Advertisement

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

01:11 AM Nov 30, 2024 | Team Udayavani |

ಬೆಂಗಳೂರು: ಬಗರ್‌ ಹುಕುಂ ಸಾಗುವಳಿ ಯೋಜನೆಯಡಿ ಅರ್ಜಿಹಾಕಿರುವವರಿಗೆ ಸರಕಾರ ಸಿಹಿ ಸುದ್ದಿ
ನೀಡಿದ್ದು, ಅರ್ಹ 1.26 ಲಕ್ಷ ಅರ್ಜಿಗ ಳಿಗೆ ಸಂಬಂಧಿಸಿದಂತೆ ಮುಂದಿನ ವಾರ ದಿಂದಲೇ ಸಾಗುವಳಿ ಚೀಟಿ ಕೊಡಲು ಆರಂಭಿಸುವುದಾಗಿ ಘೋಷಿಸಿದೆ.

Advertisement

ಈ ಸಂಬಂಧ 1.68 ಲಕ್ಷ ಮಂದಿ ಅರಣ್ಯ ಭೂಮಿಗೆ ಅರ್ಜಿ ಹಾಕಿದ್ದರೆ, ವಿಚಿತ್ರವೆಂದರೆ ಸಾಗುವಳಿಯನ್ನೇ ಮಾಡದ 1 ಲಕ್ಷ ಜನ ಅರ್ಜಿ ಹಾಕಿದ್ದಾರೆ ಎಂಬುದು ಗೊತ್ತಾಗಿದೆ. ಅಲ್ಲದೆ ಒಟ್ಟಾರೆಯಾಗಿ 6 ಲಕ್ಷದಷ್ಟು ಅರ್ಜಿಗಳನ್ನು ಪ್ರಾಥಮಿಕ ಹಂತದಲ್ಲಿ ಅನರ್ಹ ಮಾಡಲಾಗಿದೆ. ಆದರೆ ಕಂದಾಯ ಇಲಾಖೆಗೆ ಇನ್ನೂ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ.

ಶುಕ್ರವಾರ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.

ಅನರ್ಹ ಅರ್ಜಿಗಳು
18 ವರ್ಷ ತುಂಬದವರು- 29,051 ಸಾವಿರ ಅರ್ಜಿಗಳು
4.38 ಎಕರೆಗೂ ಹೆಚ್ಚು ಭೂಮಿ ಹೊಂದಿದವರು- 26,922 ಅರ್ಜಿಗಳು
ಕೆರೆ, ರಸ್ತೆಯಂತಹ ಬಿ ಖರಾಬು ಪ್ರದೇಶಗಳಿಗೆ ಅರ್ಜಿ ಹಾಕಿದವರು – 40,799
ಅರಣ್ಯ ಭೂಮಿಗೆ ಅರ್ಜಿ ಹಾಕಿದವರು- 1,68,111
ಬಫ‌ರ್‌ ಜೋನ್‌ಗಾಗಿ ಅರ್ಜಿ ಸಲ್ಲಿಸಿದವರು- 68,561
ತಾಲೂಕಿನ ನಿವಾಸಿ ಅಲ್ಲದವರಿಂದ ಸಲ್ಲಿಕೆಯಾದ ಅರ್ಜಿಗಳು- 8,665
ಸಾಗುವಳಿ ಮಾಡದವರು- 1.04 ಲಕ್ಷ ಅರ್ಜಿ

ಇಂದಿನಿಂದ ದರಖಾಸ್ತು ಪೋಡಿ ಅಭಿಯಾನ
ರಾಜ್ಯದಲ್ಲಿ ಸುಮಾರು 25 ಲಕ್ಷ ರೈತ ಕುಟುಂಬಗಳಿಗೆ 1.96 ಲಕ್ಷ ಸರಕಾರಿ ಸರ್ವೇ ನಂಬರ್‌ಗಳಲ್ಲಿ ಮಂಜೂರಾಗಿರುವ ಜಮೀನಿನ ತಿದ್ದುಪಡಿಗಾಗಿ ನ. 30ರಿಂದ ಹಾಸನದಲ್ಲಿ ದರಖಾಸ್ತು ಪೋಡಿ ದುರಸ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದುಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಪೋಡಿ ದುರಸ್ತಿಗಾಗಿ ಆನ್‌ಲೈನ್‌ ಆ್ಯಪ್‌ನಲ್ಲಿ ಪಹಣಿಯ ನಮೂನೆ 1-5 ಹಾಗೂ 6-10 ಅಳವಡಿಸಿದ್ದು, 1.96 ಲಕ್ಷ ಸರ್ವೇ ನಂಬರ್‌ ಪೈಕಿ 27,107 ಸರ್ವೇ ನಂಬರ್‌ಗಳಿಗೆ ನಮೂನೆ 1-5 ಪ್ರಕ್ರಿಯೆ ಪೂರ್ಣಗೊಳಿಸಿ ಕಡತಗಳನ್ನು ಸೃಷ್ಟಿಸಲಾಗಿದೆ ಎಂದರು.

ಬಗರ್‌ಹುಕುಂ ಯೋಜನೆಯಡಿ ಸಲ್ಲಿಕೆಯಾಗಿದ್ದ ಲಕ್ಷಾಂತರ ಅರ್ಜಿಗಳ ಪೈಕಿ 1.26 ಲಕ್ಷ ಅರ್ಹರು ಸಿಕ್ಕಿದ್ದು, ಸುಮಾರು 6 ಲಕ್ಷದಷ್ಟು ಅನರ್ಹ ಅರ್ಜಿಗಳಿವೆ. ಅನರ್ಹ ಅರ್ಜಿಗಳ ಪರಿಶೀಲನೆ ಜತೆಗೆ ಅರ್ಹರ ಅರ್ಜಿಗಳನ್ನು ಒಂದು ವಾರದಲ್ಲಿ ಬಗರ್‌ಹುಕುಂ ಸಮಿತಿ ಮುಂದೆ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪೋಡಿ, ಪಹಣಿ, ನೋಂದಣಿ
1.26 ಲಕ್ಷ ಅರ್ಹ ಪ್ರಕರಣಗಳ ಪೈಕಿ ಕನಿಷ್ಠ 5 ಸಾವಿರ ಅರ್ಜಿಗಳನ್ನು ಡಿ. 15ರೊಳಗಾಗಿ ಬಗರ್‌ ಹುಕುಂ ಸಮಿತಿ ಮಂಡಿಸಬೇಕು ಎಂದು ಸೂಚಿಸಿದ್ದು, ಅಷ್ಟರೊಳಗಾಗಿ ಸ್ಥಳ ಪರಿಶೀಲನೆ (ಫೀಲ್ಡ್‌ ವೆರಿಫಿಕೇಶನ್‌), ಕಂದಾಯ ನಿರೀಕ್ಷಕ, ಶಿರಸ್ತೇದಾರ್‌, ತಹಶೀಲ್ದಾರ್‌ ವರದಿಗಳ ಮಂಡನೆಯನ್ನೂ ಮಾಡಬೇಕು. ಒಂದು ಬಾರಿ ಬಗರ್‌ಹುಕುಂ ಸಮಿತಿ ಮುಂದೆ ಅರ್ಜಿ ಬಂದರೆ ಪೋಡಿ ಮಾಡಿ, ಪಹಣಿಯಲ್ಲಿ (ಆರ್‌ಟಿಸಿ) ನಮೂದಿಸಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರರೇ ನೋಂದಣಿಯನ್ನೂ ಮಾಡಿಸಿ ಸಾಗುವಳಿ ಚೀಟಿ ಕೊಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

6 ಲಕ್ಷಕ್ಕೂ ಅಧಿಕ ಅನರ್ಹ ಅರ್ಜಿ
ಸಾಗುವಳಿ ಮಾಡುವ ದಿನಾಂಕಕ್ಕೆ 18 ವರ್ಷ ತುಂಬದವರು, ಅರಣ್ಯ ಭೂಮಿ, ಬಿ ಖರಾಬು, ಬಫ‌ರ್‌ ಜೋನ್‌ನಲ್ಲಿ ಸಾಗುವಳಿ ಮಾಡುವವರು, ತಾಲೂಕಿನ ನಿವಾಸಿಗಳೇ ಅಲ್ಲದವರು, ಕೃಷಿಕರೇ ಅಲ್ಲದವರು ಕೂಡ ಹಾಕಿದ್ದ ಅರ್ಜಿಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಒಂದು ವೇಳೆ ಈಗ ಅನರ್ಹಗೊಂಡಿರುವ ಅರ್ಜಿದಾರರು ತಮ್ಮ ಅರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದಲ್ಲಿ ಪರಿಶೀಲನೆಗೆ ಒಳಪಡಿಸಿ ಮುಂದಿನ ಕ್ರಮ ಜರಗಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಏನಿದು ಬಗರ್‌ ಹುಕುಂ ಸಾಗುವಳಿ?
ಯಾವುದೇ ಕಾನೂನು ಹಕ್ಕು ಇಲ್ಲದೆ ಕಂದಾಯ ಇಲಾಖೆ ಅಡಿಯಲ್ಲಿನ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡು ಕೆಲವರು ಸಾಗುವಳಿ ಮಾಡುತ್ತಿರುತ್ತಾರೆ. ಈಗ ಅಂತಹ ಭೂಮಿಗಳಿಗೆ 108 ಸಿ (1) ಅಡಿಯಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳ ಅನುಸಾರ ಅರ್ಜಿ ಸಲ್ಲಿಸಿ ಬಗರ್‌ ಹುಕುಂ ಭೂಮಿಯಾಗಿ ಸಕ್ರಮ ಮಾಡಿಕೊಳ್ಳುವುದನ್ನು ಬಗರ್‌ಹುಕುಂ ಎಂದು ಕರೆಯುತ್ತಾರೆ.

746 ಸರ್ವೇಯರ್‌ ನೇಮಕಕ್ಕೆ ಕ್ರಮ
ರಾಜ್ಯದಲ್ಲಿ ಸರ್ವೇಯರ್‌ಗಳ ಕೊರತೆ ಇರುವುದು ನಿಜ. ಮಂಜೂರಾಗಿದ್ದ 34 ಎಡಿಎಲ್‌ಆರ್‌ ಹಾಗೂ 746 ಸರ್ಕಾರಿ ಸರ್ವೇಯರ್‌ಗಳ ನೇಮಕಾತಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಪರವಾನಿಗೆ ಹೊಂದಿದ 1191 ಸರ್ವೇಕ್ಷಣ ಸಿಬಂದಿ ಯನ್ನು (ಲೈಸನ್ಸಡ್‌ ಸರ್ವೇಯರ್‌) ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿ
ಕೊಂಡಿದ್ದು, ಇನ್ನೂ 1 ಸಾವಿರ ಲೈಸನ್ಸಡ್‌ ಸರ್ವೇಯರ್‌ಗಳ ನೇಮಕಕ್ಕೂ ಸೂಚಿಸಲಾಗಿದೆ. ಕಾರ್ಯಭಾರದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next