ಕತಾರ್: ಕತಾರಿನಲ್ಲಿರುವ ಭಾರತೀಯ ದೂತಾವಾಸದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು (ಐಸಿಸಿ) ಪವಿತ್ರ ರಮ್ಜಾನ್ ಮಾಸದ ಪ್ರಯುಕ್ತ ಅವಳಿಗೆ ಇಫ್ತಾರ್ ಎಂಬ ಕಾರ್ಯಕ್ರಮವನ್ನು ಮಹಿಳೆಯರಿಗೆ ಹಮ್ಮಿಕೊಂಡಿತ್ತು.
ಐಸಿಸಿ ಮಹಿಳೆಯರ ಒಕ್ಕೂಟವು ಈ ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟಿತು. ಐಸಿಸಿಯ ಅಶೋಕಾ ಸಭಾಂಗಣವನ್ನು ಈ ವಿಶೇಷ ಆಚರಣೆಗೆ ಅಲಂಕೃತಗೊಳಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ದೂತವಾಸದ ಪ್ರಥಮ ಕಾರ್ಯದರ್ಶಿಯಾದ ಡಾ| ವೈಭವ್ ತಾಂಡಾಲೆ ಹಾಗೂ ಅವರ ಧರ್ಮಪತ್ನಿ ಡಾ| ಮನೀಷಾ ತಂಡಾಳೆ ಅವರು ಉಪಸ್ಥಿತರಿದ್ದರು.
ಐಸಿಸಿ ಅಧ್ಯಕ್ಷರಾದ ಎ. ಪಿ. ಮಣಿಕಂಠನ್ ಅವರು ಸಮಸ್ತ ಸಭಿಕರನ್ನು ಸ್ವಾಗತಿಸಿದರು. ಡಾ| ವೈಭವ್ ಅವರು ಮಾತನಾಡಿ, ಪವಿತ್ರ ರಮ್ಜಾನ್ ತಿಂಗಳಿನ ಮಹತ್ವವನ್ನು ಹೇಳಿ ಎಲ್ಲರಿಗೂ ರಮ್ಜಾನ್ ಹಬ್ಬದ ಶುಭಾಶಯ ಕೋರಿದರು. ಈ ವರ್ಷದ ರಮ್ಜಾನ್ ಹಬ್ಬವು ಆರೋಗ್ಯ ಹಾಗೂ ಸಂತೋಷವನ್ನು ತರಲೆಂದು ಹಾರೈಸಿದರು. ನೆರೆದಿದ್ದ ಸಭಿಕರಲ್ಲಿ ದುರ್ಬಲ ಮಹಿಳೆಯರು ಹಾಗೂ ಗೃಹ ಕೆಲಸದವರಿಗೆ ಡಾ| ವೈಭವ್ ಹಾಗೂ ಐಸಿಸಿ ಆಡಳಿತ ಸಮಿತಿಯ ಸದಸ್ಯರು ಸೇರಿ ವಿಶೇಷ ಕಾಣಿಕೆಯನ್ನು ನೀಡಿ ಗೌರವಿಸಿದರು.
ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು, ಪ್ರಧಾನ ಕಾರ್ಯದರ್ಶಿಯಾದ ಮೋಹನ್ ಕುಮಾರ್ ಅವರು ಹಾಗೂ ಭಾರತೀಯ ಮೂಲದ ಸಮಿತಿಗಳ ಅಧ್ಯಕ್ಷರುಗಳು, ಐಸಿಸಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ನಂದಿನಿ ಅಬ್ಟಾ ಗೌಣಿ ಹಾಗೂ ಐಸಿಸಿ ಆಡಳಿತ ಸಮಿತಿಯ ಸದಸ್ಯರು ಮತ್ತು ಮಹಿಳಾ ಒಕ್ಕೂಟದ ಆಡಳಿತ ಸಮಿತಿಯ ಸದಸ್ಯರು, ಸಮುದಾಯದ ನಾಯಕರು ಈ ಕಾರ್ಯಕ್ರಮವನ್ನು ತಮ್ಮ ಉಪಸ್ಥಿತಿಯೊಂದಿಗೆ ಹಾರೈಸಿದರು.