Advertisement

Desi Swara: ಬಹ್ರೈನ್‌ ಕನ್ನಡ ಸಂಘ: ಇಫ್ತಾರ್‌ ಕೂಟ

11:57 AM Mar 30, 2024 | Team Udayavani |

ಬಹ್ರೈನ್‌: ಇಲ್ಲಿನ ಕನ್ನಡ ಸಂಘವು ತನ್ನ ಸದಸ್ಯರುಗಳು ಹಾಗೂ ಇನ್ನಿತರ ಆಹ್ವಾನಿತ ಅತಿಥಿಗಳಿಗಾಗಿ ಪವಿತ್ರ ರಮ್ಜಾನ್‌ ತಿಂಗಳ ಶುಕ್ರವಾರದ ಸಂಜೆ ಮನಾಮದಲ್ಲಿರುವ ಕನ್ನಡ ಭವನದ ಸಭಾಂಗಣದಲ್ಲಿ ಇಫ್ತಾರ್‌ ಕೂಟವೊಂದನ್ನು ಏರ್ಪಡಿಸಿದ್ದು ಸಂಘದ ಸದಸ್ಯರು, ಆಹ್ವಾನಿತರೂ ಸೇರಿದಂತೆ ನೂರಾರು ಜನರು ಈ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದರು.

Advertisement

ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್‌ ರೈ ಹಾಗೂ ಆಡಳಿತ ಮಂಡಳಿಯ ಇತರ ಪಧಾದಿಕಾರಿಗಳು ಇಫ್ತಾರ್‌ ಕೂಟಕ್ಕೆ ಆಗಮಿಸಿದಂತಹ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡರು.

ಇಲ್ಲಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರ ಭಾರತೀಯ ಸಮುದಾಯದ ಗಣ್ಯರುಗಳು ಈ ಇಫ್ತಾರ ಕೂಟದಲ್ಲಿ ಭಾಗಿಯಾಗಿ ಸರ್ವಧರ್ಮ ಸಮಾನವೆಂಬ ಸಾಮರಸ್ಯವನ್ನು ತೋರಿದರು.

ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಗಳಾದಂತಹ ರಾಂಪ್ರಸಾದ್‌ ಅಮ್ಮೆನಡ್ಕ ಅವರು ನೆರೆದವರನ್ನು ಇಫ್ತಾರ್‌ ಕೂಟಕ್ಕೆ ಸ್ವಾಗತಿಸಿ ರಮ್ಜಾನ್‌ನ ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಅಮರನಾಥ್‌ ರೈ ಅವರು ಮಾತನಾಡಿ ತಮ್ಮ ಕರೆಗೆ ಓಗೊಟ್ಟು ಇಷ್ಟೊಂದು ಸಂಖ್ಯೆಯಲ್ಲಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.

ಈ ಇಫ್ತಾರ್‌ ಕೂಟದ ಮುಖ್ಯ ಅತಿಥಿಗಳಾಗಿ ಇಲ್ಲಿನ ಭಾರತೀಯ ದೂತಾವಾಸದ ಎರಡನೇ ಕಾರ್ಯದರ್ಶಿಗಳಾದ ಗಿರೀಶ್‌ ಚಂದ್ರ ಪೂಜಾರಿ, ಕ್ಯಾಪಿಟಲ್‌ ಗವರ್ನರೇಟ್‌ನ ನಿರ್ದೇಶಕರಾದ ಯೂಸಫ್ ಲೋರಿಯವರು ಉಪಸ್ಥಿತರಿದ್ದು ಶುಭ ಹಾರೈಸಿದರು. ವಾಗ್ಮಿಗಳಾದಂತಹ ಜನಾಬ್‌ ಮೊಹಮ್ಮದ್‌ ಮುಜಾಹಿದ್‌ ಹಾಗೂ ಜನಾಬ್‌ ಶಹೀದ್‌ ಚೌಧರಿಯವರು ರಮ್ಜಾನ್‌ ತಿಂಗಳಲ್ಲಿ ಉಪವಾಸದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

Advertisement

ವೇದಿಕೆಯಲ್ಲಿ ಬಹ್ರೈನ್‌ ಕ್ರಿಕೆಟ್‌ ಫೆಡರೇಶನ್‌ನ ಸಲಹಾ ಮಂಡಳಿಯ ಅಧ್ಯಕ್ಷರಾದ ಮೊಹಮ್ಮದ್‌ ಮನ್ಸೂರ್‌, ಸೆಂಟ್ರಲ್‌ ಕೆಫೆ ಹೊಟೇಲ್‌ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್‌ ಶೆಟ್ಟಿ, ಕನ್ನಡ ಸಂಘದ ಉಪಾಧ್ಯಕ್ಷರಾದ ಮಹೇಶ್‌ ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತಿಥಿ ಗಣ್ಯರುಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಉಪವಾಸ ಬಿಡುವ ಸಮಯದ ಪ್ರಾರ್ಥನೆಯಾಗುತ್ತಿದ್ದಂತೆಯೇ ನೆರೆದವರೆಲ್ಲರೂ ಹಣ್ಣು, ಹಂಪಲು ಹಾಗೂ ನೀರಿನ ಸೇವನೆಯೊಂದಿಗೆ ಇಫ್ತಾರ್‌ ಕೂಟಕ್ಕೆ ಚಾಲನೆ ನೀಡಿದರು. ಅನಂತರ ವಿಶೇಷವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸರ್ವಧರ್ಮ ಸಮನ್ವಯ ಎಂಬ ಕನ್ನಡ ಸಂಘದ ಮೂಲ ಮಂತ್ರದಂತೆಯೇ ಸದಸ್ಯರುಗಳು ಒಂದಾಗಿ ಈ ಇಫ್ತಾರ್‌ ಕೂಟದಲ್ಲಿ ಭಾಗಿಯಾಗಿ ಸೌಹಾರ್ದತೆಯನ್ನು ಮೆರೆದರು.

ವರದಿ – ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next