ಬಾಗಲಕೋಟೆ: ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಪಕ್ಷಕ್ಕೆ ಬಹುದೊಡ್ಡ ಮತ ಬರುವಲ್ಲಿ ಗಮನ ಸೆಳೆದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಸೋತ ನೋವಿನಲ್ಲೂ ಗೆದ್ದ ಅಭ್ಯರ್ಥಿಯನ್ನು ಅಭಿನಂದಿಸುವ ಜತೆಗೆ ಕಾಲಿಗೆ ಬಿದ್ದು ನಮಸ್ಕರಿಸಿದರು. ಹೌದು. ಬೆಳಗ್ಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಿವಿಧ ವಿಧಾನಸಭೆ ಕ್ಷೇತ್ರಗಳ ಎಣಿಕೆ ಕೊಠಡಿಗೆ ತೆರಳುತ್ತಿದ್ದರು.
ಆಗ ವೇಳೆ ಎದುರಾದ ಗದ್ದಿಗೌಡರನ್ನು ಕಂಡ ಕೂಡಲೇ ಸರ್ ಆರಾಮ್ ಅದೀರಿ ಎಂದು ಕಾಲಿಗೆ ಕೈಮುಟ್ಟಿ ನಮಸ್ಕರಿಸಿದರು. ಈ ವೇಳೆ ಬೇಡಮ್ಮ ಎಂದು ಗದ್ದಿಗೌಡರು ಅಷ್ಟೇ ವಿನಯವಾಗಿ ಬಾಗಿ ಕೈ ಹಿಡಿದು ನಮಸ್ಕರಿಸಿದರು. ನಂತರ ಫಲಿತಾಂಶ ಬಂದ ಬಳಿಕ ಗದ್ದಿಗೌಡರನ್ನು ಹುಡುಕಿಅವರತ್ತ ಹೋದ ಸಂಯುಕ್ತಾ ಪಾಟೀಲ ಸರ್ ನಿಮಗೆ ಅಭಿನಂದನೆಗಳು ಎಂದು ಮತ್ತೊಮ್ಮೆ ಕೈಮುಗಿದು ಕಾಲು ಬೀಳಲು ಪ್ರಯತ್ನಿಸಿದರು. ಆಗ ಗೌಡರು ಬೇಡಮ್ಮ ಎಂದು ತಡೆದರು.
ಗೆಲುವಿನ ನಗೆ ಬೀರಿದ್ದರು. ಈ ವೇಳೆ ಮಧ್ಯಾಹ್ನ 1-50ರ ಸಮಯ ದಾಟಿತ್ತು. ತಮ್ಮ ಕಾರ್ಯಕರ್ತರೊಂದಿಗೆ ಊಟ ಮಾಡಿ, ಪುನಃ ಮತ ಎಣಿಕೆ ಕೇಂದ್ರದತ್ತ ತೆರಳಿದರು.ಇನ್ನು ಪತ್ರಕರ್ತರು ಮಾತನಾಡಿಸಲು ಬಂದಾಗ, ಚುನಾವಣೆ ವೇಳೆ ಮಾತ್ರ ನಾನು ದೂರ ಇರುತ್ತೇನೆ. ಚುನಾವಣೆ ಮುಗಿದ ಬಳಿಕ ನಾನು ಸದಾ ನಿಮ್ಮೊಂದಿಗಿರುವೆ ಎಂದು ಹೇಳಿದರು.
ಮಳೆಯಲ್ಲೂ ಸಂಭ್ರಮ: ಬೆಳಗ್ಗೆ ಮತ ಎಣಿಕೆ ಕಾರ್ಯ ಆರಂಭದ ವೇಳೆ ಜಿಟಿಜಿಟಿಯಾಗಿ ಮಳೆ ಆರಂಭಗೊಂಡಿತ್ತು. ಬಳಿಕ 11ರ ಹೊತ್ತಿಗೆ ಬಿಸಿಲು ಜೋರಾಯಿತು. ಮತ ಎಣಿಕೆ ಪೂರ್ಣಗೊಳ್ಳುವ ಹೊತ್ತಿಗೆ ಜೋರಾಗಿ ಮಳೆ ಸುರಿಯಿತು. ಆಗ ಕೆಲ ಪತ್ರಕರ್ತ ಮಿತ್ರರು ಗದ್ದಿಗೌಡರ ಗೆಲುವಿಗೆ ಸಂಭ್ರಮಿಸಿದ ಮಳೆರಾಯ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇತ್ತ ಮಳೆಯಲ್ಲೂ ಬಿಜೆಪಿ
ಕಾರ್ಯಕರ್ತರು ಸಂಭ್ರಮಿಸಿದರು. ಮತ ಎಣಿಕೆ ನಡೆಯುವ ತೋಟಗಾರಿಕೆ ವಿಶ್ವ ವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್
ಇಲಾಖೆ ಎಲ್ಲವೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು.