸದಸ್ಯರಾದ ಆನಂದ್‌ ಲೋಬೋ ಅವರು ಭವನ ಮತ್ತು ಸಂಘದ ಮುಂದಿರುವ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು ಮಾತನಾಡಿ, ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದರು.

ಈ ವೇಳೆ ತ್ರಿ ಅಕ್ಷ ನಾಟ್ಯ ತಂಡ ಅಮೆರಿಕ ನೃತ್ಯಗಾರ್ತಿಯರನ್ನು ಹಾಗೂ ನೃತ್ಯ ನಿರ್ದೇಶಕಿ ವಿಜಿ ರಾವ್‌ ಅವರನ್ನು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಕನ್ನಡ ಸಂಘಕ್ಕೆ ಅಭಿನಂದನೆ ಹೇಳಿದರು. ಜತೆಗೆ ಬಹ್ರೈನ್‌ನಲ್ಲಿ 28ವರ್ಷಗಳ ಕಾಲ ಉದ್ಯೋಗಿಯಾಗಿದ್ದು ಇದೀಗ ತಾಯ್ನಾಡಿಗೆ ಮರಳಲು ಇಚ್ಛಿಸಿರುವ ಸಂಘದ ಸದಸ್ಯರಾದ ಶ್ರೀಪತಿ ಆಚಾರ್ಯ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಸಾಂಸ್ಕೃತಿಕ ಯಶಸ್ಸಿಗೆ ಸಹಕರಿಸಿದ ಜಯರಾಜ್‌ ಭಂಡಾರಿ, ಮಂಗಳೂರು ಮೋಹನ್‌ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಅಂಪಾರು ಅವರನ್ನು ಸಮ್ಮಾನಿಸಲಾಯಿತು. ಸಂಘದ ಸದಸ್ಯರಾದ ನಮಿತಾ ಸಾಲ್ಯಾನ್‌, ಪ್ರೀತಮ್‌ ಆಚಾರ್ಯ ಇವರು ಸದಸ್ಯ ಪರಿವಾರದ ನೃತ್ಯಗಳು ಆಕರ್ಷಕವಾಗಿ ಮೂಡಿಬರುವಂತೆ ನಿರ್ದೇಶಿಸಿ ಉತ್ಸವ ದ ಯಶಸ್ಸಿಗೆ ಕಾರಣರಾದರು. ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜೆಪ್ಪು ಈ ಕಲಾತ್ಮಕ ಸಂಜೆಯ ನಾಟ್ಯ, ಗಾನ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.

ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್‌ ಅಮ್ಮೆನಡ್ಕ ಸ್ವಾಗತಿಸಿ, ನಿರ್ವಹಿಸಿದರು. ಪ್ರತಿಮಾ ರಾಜ್‌ ನಿರೂಪಿಸಿದರು. ಸಂತೋಷ್‌ ಆಚಾರ್ಯ ವಂದಿಸಿದರು.

*ವರದಿ: ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next